ಪಾಶ್ಚಾತ್ಯರ ಅನುಕರಣೆ ಬಿಟ್ಟು ನಮ್ಮ ಸಂಸ್ಕೃತಿ ಅನುಸರಿಸಿ

| Published : May 14 2025, 12:10 AM IST

ಸಾರಾಂಶ

ಪಾಶ್ಚಾತ್ಯರ ಅನುಕರಣೆಯನ್ನು ಬಿಟ್ಟು, ನಮ್ಮ ಪ್ರಾಚೀನ ಶ್ರೀಮಂತ ಪರಂಪರೆಯನ್ನು ಇಂದಿನ ಯುವಜನರು ಎತ್ತಿ ಹಿಡಿಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ. ಯಾವುದೇ ಜಾತಿ, ಧರ್ಮ, ಜನಾಂಗದ ಭೇದವಿಲ್ಲದೆ ಸರ್ವರಿಗೂ ಆಶ್ರಯ, ಅನ್ನ, ಅಕ್ಷರವೆಂಬ ತ್ರಿವಿಧ ದಾಸೋಹ ಮಾಡುತ್ತಿರುವ ನಮ್ಮ ಮಠ ಮಾನ್ಯಗಳು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಾಶ್ಚಾತ್ಯರ ಅನುಕರಣೆಯನ್ನು ಬಿಟ್ಟು, ನಮ್ಮ ಪ್ರಾಚೀನ ಶ್ರೀಮಂತ ಪರಂಪರೆಯನ್ನು ಇಂದಿನ ಯುವಜನರು ಎತ್ತಿ ಹಿಡಿಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.

ಹಳೇಬೀಡು ಹೋಬಳಿಯ ಗೋಣಿಸೋಮನಹಳ್ಳಿಯ ಶ್ರೀ ಹುಲಿಕಲ್ಲು ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರುನಾಡನ್ನಾಳಿದ ಹೊಯ್ಸಳರು ಶಿಲೆಯಲ್ಲಿ ಕಲೆಯನ್ನು ಅರಳಿಸಿದ್ದಾರೆ. ಕಲಾಪರಂಪರೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಪರಂಪರೆ ಶ್ರೀಮಂತವಾಗಿದ್ದು, ಇದನ್ನು ಇಂದಿನ ಯುವಜನರಿಗೆ ತಿಳಿಹೇಳುವ ಅಗತ್ಯವಿದೆ ಎಂದರು.

ಸರ್ವರಿಗೂ ಸಮಪಾಲು, ಸಮಸಮಾಜದ ಕಲ್ಪನೆಯನ್ನು ಬಸವಾದಿ ಶರಣರು 12ನೇ ಶತಮಾನದಲ್ಲೇ ಪ್ರತಿಪಾದಿಸಿದರು, ಸಾಮಾಜಿಕ ಬದಲಾವಣೆಗೆ ಅವರು ನೀಡಿದ ಕೊಡುಗೆ ಅನುಪಮವಾದದ್ದು ಎಂದ ಅವರು, ಆಧುನಿಕ ಕರ್ನಾಟಕದ ಪ್ರಗತಿಗೆ ವೀರಶೈವ ಲಿಂಗಾಯತ ಮಠ ಮಾನ್ಯಗಳು ನೀಡಿರುವ ಕೊಡುಗೆಯೂ ಬಹಳಷ್ಟಿದೆ ಎಂದರು. ಯಾವುದೇ ಜಾತಿ, ಧರ್ಮ, ಜನಾಂಗದ ಭೇದವಿಲ್ಲದೆ ಸರ್ವರಿಗೂ ಆಶ್ರಯ, ಅನ್ನ, ಅಕ್ಷರವೆಂಬ ತ್ರಿವಿಧ ದಾಸೋಹ ಮಾಡುತ್ತಿರುವ ನಮ್ಮ ಮಠ ಮಾನ್ಯಗಳು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದರು.

ಸಂಸ್ಕೃತಿ ಬೆಳೆಸಲು ಕರೆ:ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿಸಬೇಕು. ಇಂದು ಯುವಜನರು ಮದ್ಯ, ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ತಾಯಂದಿರು ಮಕ್ಕಳಿಗೆ ಬಾಲ್ಯದಿಂದಲೇ ವಚನಗಳನ್ನು ಕಲಿಸಿದರೆ ಜೀವನದರ್ಶನ ಆಗುತ್ತದೆ. ಮಕ್ಕಳ ಬದುಕು ಹಸನಾಗುತ್ತದೆ ಎಂದರು. ಸುಂದರ ಬದುಕಿಗೆ ಸೋಪಾನ ಅರಣ್ಯ:ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಪ್ರತಿಪಾದಿಸಿದ ಈಶ್ವರ ಖಂಡ್ರೆ, ಕಾಡಿದ್ದರೆ ಮಳೆ ಆಗುತ್ತದೆ, ಕಾಡಿದ್ದರೆ ಹಸಿರು ಹೊದಿಕೆ ಹೆಚ್ಚುತ್ತದೆ, ಈ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿ ಸುಂದರ ಬದುಕಿಗೆ ಸೋಪಾನವಾಗುತ್ತದೆ ಎಂದರು. ನಮ್ಮ ಪೂರ್ವಿಕರು ಬೆಟ್ಟ, ಗುಡ್ಡಗಳ ಮೇಲೆ ದೇವಾಲಯ ನಿರ್ಮಿಸುವ ಮೂಲಕ ಪ್ರಕೃತಿ ಪರಿಸರ ಉಳಿಸಿದ್ದಾರೆ. ಬೆಟ್ಟದ ಮೇಲೆ ದೇವಾಲಯ ಇರುವ ಕಾರಣ ಆ ಗುಡ್ಡಗಳನ್ನು, ಬೆಟ್ಟಗಳನ್ನು ಯಾರೂ ನಾಶ ಮಾಡಿಲ್ಲ. ನಮ್ಮ ಪೂರ್ವಿಕರ ದೂರದರ್ಶಿತ್ವ ಅಮೂಲ್ಯವಾದ್ದು ಎಂದರು.

