ಉಡುಪಿ: ಮನುಷ್ಯ ಜನ್ಮದಲ್ಲಿ ದೇವರ ಧ್ಯಾನ ಮಾಡುವುದು ಅತ್ಯಂತ ಅವಶ್ಯಕವಾಗಿದ್ದು, ವ್ಯರ್ಥ ಹರಟೆಯಲ್ಲಿ ಸಮಯ ಕಳೆಯುವ ಬದಲು ಭಕ್ತರು ಕೃಷ್ಣ ಮಂತ್ರ ಜಪದ ಮೂಲಕ ಪುಣ್ಯ ಸಂಪಾದಿಸಬೇಕು, ಈ ಹಿನ್ನೆಲೆಯಲ್ಲಿ ತಮ್ಮ ಪ್ರಥಮ ಪರ್ಯಾಯಾವಧಿಯಲ್ಲಿ ಭಕ್ತರಿಂದ ’ಶ್ರೀ ಕೃಷ್ಣ ಮಂತ್ರ ಜಪ ಯಜ್ಞ’ವನ್ನು ನಡೆಸಲು ಸಂಕಲ್ಪಿಸಿರುವುದಾಗಿ ಘೋಷಿಸಿದರು ಎಂದು ಪರ್ಯಾಯ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ​ಈ ಜಪ ಯಜ್ಞದ ವಿಶೇಷತೆಯ ಕುರಿತು ವಿವರಿಸಿ, ಭಕ್ತರು ಭಕ್ತಿಯಿಂದ ಮಂತ್ರ ಜಪ ಮಾಡಿ ಒಂದು ಹಂತದ ಸಂಖ್ಯೆಯನ್ನು ತಲುಪಿದ ಬಳಿಕ ಶ್ರೀಕೃಷ್ಣ ಮಠಕ್ಕೆ ಬಂದು ಅದನ್ನು ಗುರುಗಳ ಮುಖಾಂತರ ಶ್ರೀಕೃಷ್ಣನಿಗೆ ಅರ್ಪಿಸಬೇಕು. ಕೇವಲ ಮಂತ್ರ ಜಪ ಮಾತ್ರವಲ್ಲದೆ, ಭಕ್ತರು ಆ ಸಮಯದಲ್ಲಿ ತಮ್ಮಲ್ಲಿರುವ ಯಾವುದಾದರೂ ಒಂದು ದುಶ್ಚಟವನ್ನು ತ್ಯಾಗ ಮಾಡುವ ಸಂಕಲ್ಪ ಮಾಡಬೇಕು. ಈ ಮೂಲಕ ಆಧ್ಯಾತ್ಮಿಕ ಶಕ್ತಿಯೊಂದಿಗೆ ಸಮಾಜದಲ್ಲಿ ಸದ್ವರ್ತನೆಯನ್ನು ಬೆಳೆಸುವುದು ತಮ್ಮ ಆಶಯವಾಗಿದೆ ಎಂದರು.

ಮೇ 10 ಭಾನುವಾರ ಸಂಜೆ 5 ಗಂಟೆಗೆ ಇಸ್ಕಾನ್‌ನ ಶ್ರೀ ಚಂಚಲಪತಿ ದಾಸರು ಈ ಯೋಜನೆಯ ವೆಬ್‌ಸೈಟ್ ಉದ್ಘಾಟಿಸಲಿದ್ದಾರೆ ಎಂದು ಶ್ರೀಗಳು ಮಾಹಿತಿ ನೀಡಿದರು.

ಮಠದ ದಿವಾನ ಡಾ. ಉದಯ ಸರಳಾತ್ತಾಯ ಮಾತನಾಡಿ, ಈ ಜಪವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಈ ಜಪ ಬರೆಯುವ ಪುಸ್ತಕವನ್ನು ಶ್ರೀಮಠದಿಂದಲೇ ಕೊಡುವ ಸಂಕಲ್ಪ ಮಾಡಿದ್ದೇವೆ. ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳನ್ನು ಪ್ರಿಂಟ್ ಮಾಡಿಸಲಾಗುವುದು ಎಂದರು.

ಭಕ್ತರ ಅನುಕೂಲಕ್ಕೆ ಹೈಟೆಕ್ ‘ಕ್ಯೂ ಸಿಸ್ಟಮ್’:

ಮಠಕ್ಕೆ ಬರುವ ಭಕ್ತರು ಮಳೆ ಮತ್ತು ಬಿಸಿಲಿನಿಂದ ತೊಂದರೆ ಅನುಭವಿಸಬಾರದು ಎಂಬ ದೃಷ್ಟಿಯಿಂದ ಸುಸಜ್ಜಿತ ದರ್ಶನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಉದಯ ಸರಳತ್ತಾಯ ವಿವರಿಸಿದರು. ವಿಶೇಷ ದರ್ಶನಕ್ಕೆ ಪಾಸ್ ಗಳ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಪಾಸ್ ಒಂದಕ್ಕೆ 300 ರು. ನಿಗದಿ ಮಾಡಲಾಗಿದೆ. ನಿತ್ಯ ಬರುವ ಸ್ಥಳೀಯ ಭಕ್ತರು ಆ ಪಾಸ್ ಬಳಸಿ ನಿತ್ಯ ಕೃಷ್ಣನ ದರ್ಶನ ಮಾಡಬಹುದು ಎಂದರು.


ವಾಹನ ನಿಲುಗಡೆ ಪ್ರದೇಶದಿಂದ ಕಟ್ಟಿಗೆ ರಥದ ಪಕ್ಕದ ಮೂಲಕ ಮಧ್ವ ಸರೋವರದ ಅಂಚಿನಲ್ಲಿ ಮೂರು ಸಾಲುಗಳ ಸುಭದ್ರ ಸರತಿ ಸಾಲನ್ನು ನಿರ್ಮಿಸಲಾಗಿದೆ. ಈ ಸಾಲಿಗೆ ಮಳೆ-ಬಿಸಿಲು ತಾಗದಂತೆ ಸುಸಜ್ಜಿತ ಮೇಲ್ಛಾವಣಿ ಅಳವಡಿಸಲಾಗಿದ್ದು, ಬಾಯಾರಿದ ಭಕ್ತರಿಗೆ ತಂಪು ಪಾನೀಯ, ಲಗೇಜ್ ಕೊಠಡಿ ಹಾಗೂ ಹಣ್ಣು-ಕಾಯಿ ಅರ್ಪಿಸಲು ಪ್ರತ್ಯೇಕ ಮಳಿಗೆಗಳನ್ನು ಏರ್ಪಡಿಸಲಾಗಿದೆ. ವಿಶೇಷ ದರ್ಶನ ಬಯಸುವವರಿಗಾಗಿ ಕನಕ ಗೋಪುರದ ಮೂಲಕ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ನವಗ್ರಹ ಕಿಂಡಿಯ ಮೂಲಕ ಸಮಾಧಾನದಿಂದ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.