ಜೇವರ್ಗಿ ಪುರಸಭೆ ಚುನಾವಣೆಯ ಗದ್ದಲ ತಾರಕಕ್ಕೆ

| Published : Feb 14 2025, 12:31 AM IST

ಸಾರಾಂಶ

The uproar over the Jewargi municipal elections

-ಎಸ್ಪಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡನೆ: ಶಾಸಕ ಮತ್ತಿಮುಡ ನಿರ್ಧಾರ । ಹೆಚ್ಚುವರಿ ಮಹೇಶ್‌ ಮೇಘಣ್ಣನವರ ಅಮಾನತಿಗೆ ಒತ್ತಾಯ

-----

ಕನ್ನಡಪ್ರಭ ವಾರ್ತೆ, ಕಲಬುರಗಿ

ಜೇವರ್ಗಿ ಪುರಸಭೆ ಚುನಾವಣೆಯ ಗದ್ದಲ ತಾರಕಕ್ಕೆ ಏರಿದ್ದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ ವಿರುದ್ಧ ಜೇವರ್ಗಿ ಠಾಣೆಯಲ್ಲಿ ಕಾಂಗ್ರೆಸ್ ಸದಸ್ಯೆಯೊಬ್ಬರನ್ನು ಕಿಡ್ನ್ಯಾಪ್ ಮಾಡಿರುವುದಾಗಿ ದೂರು ದಾಖಲಾಗಿದೆ.

ಪುರಸಭೆಯ ಕಾಂಗ್ರೆಸ್ ಸದಸ್ಯ ಶಿವುಬಾಯಿ ಕೊಂಬಿನ್ ಅವರ ಪುತ್ರರಾದ ಸಂಗಮೇಶ್‍ ಬಸಣ್ಣ ಕೊಂಬಿನ್ ಹಾಗೂ ನಾಗರಾಜ ಬಸಣ್ಣ ಕೊಂಬಿನ್ ಈ ದೂರು ದಾಖಲಿಸಿದ್ದಾರೆ.

ಬುಧವಾರ ಮಧ್ಯಾಹ್ನ 1.50ರ ಸುಮಾರಿಗೆ ಪುರಸಭೆ ಆವರಣದಲ್ಲಿ ಮತ ಚಲಾಯಿಸಲು ಆಗಮಿಸುತ್ತಿದ್ದಾಗ ಎಎಸ್ಪಿ ಮಹೇಶ್ ಮೇಘಣ್ಣನವರ ಬಲವಂತವಾಗಿ ತಮ್ಮ ತಾಯಿಯನ್ನು ಜೀಪಿನಲ್ಲಿ ತಳ್ಳಿ ಕೂಡಿಸಿಕೊಂಡು ಹೋಗಿದ್ದಾರೆಂದು ದೂರಲಾಗಿದೆ.

ಈ ಘಟನೆಯಿಂದಾಗಿ ಪ್ರಜಾಸತ್ತಾತ್ಮಕವಾಗಿ ಮತಚಲಾವಣೆ ಮಾಡಬೇಕಿದ್ದ ತಮ್ಮತಾಯಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಕೃತ್ಯಕ್ಕೆ ಕೆಲವು ಸ್ಥಳೀಯ ಪೊಲೀಸ್ ಸಿಬ್ಬಂದಿ ಕೂಡ ಸಹಕರಿಸಿದ್ದು, ಈ ಕುರಿತಾದ ವಿಡಿಯೋ ಪುರಾವೆ ಸಹ ತಮ್ಮ ಬಳಿಯಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಜೇವರ್ಗಿ ಠಾಣೆಯಲ್ಲಿ ದೂರು ಸ್ವೀಕರಿಸಿದ್ದಾಗ್ಯೂ ಇನ್ನೂ ಎಫ್‍ಐಆರ್‌ ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.ಹಕ್ಕುಚ್ಯುತಿ ಮಂಡನೆಗೆ ಚಿಂತನೆ:

ಈ ಮಧ್ಯೆ ಸುದ್ದಿಗೋಷ್ಠಿ ನಡೆಸಿರುವ ಶಾಸಕ ಬಸವರಾಜ ಮತ್ತಿಮಡು, ಶಶಿಲ್‌ ನಮೋಶಿ, ಜಿಲ್ಲಾಧ್ಯಕ್ಷ ಅಶೋಕ ಬಗಲಿ, ನಗರಾಧ್ಯಕ್ಷ ಚಂದು ಪಾಟೀಲ್‌, ಮಾಜಿ ಅದ್ಯಕ್ಷ ಶಿವರಾಜ್‌ ಪಾಟೀಲ್‌ ರದ್ದೇವಾಡಗಿ, ಮಾಜಿ ಎಂ.ಎಲ್.ಸಿ ಅಮರನಾಥ ಪಾಟೀಲ್, ಒಬಿಸಿ ಮೋರ್ಚಾ ನಾಯಕಿ ಶೋಭಾ ಬಾಣಿ ಬುಧವಾರ ಜೇವರ್ಗಿ ಪುರಸಭೆ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುವುದಕ್ಕೂ ಮುನ್ನ ನಡೆದ ಬೆಳವಣಿಗೆಯಲ್ಲಿ ಹೆಚ್ಚುವರಿ ಎಸ್ಪಿ ಮೇಘಣ್ಣನವರ ಇಬ್ಬರು ಮಹಿಳಾ ಸದಸ್ಯರನ್ನು ಪೊಲೀಸ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆಂದು ದೂರಿದ್ದಾರೆ.

ಸ್ವತಃ ಪೊಲೀಸರೇ ಗೂಂಡಾಗಳಂತೆ ವರ್ತಿಸಿದ್ದಾರೆ. ಈ ಬೆಳವಣಿಗೆಯನ್ನು ಖಂಡಿಸಲು ಪ್ರತಿಭಟನೆ ನಡೆಸುತ್ತಿದ್ದ ವೇಳೆ ತಮ್ಮನ್ನು ಮೇಘಣ್ಣನವರ ತಳ್ಳಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮುಡ ತಿಳಿಸಿದ್ದಾರೆ.

ಪುರಸಭೆ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಮಹಿಳಾ ಸದಸ್ಯರಿಗೆ ಪೊಲೀಸರೇ ಬೆದರಿಕೆ ಹಾಕಿದ್ದಾರೆ. ಮೇಲಾಗಿ, ಮಹಿಳಾ ಸದಸ್ಯರನ್ನು ಖುದ್ದು ಪೊಲೀಸ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ. ವಾಸ್ತವದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದ ಚುನಾವಣೆ ಬಿಜೆಪಿ ಮತ್ತು ಪೊಲೀಸರ ಮಧ್ಯೆ ನಡೆದಂತಾಗಿದೆ ಎಂದು ಮತ್ತಿಮುಡ ಹೇಳಿದ್ದಾರೆ.

ಕೂಡಲೆ ಹೆಚ್ಚುವರಿ ಎಸ್.ಪಿ ಮಹಶ ಮೇಘಣ್ಣನವರ ಅವರನ್ನುಅಮಾನತು ಮಾಡಬೇಕು. ಜೇವರ್ಗಿ ಪುರಸಭೆಗೆ ಮರು ಚುನಾವಣೆ ನಡೆಸಬೇಕು. ಸರ್ಕಾರದ ಕೈಗೊಂಬೆಯಾಗಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಪುರಸಭೆ ಚುನಾವಣೆ ಸಂಬಂಧ ಬಿಜೆಪಿ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಮುಖಂಡರು ಹೇಳಿದ್ದಾರೆ.

----

ಫೋಟೋ- ಬಿಜೆಪಿ