ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು

| Published : Nov 17 2025, 12:15 AM IST

ಸಾರಾಂಶ

ಮಕ್ಕಳು ಈ ದೇಶದ ಭವಿಷ್ಯ ರೂಪಿಸುವವರು. ಅವರಲ್ಲಿ ದೇಶಪ್ರೇಮ, ಸಚ್ಛಾರಿತ್ರೆ, ಗುರುಹಿರಿಯರ ಬಗ್ಗೆ ಭಕ್ತಿ, ಶ್ರದ್ಧೆ ಮೂಢಿಸಬೇಕು.

ಕನ್ನಡಪ್ರಭ ವಾರ್ತೆ ತುಮಕೂರುಮಕ್ಕಳು ಈ ದೇಶದ ದೊಡ್ಡ ಸಂಪತ್ತು. ದೇಶವನ್ನು ಮುನ್ನಡೆಸುವ ಭವಿಷ್ಯದ ನಾಯಕರು. ಮಕ್ಕಳ ಬಗ್ಗೆ ಪ್ರೀತಿ ಇದ್ದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲು ಸೂಚಿಸಿದರು. ಭವಿಷ್ಯದಲ್ಲಿ ದೇಶ ಕಟ್ಟುವ ಮಕ್ಕಳ ಮೇಲೆ ಅವರಿಗೆ ಅಷ್ಟೊಂದು ವಿಶ್ವಾಸವಿತ್ತು ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಮಕ್ಕಳ ದಿನಾಚರಣೆ ಹಾಗೂ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಅವರು ಹುಟ್ಟುಹಬ್ಬ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಮಕ್ಕಳು ಈ ದೇಶದ ಭವಿಷ್ಯ ರೂಪಿಸುವವರು. ಅವರಲ್ಲಿ ದೇಶಪ್ರೇಮ, ಸಚ್ಛಾರಿತ್ರೆ, ಗುರುಹಿರಿಯರ ಬಗ್ಗೆ ಭಕ್ತಿ, ಶ್ರದ್ಧೆ ಮೂಢಿಸಬೇಕು. ಮಕ್ಕಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯವ ಸಂಕಲ್ಪ ಮಾಡಬೇಕು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ನಮ್ಮ ಮಕ್ಕಳು ಆರೋಗ್ಯವಂತರಾಗಿ, ದೃಢಕಾಯರಾಗಿ ಇರಬೇಕೆಂದು ಹಿರಿಯ ಚಲನಚಿತ್ರ ನಟ ದೊಡ್ಡಣ್ಣನವರು 23 ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಶ್ರೀಮಠದ ಮಕ್ಕಳ ಆರೋಗ್ಯ ತಪಾಸಣೆಯೊಂದಿಗೆ ಮಕ್ಕಳೊಂದಿಗೆ ಆಚರಿಸಿಕೊಂಡು ಬರುತ್ತಿದ್ದಾರೆ. ವಿಶೇಷವೆಂದರೆ ಮಕ್ಕಳ ದಿನಾಚರಣೆಯಂದೇ ದೊಡ್ಡಣ್ಣನವರ ಹುಟ್ಟು ಹಬ್ಬಎಂದರು. ಚಿತ್ರ ನಟ ದೊಡ್ಡಣ್ಣ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಸೇವೆ ಮೆಚ್ಚಿ ನಾನು ಪೂಜ್ಯರ ಪರಮಭಕ್ತನಾದೆ. ಸಿದ್ಧಗಂಗಾ ಮಠ ಜಾತ್ಯತೀತ ಮಠ. ಎಲ್ಲಾ ಜಾತಿಯವರನ್ನು ಗೌರವಿಸುವ, ಆಧರಿಸುವ ಆದರ್ಶತೆ ಅನುಸರಿಸುತ್ತಿರುವ ಮಠ. ತಾವು 23 ವರ್ಷಗಳಿಂದ ತಮ್ಮಕೈಲಾದ ಮಟ್ಟಿಗೆ ಮಠದ ಸೇವೆ ಮಾಡಿಕೊಂಡು ಬರುತ್ತಿದ್ದೇನೆ ಎಂದರು. ಇಲ್ಲಿ ಕಲಿಯುತ್ತಿರುವ ಮಕ್ಕಳು ಮುಂದೆ ಉತ್ತಮ ಪ್ರಜೆಗಳಾಗಿ ಪೂಜ್ಯರ ಆಶಯ ಈಡೇರಿಸಿ ಅವರಿಗೆ ಭಕ್ತಿ ಸಮರ್ಪಿಸಬೇಕು. ಜ್ಞಾನ ಪಡೆಯಲು ಓದುವುದೇ ಮುಖ್ಯ. ವಿದ್ಯಾರ್ಥಿಗಳು ಓದುವುದನ್ನು ನಿರ್ಲಕ್ಷಿಸಬೇಡಿ. ಪೂಜ್ಯರ ಮಾರ್ಗದರ್ಶನದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಿ ಎಂದು ದೊಡ್ಡಣ್ಣ ಹೇಳಿದರು.

