ಡಿಸೆಂಬರ್ 18ರಿಂದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ರ ಜಯಂತಿ

| Published : Jun 25 2025, 01:18 AM IST

ಡಿಸೆಂಬರ್ 18ರಿಂದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ರ ಜಯಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವಧರ್ಮದವರು ಒಗ್ಗೂಡಿ ಡಿ.18ರಿಂದ ಮಳವಳ್ಳಿಯಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ರ ಜಯಂತಿಯನ್ನು ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು. ಜಯಂತಿಯಲ್ಲಿ ಉಳಿದ ಹಣದ ಜೊತೆಗೆ ಮಠದ ಅನುದಾನದಲ್ಲಿ ತಾಲೂಕಿನ ಐತಿಹಾಸಿಕ ಸ್ಥಳವೊಂದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸರ್ವಧರ್ಮದವರು ಒಗ್ಗೂಡಿ ಡಿ.18ರಿಂದ ಮಳವಳ್ಳಿಯಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ರ ಜಯಂತಿಯನ್ನು ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸುತ್ತೂರು ಮಠದ ಮಠಾಧೀಪತಿ ಶ್ರೀಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಮನವಿ ಮಾಡಿದರು.

ಪಟ್ಟಣದಲ್ಲಿ ನಡೆಯಲಿರುವ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ರ ಜಯಂತಿ ಪೂರ್ವಭಾವಿ ಕುರಿತ ಸಭೆಯ ಸಾನಿಧ್ಯವಹಿಸಿ ಮಾತನಾಡಿ, ಕೊನೆಯುಸಿರುವವರೆಗೂ ಶಾಶ್ವತವಾಗಿ ನೆನಪು ಉಳಿಯುವಂತಹ ಜಯಂತಿ ತಾಲೂಕಿನಲ್ಲಿ ನಡೆಯಲಿ. ಜಯಂತಿಯಲ್ಲಿ ಉಳಿದ ಹಣದ ಜೊತೆಗೆ ಮಠದ ಅನುದಾನದಲ್ಲಿ ತಾಲೂಕಿನ ಐತಿಹಾಸಿಕ ಸ್ಥಳವೊಂದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಜಯಂತಿ ಯಶಸ್ವಿಗೆ ಪ್ರತಿಯೊಬ್ಬರ ಸಲಹೆ ಸಹಕಾರ ಅತೀ ಮುಖ್ಯ. ಜವಾಬ್ದಾರಿಯನ್ನು ಹಂಚಲು ಹಲವು ತಂಡಗಳ ಒಳಗೊಂಡಂತೆ ಸಮಿತಿ ರಚನೆ ಮಾಡಲಾಗುವುದು. ಸಮಿತಿಯಲ್ಲಿ ಸೇರಿಸಿಲ್ಲ ಎಂಬ ಕಾರಣಕ್ಕೆ ಬೇಸರ ಮಾಡಿಕೊಳ್ಳಬಾರದು. ಎಲ್ಲರೂ ಶ್ರೀಮಠದ ಭಕ್ತರೆಂದು ತಿಳಿದು ಯಶಸ್ವಿಗೆ ಕೈಜೋಡಿಸಬೇಕೆಂದು ಹೇಳಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಎಲ್ಲರ ಒಗ್ಗೂಡುವಿಕೆ ಹಾಗೂ ಸಹಕಾರದೊಂದಿಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿಯನ್ನು ಶ್ರೀಗಳ ಆರ್ಶೀವಾದ ಪಡೆಯುವ ಅವಕಾಶ ತಾಲೂಕಿಗೆ ಸಿಕ್ಕಿರುವುದು ಸೌಭಾಗ್ಯ. ಸರ್ವಧರ್ಮದವರನ್ನು ಸಮಾನಾಗಿ ಕಾಣುವ ಸುತ್ತೂರು ಮಠ ಹಲವು ಸೇವೆಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದೆ ಎಂದರು.

ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾರ್ಗದರ್ಶನ ಹಾಗೂ ತಿಳಿವಳಿಕೆಗೆ ಬದ್ಧರಾಗಿ ಜಾತಿ ಹಾಗೂ ಪಕ್ಷ ಬೇಧ ಮರೆತು ನನ್ನ ಜವಾಬ್ದಾರಿಯಲ್ಲಿ ಅರ್ಥಪೂರ್ಣ ಜಯಂತಿಯನ್ನು ಆಚರಿಸಲು ಶ್ರಮವಹಿಸಲಾಗುವುದು ಎಂದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, 2ನೇ ಬಾರಿಗೆ ಜಿಲ್ಲೆಯಲ್ಲಿ ಜಯಂತ್ಯುತ್ಸವ ಆಚರಣೆ ಭಾಗ್ಯ ಸಿಕ್ಕಿದೆ. ಎಲ್ಲರ ಸಹಕಾರ ಮತ್ತು ಶ್ರಮದಿಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜಕೀಯ ಬಂದಾಗ ಮಾಡೋಣ. ನರೇಂದ್ರಸ್ವಾಮಿ ನಾನು ಆತ್ಮೀಯರು. ಆದರೆ, ಪಕ್ಷ ಅಂದಾಗ ಬೇರೆ ಎಂದರು.

ಗ್ರಾಮೀಣ ಭಾಗದ ಭಕ್ತರ ಆಶ್ತೋತರಗಳಿಗೆ ಪೂರಕವಾಗಿ ಸುತ್ತೂರಿನ ವೈಭೋಗವನ್ನು ಮಳವಳ್ಳಿಯಲ್ಲಿ ಮರುಕಳಿಸುವಂತೆ ಮಾಡುವ ನಿಟ್ಟಿನಲ್ಲಿ ಯಾವುದೇ ಗೊಂದಲವಾಗದಂತೆ ನಾನು ಮತ್ತು ಮರಿತಿಬ್ಬೇಗೌಡ ಕೊಂಡಿಯಾಗಿ ಕೆಲಸ ಮಾಡುತ್ತೇವೆ ಎಂದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರು ಸ್ಪರ್ಶ ಮಾಡಿದ ಐತಿಹಾಸಿಕ ಸ್ಥಳ ಮಳವಳ್ಳಿಯಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ 1066ರ ಜಯಂತಿ ಆಚರಿಸುತ್ತಿರುವುದು ಇಲ್ಲಿನ ಜನರ ಪುಣ್ಯವಾಗಿದೆ ಎಂದರು.

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಮನವಿಗೆ ಸ್ವಾಮೀಜಿಗಳು ಸ್ಪಂದಿಸಿ ಮಳವಳ್ಳಿಯಲ್ಲಿ ಜಯಂತಿ ನಡೆಯಲು ಅನುಮತಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲಾ ಪಕ್ಷ, ಜನಾಂಗ ಸೇರಿ ಜಯಂತ್ಯುತ್ಸವವನ್ನು ಯಶಸ್ವಿಗೊಳಿಸುವುದರ ಜೊತೆಗೆ ಜಯಂತಿಯಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳ, ಆರೋಗ್ಯ ತಾಪಸಣೆ, ಪುಸ್ತಕಮೇಳ, ಅನ್ನ, ಅಕ್ಷರ ದಾಸೋಹ, ಸಾಂಸ್ಕೃತಿಕ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿದೆ. ಭಕ್ತಿಪೂರ್ವಕವಾಗಿ ಸಾರ್ವಜನಿಕರು ಭಾಗವಹಿಸಿ ಹಲವು ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ತಾಲೂಕಿನಲ್ಲಿ ಸುತ್ತೂರು ಸಂಸ್ಥಾನದಲ್ಲಿ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿರುವ ಜಯಂತಿಗೆ ಎಲ್ಲಾ ಜನರ ನೆರವು ಅತ್ಯಗತ್ಯ. ಜಾತ್ರಾ ಮಹೋತ್ಸವದಿಂದ ಜನರ ಬದುಕಿನಲ್ಲಿ ಹೊಸ ಬೆಳಕನ್ನು ಕಾಣಬಹುದಾಗಿದೆ ಎಂದರು.

