ಸಾರಾಂಶ
ಉಡುಪಿ : ಇಲ್ಲಿನ ನೇಜಾರು ಎಂಬಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದ ವಿಚಾರಣೆಯನ್ನು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿಯೇ ಮುನ್ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ.
ಆರೋಪಿ ಪ್ರವೀಣ್ ಚೌಗುಲೆ, ಉಡುಪಿಯಲ್ಲಿ ತನಗೆ ಪ್ರಾಣಾಪಾಯವಿದೆ, ಆದ್ದರಿಂದ ಪ್ರಕರಣದ ವಿಚಾರಣೆಯನ್ನು ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಬೆಂಗಳೂರು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಮನವಿ ಮಾಡಿ, ಉಡುಪಿ ಜಿಲ್ಲಾ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ತಂದಿದ್ದ.
ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಸಂತ್ರಸ್ತ ಕುಟುಂಬ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಮುಹಮ್ಮದ್ ನವಾಜ್, ತಡೆಯಾಜ್ಞೆಯನ್ನು ರದ್ದುಗೊಳಿಸಿ, ಪ್ರಕರಣವನ್ನು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಮುಂದುವರಿಸುವಂತೆ ನಿರ್ದೇಶನ ನೀಡಿದ್ದಾರೆ.
ಉಡುಪಿಯ ಹಿರಿಯಡ್ಕ ಜೈಲಿನಲ್ಲಿದ್ದ ಆರೋಪಿಗೆ ಜೀವಬೆದರಿಕೆಯ ಹಿನ್ನೆಲೆಯಲ್ಲಿ ಆತನನ್ನು ಬೆಂಗಳೂರು ಸೆಂಟ್ರಲ್ ಜೈಲಿಗೆ ಈಗಾಗಲೇ ವರ್ಗಾಯಿಸಲಾಗಿತ್ತು. ಅಲ್ಲಿಂದ ವಿಚಾರಣೆಗೆ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಜೀವಾಪಾಯದ ಸಾಧ್ಯತೆ ಇದೆ ಎಂದು ತಡೆಯಾಜ್ಞೆ ತಂದಿದ್ದ.ಇದು ತಪ್ಪು ಗ್ರಹಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ನ್ಯಾಯಾಧೀಶರು, ಉಡುಪಿ ನ್ಯಾಯಾಲಯದ ವಿಚಾರಣೆಯನ್ನು ತಡೆಹಿಡಿಯಲು ಆಗುವುದಿಲ್ಲ. ಆರೋಪಿಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಕೂಡ ಉಡುಪಿ ಜಿಲ್ಲಾ ನ್ಯಾಯಾಲಯದಿಂದಲೇ ವಿಚಾರಣೆ ನಡೆಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಆರೋಪಿ ಚೌಗುಲೆ ನ.12ರಂದು ನೇಜಾರನಲ್ಲಿ ಹಾಡುಹಗಲೇ ತಾಯಿ ಹಸೀನಾ, ಅವರ ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಅಸೀಮ್(14) ಎಂಬರನ್ನು ಕೊಲೆ ಮಾಡಿದ್ದ.