- ಬ್ರಹ್ಮಕುಮಾರಿ ಬಿ.ಕೆ.ಲೀಲಾಜಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ: ಬಿ.ವಾಮದೇವಪ್ಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಅ.8 ಮತ್ತು 9ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಮಹಿಳಾ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗ ಮಹಿಳಾ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸುವುದು ಸಮ್ಮೇಳನದ ಮುಖ್ಯ ಉದ್ದೇಶ ಎಂದರು.ಸಾಹಿತ್ಯ ಲೋಕಕ್ಕೆ ಮಹಿಳೆಯರ ಪ್ರವೇಶ ಈಚೆಗೆ ಹೆಚ್ಚಾಗುತ್ತಿದ್ದು, ಸಾಹಿತ್ಯವೂ ಹೆಚ್ಚಾಗಿ ಹೊರ ಬರುತ್ತಿರುವುದು ಆಶಾದಾಯಕ ಸಂಗತಿ. ಮಹಿಳೆಯರಿಂದ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರವೇ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಇದೀಗ ಭರದಿಂದ ಅಂತಿಮ ಸಿದ್ಧತೆಗಳೂ ನಡೆದಿದ್ದು, ಯುವತಿಯರು, ಹಿರಿಯರು, ಹಿರಿಯ ಮಹಿಳೆಯರು ಸಹ ಉತ್ಸಾಹದಿಂದ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದರು.
ಸರ್ಕಾರದಿಂದ ಸಮ್ಮೇಳನಗಳಿಗೆ ಮಾತ್ರವಲ್ಲ, ಕಾರ್ಯಕ್ರಮದ ನಿರ್ವಹಣಾ ವೆಚ್ಚವೂ ಬರುತ್ತಿಲ್ಲ. ಸರ್ಕಾರ, ವಿವಿಧ ಇಲಾಖೆಗಳಿಂದ, ಅಧಿಕಾರಿಗಳಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಆದರೂ, ಎಲ್ಲ ಮಹಿಳೆಯರು ಈವರೆಗೆ ₹2 ಲಕ್ಷಗಳಷ್ಟು ಸಂಗ್ರಹಿಸಿ, 10ಕ್ಕೂ ಹೆಚ್ಚು ಉಪ ಸಮಿತಿಗಳನ್ನು ರಚಿಸಿ, ಇಡೀ ಸಮ್ಮೇಳನದ ಜವಾಬ್ಧಾರಿವಹಿಸಿಕೊಂಡಿದ್ದಾರೆ. ಐತಿಹಾಸಿಕ ಸಮ್ಮೇಳನವನ್ನು ಯಶಸ್ವಿಗೊಳಿಸಲು ಮಹಿಳೆಯರು ಸಿದ್ಧರಾಗಿದ್ದಾರೆ ಎಂದು ಅವರು ಶ್ಲಾಘಿಸಿದರು.
ಕ.ಸಾ.ಪ. ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ, ಆ.8ರಿಂದ ಎರಡು ದಿನಗಳ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ ಬ್ರಹ್ಮಕುಮಾರಿ ಸಂಸ್ಥೆಯ ರಾಜಯೋಗಿನಿ ಬ್ರಹ್ಮಕುಮಾರಿ ಬಿ.ಕೆ.ಲೀಲಾಜಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ವಿವಿಧ ವಿಷಯಗಳ ಗೋಷ್ಟಿ, ಕವಿಗೋಷ್ಟಿ, ಪುಸ್ತಕಗಳ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಸಂಭ್ರಮ, ಗಾನ ವೈವಿಧ್ಯ, ಮಹಿಳಾ ಸಾಧಕಿಯರಿಗೆ ಸನ್ಮಾನ, ಜಿಲ್ಲಾ ಮಹಿಳಾ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಕ್ಕೆ ಸಮ್ಮೇಳನ ಸಾಕ್ಷಿಯಾಗಲಿದೆ ಎಂದರು.
