ಡಾ. ಅಂಬೇಡ್ಕರ್‌ ಸಾಧನೆಯನ್ನು ಸಮಗ್ರವಾಗಿ ಅರಿಯಬೇಕು: ತುಕ್ರಪ್ಪ ಕೆಂಬಾರೆ

| Published : Feb 04 2024, 01:34 AM IST

ಡಾ. ಅಂಬೇಡ್ಕರ್‌ ಸಾಧನೆಯನ್ನು ಸಮಗ್ರವಾಗಿ ಅರಿಯಬೇಕು: ತುಕ್ರಪ್ಪ ಕೆಂಬಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಮೋಹನ್ ಕುಮಾರ್ ಮತ್ತು ಭರತ್ ಎಂ.ಜಿ. ಪ್ರಥಮ, ಶ್ರೀಮಂತ ದ್ವಿತೀಯ, ಯಲ್ಲಪ್ಪ ತೃತೀಯ ಬಹುಮಾನ ಪಡೆದರು. ಸಂವಿಧಾನದ ಕುರಿತ ಕ್ವಿಜ್ ಸ್ಪರ್ಧೆಯಲ್ಲಿ ನವೀನ ಕೆ. ಪ್ರಥಮ, ಸೋಮಲಿಂಗ ಮತ್ತು ಮುತ್ತುರಾಜ್ ದ್ವಿತೀಯ, ಉಲ್ಲಾಸ್ ಮತ್ತು ಈರಣ್ಣ ತೃತೀಯ ಬಹುಮಾನ ಪಡೆದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ‘ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ತುಕ್ರಪ್ಪ ಕೆಂಬಾರೆ, ಅಂಬೇಡ್ಕರ್ ಅವರ ಸಾಧನೆಯನ್ನು ಸಮಗ್ರವಾಗಿ ಅರಿತುಕೊಳ್ಳಬೇಕು. ಅಂಬೇಡ್ಕರ್ ಅವರ ಕಾಲದಲ್ಲಿ ಶೋಷಿತ ವರ್ಗದ ಜನರು ಗೌರವಯುತವಾಗಿ ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಅಂತಹ ಸ್ಥಿತಿಯಲ್ಲೂ ಅವರು ಅಮೆರಿಕ, ಇಂಗ್ಲೆಂಡ್‌ಗಳಿಗೆ ಹೋಗಿ ಅಧ್ಯಯನ ನಡೆಸಿದ್ದಾರೆ. ಅವರ ಸಾಧನೆಯ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ಚಿಂತಕ ಅರವಿಂದ ಚೊಕ್ಕಾಡಿ ಪ್ರಧಾನ ಉಪನ್ಯಾಸ ನೀಡಿ, ಅಂಬೇಡ್ಕರ್ ಅವರ ಜೀವನದ ಘಟನೆಗಳು ನಮಗೆಲ್ಲ ಪ್ರೇರಣಾದಾಯಿಯಾಗಿವೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ತತ್ವಗಳ ಮೂಲಕ ಸಾಮಾಜಿಕ ನ್ಯಾಯದ ಸಾಧನೆಯ ಮಾರ್ಗವನ್ನು ಅವರು ತೋರಿದರು. ಅಂಬೇಡ್ಕರ್ ಓದು ಎಂದರೆ ಅವರ ಬರಹಗಳನ್ನು ಮಾತ್ರ ಓದುವುದಲ್ಲ. ಅವರ ಬದುಕನ್ನೂ ಓದಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಶಾಲೆಯ ಪೋಷಕರ ಸಂಘದ ಅಧ್ಯಕ್ಷ ಪುರಂದರ ಅಧ್ಯಕ್ಷತೆಯನ್ನುವಹಿಸಿದ್ದರು. ಈ ಸಂದರ್ಭದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ‘ಅಂಬೇಡ್ಕರ್ ಬದುಕು- ಬರೆಹ ಪುಸ್ತಕ ಸಂಪುಟ’ ಗಳನ್ನು ನೀಡಲಾಯಿತು. ಅಂಬೇಡ್ಕರ್ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಮೋಹನ್ ಕುಮಾರ್ ಮತ್ತು ಭರತ್ ಎಂ.ಜಿ. ಪ್ರಥಮ, ಶ್ರೀಮಂತ ದ್ವಿತೀಯ, ಯಲ್ಲಪ್ಪ ತೃತೀಯ ಬಹುಮಾನ ಪಡೆದರು. ಸಂವಿಧಾನದ ಕುರಿತ ಕ್ವಿಜ್ ಸ್ಪರ್ಧೆಯಲ್ಲಿ ನವೀನ ಕೆ. ಪ್ರಥಮ, ಸೋಮಲಿಂಗ ಮತ್ತು ಮುತ್ತುರಾಜ್ ದ್ವಿತೀಯ, ಉಲ್ಲಾಸ್ ಮತ್ತು ಈರಣ್ಣ ತೃತೀಯ ಬಹುಮಾನ ಪಡೆದರು. ಅಂಬೇಡ್ಕರ್ ಬಗ್ಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಡಿ.ಆರ್. ನಿತಿನ್ ಕುಮಾರ್ ಪ್ರಥಮ, ಮಹಂತೇಶ ಎಂ.ಡಿ. ದ್ವಿತೀಯ, ಶ್ರೀಶೈಲ ಎಸ್. ಗಾಣಿಗೇರ ತೃತೀಯ ಬಹುಮಾನ ಪಡೆದರು. ನಾಗರಾಜಪ್ರಭು, ಮುತ್ತುರಾಜ್, ಅಶ್ವಿನಿ, ರೋಹಿಣಿ ಆರ್. ಜಿ. ಅವರು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಆಶಯಗಳನ್ನು ವೈಯಕ್ತಿಕ ಜೀವನದಲ್ಲಿ ಸಾಕಾರಗೊಳಿಸಿಕೊಂಡ ತುಕ್ರಪ್ಪ ಕೆಂಬಾರೆ ಅವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಕೆ. ಆರ್. ಗೋಪಾಲಕೃಷ್ಣ, ಶುಭದಾ ಮತ್ತು ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಸಲಾಯಿತು. ಸುಗಮ ಸಂಗೀತ ತಂಡಕ್ಕೆ ಶಾಲೆಯ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.