ಅರಣ್ಯ ಒತ್ತುವರಿ ತೆರವಿಗೆ ಸುಪ್ರೀಂ ನಿರ್ಬಂಧಿಸಿಲ್ಲ

| Published : Nov 17 2025, 12:15 AM IST

ಅರಣ್ಯ ಒತ್ತುವರಿ ತೆರವಿಗೆ ಸುಪ್ರೀಂ ನಿರ್ಬಂಧಿಸಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೆ ಅರಣ್ಯ ಭೂಮಿ ಮಂಜೂರು ಮಾಡುವಾಗ ಆಗಿರುವ ಲೋಪದ ತನಿಖೆ ನಡೆಸುವ ಕೆಲಸ ತಂಡ ಮಾಡಲಿದೆ. ಒತ್ತುವರಿ ತೆರವು ನಿಲ್ಲಿಸಿ ಎಂದು ಕೋರ್ಟ್ ಸೂಚನೆ ನೀಡಿಲ್ಲ. ಆದರೆ ನಾವು ಕಾನೂನು ಪ್ರಕಾರ ಅರಣ್ಯ ಕಾಯ್ದೆಯಂತೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುತ್ತಿದ್ದು, ಇದು ಅರಣ್ಯ ಇಲಾಖೆ ಮಾತ್ರವಲ್ಲ, ಇತರೆ ಇಲಾಖೆಯವರು ಸಹಕಾರ ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಅರಣ್ಯ ಭೂ ಒತ್ತುವರಿ ಸಂಬಂಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲಾಗಿದ್ದು, ಈ ಬಗ್ಗೆ ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾರೂ ಇದಕ್ಕೆ ಕಿವಿಗೊಡಬಾರದು ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್ ಹೇಳಿದರು. ನಗರದ ಅರಣ್ಯ ಇಲಾಖೆಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆದೇಶದಲ್ಲಿ ಒತ್ತುವರಿ ತೆರವು ಮಾಡಬೇಡಿ ಅಂತ ಹೇಳಿಲ್ಲ, ಇಲಾಖೆಯ ಕಾಯ್ದೆ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ರೈತರು, ಅರಣ್ಯ, ಕಂದಾಯ ಇಲಾಖೆಗಳ ನಡುವಿನ ಗೊಂದಲ ಕುರಿತು ತನಿಖೆ ನಡೆಸಿ ಕೋರ್ಟ್‌ಗೆ ವರದಿ ನೀಡಲು ಎಸ್‌ಐಟಿ ರಚನೆ ಉದ್ದೇಶ ಎಂದರು. ಎಸ್‌ಐಟಿ ಬಗ್ಗೆ ತಪ್ಪು ಮಾಹಿತಿ

ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಎಸ್‌ಐಟಿ ರಚನೆ ಮಾಡಲಾಗಿದ್ದು, ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಭೂ ದಾಖಲೆಗಳಿಗೆ ಕಂದಾಯ ಇಲಾಖೆಯೆ ಮಾಲೀಕತ್ವ ಇರುವುದರಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚನೆಯಾಗಿದ್ದು, ಪ್ರತಿಭಟನೆಕಾರಿಗೆ ತಪ್ಪು ಸಂದೇಶ ರವಾನಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ೧೯೮೦ರ ನಂತರ ಮಂಜೂರು ಆಗಿರುವ ಎಲ್ಲ ಜಮೀನಿನ ಒತ್ತುವರಿಯೂ ಅನಧಿಕೃತ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಅರಣ್ಯ ಭೂಮಿ ಹೆಚ್ಚಳ ಅಗತ್ಯ, ಕಡಿಮೆ ಮಾಡಬಾರದು, ಯಾರೇ ಭೂಮಿ ಒತ್ತುವರಿ ಮಾಡಿದ್ದರೂ ಅದು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು. ಅರಣ್ಯ ಭೂಮಿ ಒತ್ತುವರಿ ತೆರವು

ಹಿಂದೆ ಅರಣ್ಯ ಭೂಮಿ ಮಂಜೂರು ಮಾಡುವಾಗ ಆಗಿರುವ ಲೋಪದ ತನಿಖೆ ನಡೆಸುವ ಕೆಲಸ ತಂಡ ಮಾಡಲಿದೆ. ಒತ್ತುವರಿ ತೆರವು ನಿಲ್ಲಿಸಿ ಎಂದು ಕೋರ್ಟ್ ಸೂಚನೆ ನೀಡಿಲ್ಲ. ಆದರೆ ನಾವು ಕಾನೂನು ಪ್ರಕಾರ ಅರಣ್ಯ ಕಾಯ್ದೆಯಂತೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುತ್ತಿದ್ದು, ಇದು ಅರಣ್ಯ ಇಲಾಖೆ ಮಾತ್ರವಲ್ಲ, ಇತರೆ ಇಲಾಖೆಯವರು ಸಹಕಾರ ನೀಡಬೇಕು ಅಲ್ಲದೆ ಇದ್ದು ಜನರ ಜವಾಬ್ದಾರಿ ಸಹ ಎಂದರು. ಇಲಾಖೆಯು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿಲ್ಲ. ಅರಣ್ಯ ಭೂಮಿಯಲ್ಲಿ ನಾವು ಅಕ್ರಮ ಪ್ರವೇಶ ಎಂದು ಹೇಳುವುದು ಅರ್ಥವಿಲ್ಲ. ಒತ್ತುವರಿ ತೆರವು ನಮ್ಮ ಜವಾಬ್ದಾರಿ, ಅರಣ್ಯ ಉಳಿಸುವ ಕೆಲಸ ಮಾಡುತಿದ್ದೇವೆ ಎಂದರು.

400 ಎಕರೆ ಅರಣ್ಯ ಒತ್ತುವರಿ

ಮುಳಬಾಗಿಲು ತಾಲೂಕು ವ್ಯಾಪ್ತಿಯಲ್ಲಿ ದಾಖಲಾತಿ ಇಲ್ಲದೇ ಗೋಕುಂಟೆಯಲ್ಲಿ ೪೦೦ ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿರುವುದನ್ನು ತೆರವು ಮಾಡಲಾಗಿದೆ. ಅದರಲ್ಲಿ ಮಂಜೂರಾಗಿರುವುದು ೨೫ ಎಕರೆ ಮಾತ್ರ, ಆದರೆ ನೂರಾರು ಎಕರೆ ಒತ್ತುವರಿಯಾಗಿದೆ ಎಂದು ತಿಳಿಸಿದರು.

ಮಂಜೂರಾತಿಯಲ್ಲೂ ಅಕ್ರಮ

ಕೆಲವು ಕಡೆ ಮಂಜೂರಾತಿಯೂ ಅಕ್ರಮವೇ ಆಗಿದೆ, ಈ ಸಂಬಂಧ ೬ ಮಂದಿ ಕೊರ್ಟ್‌ಗೆ ಹೋಗಿದ್ದು, ಅದರಲ್ಲಿ ೩ ಪ್ರಕರಣ ಅರಣ್ಯ ಇಲಾಖೆ ಪರವಾಗಿದೆ, ೩ ಪ್ರಕರಣದಲ್ಲಿ ತಡೆಯಾಜ್ಞೆ ನೀಡದ ಕಾರಣ ಪ್ರಕರಣ ಚಾಲ್ತಿಯಲ್ಲಿದೆ ಎಂದರು.