ಶನಿವಾರ ಬೆಳಗ್ಗೆ 8 ಗಂಟೆಗೆ ರಾಷ್ಟ್ರ, ರಾಜ್ಯ, ಕಸಾಪ ಧ್ವಜಾರೋಹಣ ನೆರವೇರಲಿದೆ. 9 ಗಂಟೆಗೆ ವಿದ್ಯಾನಗರದ ಮಟ್ಟಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕುವೆಂಪು ಕನ್ನಡ ಭವನದವರೆಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಸಾಗಲಿದೆ. ಮಹಿಳಾ ಕಲಾ ತಂಡಗಳು ಮೆರವಣಿಗೆಗೆ ಮೆರಗು ತರಲಿವೆ. ಲತಿಕಾ ದಿನೇಶ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡುವರು. ದೂಡಾ ಆಯುಕ್ತರಾದ ಡಿ.ರೇಣುಕಾ ಇತರರು ಭಾಗವಹಿಸುವರು ಎಂದು ಅವರು ತಿಳಿಸಿದರು.ಬೆಳಗ್ಗೆ 10.30ಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸಮ್ಮೇಳನ ಉದ್ಘಾಟಿಸುವರು. ಸರ್ವಾಧ್ಯಕ್ಷೆ ಬ್ರಹ್ಮಕುಮಾರಿ ಬಿ.ಕೆ.ಲೀಲಾಜಿ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಭಾಗವಹಿಸುವರು. ಸಮ್ಮೇಳನದ ಅಂಗವಾಗಿ ಹೊರತಂದ ಮಹಿಳಾ ನುಡಿತೇರು ಸ್ಮರಣ ಸಂಚಿಕೆಯನ್ನು ಗಾಯತ್ರಿ ಸಿದ್ದೇಶ್ವರ ಲೋಕಾರ್ಪಣೆ ಮಾಡುವರು. 10 ಕೃತಿಗಳನ್ನು ಹೊನ್ನಾಳಿಯ ರತ್ನಮ್ಮ ಶಾಂತನಗೌಡ ಬಿಡುಗಡೆ ಮಾಡುವರು ಎಂದು ಹೇಳಿದರು.
ಮಧ್ಯಾಹ್ನ 2 ಗಂಟೆಗೆ ಡಾ.ಶಶಿಕಲಾ ಪಿ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಸಾಹಿತ್ಯ ಚಿಂತನ ಮಂಥನ ಮೊದಲ ಗೋಷ್ಠಿನಡೆಯಲಿದೆ. 3.30ಕ್ಕೆ ಹಿರಿಯ ಸಾಹಿತಿ ನೀಲಗುಂದ ಜಯಮ್ಮ ಅಧ್ಯಕ್ಷತೆಯಲ್ಲಿ ಹಿರಿಯರ ಕವಿಗೋಷ್ಠಿ, ಸಂಜೆ 5.30ಕ್ಕೆ ಬಿ.ಎಸ್.ಬೃಂದಾ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಆ.9ರಂದು ಬೆಳಗ್ಗೆ 9.30ಕ್ಕೆ ಗಾನಕೋಗಿಲೆ ಡಾ. ಎಸ್.ಜಾನಕಿ ಸ್ಮರಣಾರ್ಥ ಕನ್ನಡ ಗೀತ ಪ್ರಕಾರಗಳ ಗಾನ ವೈವಿಧ್ಯ ಕಾರ್ಯಕ್ರಮವನ್ನು ವೀಣಾ ಸದಾನಂದ ಹೆಗಡೆ ಉದ್ಘಾಟಿಸುವರು. 11.45ಕ್ಕೆ 3ನೇ ಗೋಷ್ಠಿ, 1.15ಕ್ಕೆ ಕಿರಿಯರ ಕವಿಗೋಷ್ಠಿ, 2.15ಕ್ಕೆ ಬಹಿರಂಗ ಅಧಿವೇಶನ, 3.30ಕ್ಕೆ ಸಮಾರೋಪದಲ್ಲಿ ಚಿಕ್ಕಮಗಳೂರಿನ ನಾಗಶ್ರೀ ತ್ಯಾಗರಾಜ ಸಮಾರೋಪ ನುಡಿಗಳನ್ನಾಡುವರು ಎಂದು ಸುಮತಿ ಜಯಪ್ಪ ಮಾಹಿತಿ ನೀಡಿದರು.ಕಸಾಪ ಜಿಲ್ಲಾ ಕಾರ್ಯದರ್ಶಿ ಬಿ.ದಿಳ್ಯಪ್ಪ, ಬೇತೂರು ಬಿ.ಷಡಕ್ಷರಪ್ಪ, ಕೆ.ಸಿ.ಲಿಂಗರಾಜ, ನೀಲಗುಂದ ಜಯಮ್ಮ, ವೀಣಾ ಕೃಷ್ಣಮೂರ್ತಿ, ಪತ್ರಕರ್ತರಾದ ಜಿಗಳಿ ಪ್ರಕಾಶ, ಎ.ಬಿ.ರುದ್ರಮ್ಮ, ಸತ್ಯಭಾಮ ಮಂಜುನಾಥ, ಎಸ್.ಎಂ.ಮಲ್ಲಮ್ಮ, ಹೇಮಾ ಶಾಂತಪ್ಪ ಪೂಜಾರಿ, ರಾಜೇಶ್ವರಿ ಕೇಶವ್, ಟಿ.ಎಸ್.ಶೈಲಜಾ, ಸುನಂದಾ ವರ್ಣೇಕರ್, ಕುಸುಮಾ ಲೋಕೇಶ ಇತರರು ಇದ್ದರು.
- - --6ಕೆಡಿವಿಜಿ7: ದಾವಣಗೆರೆಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. -6ಕೆಡಿವಿಜಿ8: ದಾವಣಗೆರೆಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿದರು.