ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜು.17 ರಿಂದ 20 ರ ವರೆಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಪ್ರಥಮ ಬಾರಿಗೆ ಹವ್ಯಾಸಿ ಕಲಾತಂಡಗಳ ಚಾರಿತ್ರಿಕ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ, ಭರತನಾಟ್ಯ, ಕನ್ನಡ ನಾಡಗೀತೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ‘ಸಿರಿಬಾಗಿಲು ಯಕ್ಷ ವೈಭವ’ ಆಯೋಜಿಸಲಾಗಿದೆ.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಯೋಗದೊಂದಿಗೆ ‘ಕರ್ನಾಟಕ ಸಂಭ್ರಮ - 50 ಸವಿ ನೆನಪು: 2023-24’ ಮತ್ತು ಕಲಾಪೋಷಕರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜು.17ರಂದು ಬೆಳಗ್ಗೆ 10.30ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ, ಕಲಾಪೋಷಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ನಾಲ್ಕು ದಿನಗಳಲ್ಲಿ ಐದು ಜಿಲ್ಲೆಗಳಿಂದ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ 26 ಹವ್ಯಾಸಿ ಯಕ್ಷಗಾನ ತಂಡಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಸ್ಥಳೀಯ ಯುವ ಪ್ರತಿಭೆಗಳ ಭರತನಾಟ್ಯ, ಕನ್ನಡ ಭಾವಗೀತೆಗಳ ಗಾಯನ ಇರಲಿದೆ. ಜು. 20ರಂದು ಮಧ್ಯಾಹ್ನ 2 ಗಂಟೆಯಿಂದ ಸಿರಿಬಾಗಿಲು ಪ್ರತಿಷ್ಠಾನ ಪ್ರಕಾಶಿಸಿದ 7 ಗ್ರಂಥಗಳ ಕುರಿತಾದ ವಿಚಾರ ಸಂಕಿರಣ ನಡೆಯಲಿದೆ. ಶ್ರೀಧರ ಡಿ. ಎಸ್., ರಾಧಾಕೃಷ್ಣ ಉಳಿಯತ್ತಡ್ಕ, ರಾಧಾಕೃಷ್ಣ ಕಲ್ಚಾರ್, ಲಕ್ಷ್ಮಿ ಮಚ್ಚಿನ, ಡಾ. ನಾಗವೇಣಿ ಮಂಚಿ, ಕುಮಾರ ಸುಬ್ರಮಣ್ಯ ಮುಳಿಯಾಲ ಮತ್ತು ರಾಘವೇಂದ್ರ ಉಡುಪ ನೇರಳೆಕಟ್ಟೆಪುಸ್ತಕಗಳ ಬಗ್ಗೆ ವಿಮರ್ಶೆ ನಡೆಸಿಕೊಡಲಿದ್ದಾರೆ ಎಂದರು.ಸಮಾರೋಪ ಸಮಾರಂಭ ಸಂಜೆ 4 ಗಂಟೆಗೆ ನಡೆಯಲಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು, ಕೊಂಡೆಯೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು. ಪ್ರಸಂಗಕರ್ತ ಶ್ರೀಧರ ಡಿ.ಎಸ್., ವಿದ್ವಾಂಸ ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ, ಗಡಿನಾಡ ಸಂಗೀತ ವಿದ್ವಾನ್ ಶಕುಂತಲಾ ಕೆ. ಕುಂಚಿನಡ್ಕ ಅವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿ. ಕೆ. ಭಟ್ ಸೇರಾಜೆ ಅಭಿನಂದನಾ ಭಾಷಣ ಮಾಡುವರು. ಪ್ರತಿಷ್ಠಾನದ ಬೆಳವಣಿಗೆಗೆ ಸಹಕರಿಸಿದ ಗಣ್ಯರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು. .
ಯಕ್ಷಗಾನ ಕಲಾವಿದ ಡಾ.ಶ್ರುತಕೀರ್ತಿ ರಾಜ್ ಉಜಿರೆ, ಸಿರಿಬಾಗಿಲು ಪ್ರತಿಷ್ಠಾನದ ಹಿತೈಷಿ ಶಶಿಧರ ಕಾರಂತ, ಪ್ರತಿಷ್ಠಾನದ ಸದಸ್ಯರಾದ ಜಗದೀಶ ಕೆ. ಕೂಡ್ಲು, ಲಕ್ಷ್ಮಣ ಕುಮಾರ್ ಮರಕಡ ಇದ್ದರು.