ಬಿಡದಿಯ ಕೆಮಿಸ್ಟ್ ಅಂಡ್‌ ಡ್ರಗ್ಗೀಸ್ ಫೌಂಡೇಶನ್‌ನ ಬಿಡದಿ ಮಂಜುನಾಥ್, ಡಾ.ಪುನಿತ್‌ ರಾಜ್‌ಕುಮಾರ್‌ ಟ್ರಸ್ಟ್ ನ ಟ್ರಸ್ಟಿ ಟಿ.ವಾಸನ್, ಸಿದ್ಧಗಂಗಾ ಆಸ್ಪತ್ರೆಯ ಡಾ.ಎಸ್.ಪರಮೇಶ್, ಡೆಂಟಲ್ ಸೈನ್ಸ್ ಕಾಲೇಜು ಪ್ರಾಚಾರ್ಯ ಡಾ.ಹೇಮಂತ್, ಉಪಪ್ರಾಂಶುಪಾಲ ಡಾ.ಜೆ.ಅವಿನಾಶ್, ಶಂಕರ್‌ ಆಸ್ಪತ್ರೆಯ ಕರ್ನಲ್‌ ಎಸ್.ಗುರುಪ್ರಸಾದ್, ಸುವರ್ಣ ಕರ್ನಾಟಕ ಕೆಮಿಸ್ಟ್ರಿ ಎಸ್.ಮಂಜುನಾಥ್, ಕರ್ಣಶ್ರೀ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಶಿವಕುಮಾರ್ ಗೌಡ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ದ್ವಾರಕಾನಾಥ್, ಚಲನಚಿತ್ರ ನಿರ್ಮಾಪಕ ಚಿನ್ನೇಗೌಡ್ರು, ಕಿರುತೆರೆ ನಟ ದಯಾನಂದ್ ಸಾಗರ್, ಉದ್ಯಮಿ ಡಿ.ಎಸ್.ಸುರೇಶ್‌ಬಾಬು, ಮಿಮಿಕ್ರಿ ದಯಾನಂದ್‌ ಮೊದಲಾದವರು ಭಾಗವಹಿಸಿದ್ದರು.ಸಿದ್ಧಗಂಗಾ ಮಠದ ಸಂಯುಕ್ತ ವಿದ್ಯಾರ್ಥಿ ಸಂಘ, ಸನಿವಾಸ ವಿದ್ಯಾಸಂಸ್ಥೆಗಳು, ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಡಾ.ಪುನಿತ್‌ ರಾಜ್‌ಕುಮಾರ್‌ ಚಾರಿಟಬಲ್ ಟ್ರಸ್ಟ್ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿಆರೋಗ್ಯತಪಾಸಣಾ ಶಿಬಿರ ನಡೆಯಿತು. ತಜ್ಞ ವೈದ್ಯರು ಆರೋಗ್ಯ ತಪಾಸಣೆ ಮಾಡಿ, ಆರೋಗ್ಯ ಸಲಹೆ ನೀಡಿದರು.