ತಾವು ಅರಣ್ಯ ಸಚಿವರಾದ ತರುವಾಯ 7ನೇ ಬಾರಿಗೆ ಹಾಸನ ಜಿಲ್ಲೆಗೆ ಬಂದಿದ್ದು, ಇಲ್ಲಿನ ಮಾನವ- ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡಿನ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯನೇತೃತ್ವ ವಹಿಸಿ ಮಾತನಾಡಿ,

ಹಳೇಬೀಡು -ಆಧುನಿಕ ಕರ್ನಾಟಕದ ಪ್ರಗತಿಗೆ ವೀರಶೈವ ಲಿಂಗಾಯತ ಮಠಮಾನ್ಯಗಳು ನೀಡಿರುವ ಕೊಡುಗೆಯಲ್ಲಿ ಯಾವುದೇ ಜಾತಿ, ಧರ್ಮ, ಜನಾಂಗದ ಭೇದವಿಲ್ಲದೆ ಸರ್ವರಿಗೂ ಆಶ್ರಯ, ಅನ್ನ, ಅಕ್ಷರವೆಂಬ ತ್ರಿವಿಧ ದಾಸೋಹ ಮಾಡುತ್ತಿರುವ ನಮ್ಮ ಮಠ ಮಾನ್ಯಗಳು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದರು.

ಉದ್ಯಮಿ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿ, ಹುಲಿಕಲ್ಲು ವೀರಭದ್ರೇಶ್ವರ ಕ್ಷೇತ್ರದಲ್ಲಿ ರುದ್ರಮುನಿ ಮಹರ್ಷಿಗಳು ಕಠಿಣ ತಪಸ್ಸು ಮಾಡಿದ್ದರು. ಕ್ಷೇತ್ರಕ್ಕೆ ಪ್ರಾಚೀನ ಪರಂಪರೆ ಇದೆ. ಬೆಟ್ಟದ ನಿಲಿಗಿರಿ ತಪ್ಪಲಿನಲ್ಲಿ ಎರಡು ಎಕರೆ ಜಾಗ ಕೊಟ್ಟರೆ ನಂದನವನ ಮಾಡುತ್ತೇವೆ. ಘಟ್ಟದಹಳ್ಳಿ ದಾಖಲೆಯಲ್ಲಿರುವ ಸರ್ಕಾರಿ ಭೂಮಿಯಲ್ಲಿ ೧೦ ಎಕರೆ ಜಮೀನನ್ನು ಹುಲಿಕಲ್ಲೇಶ್ವರ ಕ್ಷೇತ್ರಕ್ಕೆ ಕೊಡಿಸಬೇಕು. ಈ ನಿಟ್ಟಿನಲ್ಲಿ ಸಚಿವ ಈಶ್ವರಖಂಡ್ರೆ ಅವರ ಸಹಾಯ ಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ. ಸುರೇಶ್, ಮಾಜಿ ಶಾಸಕ ಲಿಂಗೇಶ್ ಮತ್ತಿತರರು ಪಾಲ್ಗೊಂಡಿದ್ದರು. ತಿಪಟೂರು ತಾಲೂಕು ಕೆರಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ, ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡಿನ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕೆರೆಗೊಂಡಿ ರಂಗಾಪುರ ಮಠದ ಗುರುಪುರ ದೇಶೀಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯ ಚಂದ್ರಶೇಖರ ಸ್ವಾಮೀಜಿ, ಚಿಕ್ಕನಾಯಕನಹಳ್ಳಿಯ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಕರಡಿಗವಿ ಶಿವಶಂಕರ ಶಿವಯೋಗಿ ಸ್ವಾಮೀಜಿ, ಕಲ್ಯಾಣನಗರ ಬಸವ ತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್, ಎಚ್.ಕೆ.ಕುಮಾರ ಸ್ವಾಮಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಇ.ಎಚ್.ಲಕ್ಷ್ಮಣ್, ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎ.ಎಸ್.ಬಸವರಾಜು, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ,ಗಂಗೂರು ಶಿವಕುಮಾರ್ ದೊಡ್ಡವೀರೇಗೌಡ, ಟ್ರಸ್ಟ್ ಪದಾಧಿಕಾರಿಗಳಾದ ಎಸ್.ವಿ.ಈಶ್ವರಪ್ಟ, ಜಿ.ವಿ.ವಿಶ್ವನಾಥ್, ಬಸವಲಿಂಗಪ್ಪ, ಕಾಂತರಾಜು ಪಾಲ್ಗೊಂಡಿದ್ದರು. ಪುರೋಹಿತ್ ವೇ.ರವಿಕುಮಾರ್, ಲೆಕ್ಕಪತ್ರ ಪರಿಶೋಧಕ ಮಲ್ಲಿಕಾರ್ಜನ ಅವರನ್ನು ಸನ್ಮಾನಿಸಲಾಯಿತು.