ರಾಷ್ಟ್ರದ ಕಲ್ಯಾಣಕ್ಕಾಗಿ ತನ್ನ ಸೇವೆಯನ್ನು ಮುಡುಪಾಗಿಟ್ಟ ಶ್ರೀಮಠ, ದಾಸೋಹ ಆರೋಗ್ಯ, ಶಿಕ್ಷಣ ವಸತಿ ಧಾರ್ಮಿಕ ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಸರ್ಕಾರ ಮಾಡದೇ ಇರುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ಬಸವಣ್ಣ ವಚನ, ಬುದ್ಧ, ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಶ್ರೀಮಠ ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ವಿಶ್ವದ ಎಲ್ಲೆಡೆ ತನ್ನ ಶಾಖಾ ಮಠಗಳನ್ನು ಸ್ಥಾಪಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನಕಪುರದ ದೇಗುಲ ಮಠದ ಕಿರಿಯ ಚನ್ನಬಸವ ಸ್ವಾಮೀಜಿ ಮಾತನಾಡಿ, ಮಳವಳ್ಳಿಯಲ್ಲಿ ನಡೆಯುವ ಶ್ರೀಗಳ ಜಯಂತಿ ನಾಡಿನಲ್ಲಿ ಮಾದರಿಯಂತಿರಬೇಕು. 4 ರಿಂದ 5 ಕೋಟಿಯಷ್ಟು ಸಂಪನ್ಮೂಲ ಸಂಗ್ರಹವಾಗಬೇಕು. ಅದರ ಜೊತೆಗೆ ತನ, ಮನ, ಧನವನ್ನು ನೀಡಿ ಸಹಕಾರ ಕೊಡಬೇಕು ಎಂದರು.

ರಾಜ್ಯಕ್ಕೆ ನಾನಾ ಕೊಡುಗೆ ನೀಡಿರುವ ಸುತ್ತೂರು ಮಠಕ್ಕೆ ಜಾತಿ, ಧರ್ಮ ಭೇಧಭಾವವಿಲ್ಲದೇ ದೇಶದ್ಯಾಂತ ಅಸಂಖ್ಯಾತ ಭಕ್ತರಾಗಿದ್ದಾರೆ. ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಬೌದ್ಧಬಿಕ್ಕು ಕಲ್ಯಾಣ ಬಂತೇಜಿ, ಗೌರಿ ಶಂಕರ ಸ್ವಾಮೀಜಿ, ಬಿಜೆಪಿ ಮುಖಂಡ ಜಿ.ಮುನಿರಾಜು, ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಆರ್.ಎನ್. ವಿಶ್ವಾಸ್, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯ ಟಿ.ನಂದಕುಮಾರ್, ಮುಖಂಡರಾದ ಯಮದೂರು ಸಿದ್ದರಾಜು, ಬಿ.ರವಿ ಕಂಸಾಗರ, ವಿ.ಪಿ.ನಾಗೇಶ್, ಜಯರಾಮು, ಎಂ.ಎನ್.ಕೃಷ್ಣ, ಚಿಕ್ಕಲಿಂಗಯ್ಯ, ಟಿ.ಸಿ.ಚೌಡಯ್ಯ, ಕೆ.ಜೆ.ದೇವರಾಜು, ಬಿ.ಎಸ್.ರಾಮಚಂದ್ರು, ಸಿದ್ದೇಗೌಡ, ಅಶೋಕ್ ಕುಮಾರ್, ಸಚ್ಚಿದಾನಂದ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಇದ್ದರು.