ಗುಡಿಬಂಡೆ: ಪಟ್ಟಣದ ಹೊರವಲಯದ ಚದುಮನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಗುರುವಾರ ಮಧ್ಯಾಹ್ನ ಸುಮಾರು 11 ರಿಂದ 12 ಗಂಟೆಯ ಅವಧಿಯಲ್ಲಿ ಚಿರತೆ ದಾಳಿ ನಡೆಸಿದ್ದು, ಮೇಯಲು ಬಿಟ್ಟಿದ್ದ ಎರಡು ಕರುಗಳು ಸಾವನ್ನಪ್ಪಿವೆ.

ಸ್ಥಳೀಯ ನಿವಾಸಿ ಚಿರಂಜೀವಿ ಎಂಬುವವರಿಗೆ ಸೇರಿದ ಕರುಗಳನ್ನು ಬೆಟ್ಟದ ತಪ್ಪಲಿನಲ್ಲಿ ಮೇಯಿಸಲು ಬಿಡಲಾಗಿತ್ತು. ಈ ವೇಳೆ ಹಠಾತ್ತನೆ ದಾಳಿ ಮಾಡಿದ ಚಿರತೆ, ಎರಡು ಕರುಗಳ ಕುತ್ತಿಗೆಯನ್ನು ಕಚ್ಚಿ ಕೊಂದಿದೆ. ಜಾನುವಾರುಗಳು ಜೋರಾಗಿ ಕಿರಾಚಾಡಿದಾಗ ಭಯಭೀತಗೊಂಡ ಮಾಲೀಕ ಸ್ಥಳಕ್ಕೆ ಹೋಗಿ ನೋಡಿದ್ದಾರೆ. ಚಿರತೆಯನ್ನು ಕಂಡು ಅಕ್ಕಪಕ್ಕದವರನ್ನು ಕೂಗಿದ್ದಾನೆ. ಸಾಕಷ್ಟು ಜನ ಅಲ್ಲಿಗೆ ಬಂದಾಗ ಚಿರತೆ ಅಲ್ಲಿಂದ ಪರಾರಿಯಾಗಿದೆ ಎಂದು ಹಸುಗಳ ಮಾಲೀಕ ಚಿರಂಜೀವಿ ತಿಳಿಸಿದ್ದಾರೆ.

ಇನ್ನೂ ಘಟನೆ ಕುರಿತು ಚಿರಂಜೀವಿ ಅವರ ಅಣ್ಣ ನಾಗೇಂದ್ರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಕನಕರಾಜು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಚಿರತೆ ಪ್ರತ್ಯಕ್ಷವಾಗಿ ಜಾನುವಾರುಗಳನ್ನು ಬಲಿ ಪಡೆದಿರುವುದು ಚದುಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಚಿರತೆಯನ್ನು ಸೆರೆಹಿಡಿಯಲು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

05ಜಿಯುಡಿ1: ಪಟ್ಟಣದ ಹೊರವಲಯದ ಚದುಮನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಚಿರತೆ ದಾಳಿ ನಡೆಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಕನಕರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.