ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಉದ್ದೇಶ: ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ

| Published : Sep 03 2024, 01:47 AM IST / Updated: Sep 03 2024, 05:23 AM IST

ಸಾರಾಂಶ

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅವರ ಸರ್ವಾಂಗೀಣ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ಚಂದ್ರಕಲಾ ಹೇಳಿದರು.

 ಮಾಲೂರು : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ಚಂದ್ರಕಲಾ ಹೇಳಿದರು.

ತಾಲೂಕಿನ ಚಿಕ್ಕ ತಿರುಪತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳ ಪ್ರತಿಭಾ ಪ್ರದರ್ಶನ

ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಪೋಷಕರಿಗಲ್ಲದೆ ಸಾರ್ವಜನಿಕರು ಖುಷಿ ಪಡುವ ಹಬ್ಬ, ಮಕ್ಕಳ ಪ್ರತಿಭೆಯನ್ನು ತಂದೆ ತಾಯಿಗಳು ಹತ್ತಿರದಿಂದ ಕಣ್ಮುಂಬಿಕೊಳ್ಳುವ ವೇದಿಕೆಯಾಗಿದೆ. ಇದಕ್ಕಾಗಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ ಶಾಲೆ ಶಿಕ್ಷಕರು ಉತ್ತಮ ತರಬೇತಿ ನೀಡಿ ಸಜ್ಜುಗೊಳಿಸಬೇಕು ಎಂದರು.

ಸರ್ಕಾರ ಉಚಿತ ಸೈಕಲ್ ಸೇರಿದಂತೆ ಆನೇಕ ಯೋಜನೆಗಳನ್ನು ಜಾರಿ ಮಾಡಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಯತ್ನಿಸುತ್ತಿದೆ, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಎಂದು ಸಲಹೆ ನೀಡಿದರು. ಸುಮಾರು ವರ್ಷಗಳಿಂದ ಸರ್ಕಾರವು ಶಿಕ್ಷಣ ಇಲಾಖೆ ಮೂಲಕ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ೧ ರಿಂದ ೧೦ನೇ ತರಗತಿ ಮಕ್ಕಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಅವರ ಪ್ರತಿಭೆ ಗುರುತಿಸುತ್ತಿದೆ, ಇದರ ಮೂಲಕ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ, ಮನೋರಂಜನಾತ್ಮಕ ಕಾರ್ಯಕ್ರಮದಿಂದ ಶೈಕ್ಷಣಿಕ ಗುಣಮಟ್ಟದ ಫಲಿತಾಂಶಕ್ಕೂ ಸಹಕಾರಿಯಾಗಲಿದೆ ಎಂದರು.

ಪ್ರತಿ ಮಗುವಿನಲ್ಲೂ ಪ್ರತಿಭೆ ಇದೆ

ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ, ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು, ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು. ವಿದ್ಯಾರ್ಥಿಗಳು ಆಧುನಿಕ ಯುಗದಲ್ಲಿ ಸ್ಪರ್ಧೆ ಎದುರಿಸಿ ಬದುಕು ಕಟ್ಟಿಕೊಳ್ಳುವುದರ ಜತೆಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳುವುದು ಅಗತ್ಯ ಎಂದರು.

ಚಿಕ್ಕತಿರುಪತಿ ಕ್ಲಸ್ಟರ್ ಮಟ್ಟದ ಪ್ರತಿಬಾ ಕಾರಂಜಿ ಕಾರ್ಯಕ್ರಮದಲ್ಲಿ ಚಿಕ್ಕ ತಿರುಪತಿ ಗ್ರಾಪಂ ಅಧ್ಯಕ್ಷ ರಾಮ್ ಪ್ರಸಾದ್, ಎಸ್‌ಟಿಎಂಸಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಪಿಡಿಓ ಹರಿಂದ್ರ ಗೋಪಾಲ್, ಮುಖ್ಯೋಪಾಧ್ಯಾಯ ರಾದ ಗೀತ, ಚಿಕ್ಕತಿರುಪತಿ ಶಾಲಾ ಮುಖ್ಯಶಿಕ್ಷಕರಾದ ಸುಜಾತಮ್ಮ, .ರತ್ನಮ್ಮ, ನಾರಾಯಣಸ್ವಾಮಿ, ಸುಮಿತ್ರಮ್ಮ, ಕ್ಲಸ್ಟರ್‌ನ ಎಲ್ಲಾ ಶಾಲಾ ಶಿಕ್ಷಕರು ಬಾಗವಹಿಸಿದರು. ಕ್ಲಸ್ಟರ್‌ನ ಸಂಪನ್ಮೂಲವ್ಯಕ್ತಿ ವೆಂಕಟೇಶ್ ಹಾಜರಿದ್ದರು.