೨೫೦ ವಿದ್ಯಾರ್ಥಿಗಳಿಗೆ ‘ವಿದ್ಯಾ ನಿಧಿ’ ಸಹಾಯಧನ ವಿತರಣೆ

| Published : Sep 14 2025, 01:06 AM IST

೨೫೦ ವಿದ್ಯಾರ್ಥಿಗಳಿಗೆ ‘ವಿದ್ಯಾ ನಿಧಿ’ ಸಹಾಯಧನ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ೨೫೦ ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ವಿದ್ಯಾನಿಧಿ’ ಸಹಾಯಧನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಒಂದು ಸಂಸ್ಥೆಯನ್ನು ನಡೆಸುವಲ್ಲಿ ಹಲವು ಮಂದಿಯ ಶ್ರಮವಿದೆ. ಇಂತಹ ಶ್ರಮದ ಮೂಲಕ ಬೆಳೆದಿರುವ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಲಾಭಾಂಶದಲ್ಲಿ ಒಂದು ಪಾಲು ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯಧನವಾಗಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ. ಸಹಾಯಧನ ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಹಣವನ್ನು ಇತರ ವೆಚ್ಚಗಳಿಗೆ ಬಳಸಿಕೊಳ್ಳದೆ, ತಮ್ಮ ವಿದ್ಯಾಭ್ಯಾಸದ ಅವಶ್ಯಕತೆಗಾಗಿ ಮಾತ್ರ ಬಳಸಿಕೊಳ್ಳಿ ಎಂದು ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ. ರೈ ಹೇಳಿದರು.ಅವರು ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಶನಿವಾರ ನಗರದ ದರ್ಬೆಯ ಪ್ರಶಾಂತ್ ಮಹಲ್‌ನ ಸನ್ನಿಧಿ ಹಾಲ್‌ನಲ್ಲಿ ಆಯೋಜಿಸಲಾದ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಸಂಘದ ಶಾಖೆಗಳ ವ್ಯಾಪ್ತಿಯ ಆಯ್ದ ಸರ್ಕಾರಿ ಶಾಲೆಗಳಲ್ಲಿ ೭ ಮತ್ತು ೮ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ೨೫೦ ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ವಿದ್ಯಾನಿಧಿ’ ಸಹಾಯಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಹಕಾರಿ ಸಂಘ ಸಂಸ್ಥೆಗಳು ಎಷ್ಟೇ ಬೆಳೆದರೂ ಈ ರೀತಿ ಸಹಾಯಧನ ನೀಡಲು ಯಾರೂ ಬಯಸುವುದಿಲ್ಲ. ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರ ಮನಸ್ಸು ಮತ್ತು ಧ್ಯೇಯ ಉತ್ತಮವಾಗಿದ್ದು, ಇದರಿಂದಾಗಿಯೇ ಇಂತಹ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು. ಮುಖ್ಯ ಅತಿಥಿ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಎ.ಕೆ. ಮಾತನಾಡಿ, ಶ್ರೀಮಂತರ ಮತ್ತು ಮಧ್ಯಮ ವರ್ಗದವರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಬಡ ಮಕ್ಕಳು ಕಲಿಯುತ್ತಿರುತ್ತಾರೆ. ಅಂತಹ ಮಕ್ಕಳನ್ನು ಗುರುತಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸವಣೂರು ಸೀತಾರಾಮ ರೈ ಅವರ ಕಾರ್ಯ ಇನ್ನಷ್ಟು ಮುಂದುವರಿಯುವಂತಾಗಲಿ ಎಂದು ಹೇಳಿದರು.ಈ ಬಾರಿ 5 ಲಕ್ಷ ರು. ವಿತರಣೆ:

ಪ್ರಾಸ್ತಾವಿಕವಾಗಿ ಮಾತನಾಡಿದ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಸವಣೂರು ಸೀತಾರಾಮ ರೈ, ಈ ತನಕ ಒಟ್ಟು ೧೨೯೫ ವಿದ್ಯಾರ್ಥಿಗಳಿಗೆ ೨೬,೨೯,೦೦೦ ರು. ವಿತರಣೆ ಮಾಡಲಾಗಿದೆ. ಈ ಬಾರಿ ೭ನೇ ಮತ್ತು ೮ನೇ ತರಗತಿಯಲ್ಲಿ ಕಲಿಯುತ್ತಿರುವ ೨೫೦ ವಿದ್ಯಾರ್ಥಿಗಳಿಗೆ ತಲಾ ೨ ಸಾವಿರ ರು.ನಂತೆ ೫ ಲಕ್ಷ ರು. ವಿತರಣೆ ಮಾಡಲಾಗುತ್ತಿದೆ ಎಂದರು.ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ಸಂಘದ ನಿರ್ದೇಶಕರಾದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವೊಕೇಟ್ ಅಶ್ವಿನ್ ಎಲ್.ಶೆಟ್ಟಿ, ಮಹಾಪ್ರಬಂಧಕ ವಸಂತ ಜಾಲಾಡಿ ಉಪಸ್ಥಿತರಿದ್ದರು.ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿಯ ಸಿಬ್ಬಂದಿ ಶ್ರಮಿತಾ ಕೆ. ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ಸಂಘದ ಪಂಜ ಶಾಖೆಯ ನಿವೃತ್ತ ವ್ಯವಸ್ಥಾಪಕ ಪರಮೇಶ್ವರ ಗೌಡ ಬಿ ಮತ್ತು ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ನಿರೂಪಿಸಿದರು.ಸಂಘದ ನಿರ್ದೇಶಕರಾದ ಎಸ್.ಎಂ.ಬಾಪು ಸಾಹೇಬ್ ಸುಳ್ಯ, ಬಿ.ಮಹಾಬಲ ರೈ ಬೋಳಂತೂರು, ಕೆ.ರವೀಂದ್ರನಾಥ ಶೆಟ್ಟಿ ಕೇನ್ಯ, ವಿ.ವಿ.ನಾರಾಯಣ ಭಟ್ ನರಿಮೊಗರು, ಎನ್.ಜಯಪ್ರಕಾಶ್ ರೈ ಚೊಕ್ಕಾಡಿ, ಎನ್.ರಾಮಯ್ಯ ರೈ ಕೆದಂಬಾಡಿ, ಸೀತಾರಾಮ ಶೆಟ್ಟಿ ಬಿ.ಮಂಗಳೂರು, ಚಿಕ್ಕಪ್ಪ ನಾಯ್ಕ್‌ ಅರಿಯಡ್ಕ, ಪೂರ್ಣೀಮಾ ಎಸ್.ಆಳ್ವ, ಮಹಾದೇವ ಎಂ.ಮಂಗಳೂರು, ಯಮುನಾ ಎಸ್. ರೈ, ರಶ್ಮಿ ಎಸ್. ರೈ ಅತಿಥಿಗಳನ್ನು ಗೌರವಿಸಿದರು.