ಹಾಡಹಗಲೇ ಯುವಕನ ಬರ್ಬರ ಹತ್ಯೆ

| Published : Jun 25 2025, 01:18 AM IST

ಸಾರಾಂಶ

ಕೊಲೆ ಆರೋಪಿ ಪತ್ನಿಯ ಸಹೋದರನ ವಿರುದ್ಧ ತಾಯಿ ದೂರು

ಕನ್ನಡಪ್ರಭ ವಾರ್ತೆ ಹೊಸದುರ್ಗ:

ಹಾಡಹಗಲೇ ಮನೆಗೆ ನುಗ್ಗಿ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹುಣವಿನಡು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಹುಣವಿನಡು ಗ್ರಾಮದ ರಾಜೇಂದ್ರ(30) ಕೊಲೆಯಾದ ಯುವಕ. ಸ್ನಾನ ಮಾಡುತ್ತಿದ್ದ ವೇಳೆ ಬಚ್ಚಲು ರೂಮಿಗೆ ನುಗ್ಗಿರುವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆ ವಿವರ: ಮಾಡದಕೆರೆ ಆಸ್ಪತ್ರೆಯಲ್ಲಿ ಪಿಎಚ್‌ಸಿಓ ಆಗಿ ಕೆಲಸ ಮಾಡುತ್ತಿದ್ದು ತನ್ನ ತಾಯಿ ಸುಜಾತ ಜತೆ ಹುಣವಿನಡು ಗ್ರಾಮದ ಎಎನ್‌ಎಂ ಕ್ವಾಟ್ರಸ್‌ ನಲ್ಲಿ ವಾಸವಿದ್ದ ರಾಜೇಂದ್ರ 10 ತಿಂಗಳ ಹಿಂದೆ ವಿವಾಹಿತ ಮಹಿಳೆ ಕಿರಣ ಎಂಬುವರನ್ನು ಮದುವೆಯಾಗಿದ್ದ. ಈ ಹಿನ್ನಲೆಯಲ್ಲಿ ಕಿರಣ ಯುವತಿ ಸೋದರನಾದ ಸಾಗರ ಮತ್ತು ರಾಜೇಂದ್ರನ ನಡುವೆ ವೈಮನಸಿತ್ತು ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಕಿರಣಳ ಸೋದರ ಸಾಗರ ಮತ್ತು ಆತನೊಂದಿಗೆ ಬಂದಿದ್ದ ಇಬ್ಬರು ಸೇರಿಕೊಂಡು ಸ್ನಾನದ ಕೋಣೆಯಲ್ಲಿಯೇ ಮಚ್ಚುಗಳಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಕ್ವಾಟ್ರಸ್‌ ನಲ್ಲಿ ಗಲಾಟೆಯಾಗುತ್ತಿದ್ದನ್ನು ಕೇಳಿಸಿಕೊಂಡ ಪಕ್ಕದ ಮನೆಯವರು ಬಿಡಿಸಲು ಹೋದಾಗ ಅವರನ್ನು ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮಗನನ್ನು ಕಿರಣಳ ಸೋದರ ಸಾಗರ ಮತ್ತು ಆತನ ಜತೆ ಬಂದಿದ್ದ ಇಬ್ಬರು ಯುವಕರು ಹುಣವಿನಡು ಗ್ರಾಮದಲ್ಲಿಯೇ ವಾಸವಿರುವ ಕಿರಣಳ ಸೋದರಮಾವ ಕೃಷ್ಣಮೂರ್ತಿಯ ಕುಮ್ಮಕ್ಕಿನಿಂದ ಈ ಕೊಲೆ ಮಾಡಿದ್ದಾರೆ ಎಂದು ಕೊಲೆಯಾದ ರಾಜೇಂದ್ರನ ತಾಯಿ ಸುಜಾತ ಪೋಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು, ಸೋಕೋ ಟೀಂ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂಬಂದ ಹೊಸದುರ್ಗ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಹಾಡು ಹಗಲೆ ನಡೆದ ಕೊಲೆಗೆ ಬೆಚ್ಚಿ ಬಿದ್ದ ಜನತೆ: ತಾಲೂಕಿನಲ್ಲಿ ಇತ್ತೀಚಿಗೆ ದ್ವಿಚಕ್ರ ವಾಹನಗಳ ಕಳ್ಳತನ, ಸರಗಳ್ಳತನ, ಒಂಟಿ ಮಹಿಳೆಯರ ಮೇಲೆ ಹಲ್ಲೆ ಮಾಡಿ ಬಂಗಾರದ ಒಡವೆಗಳ ಕಳ್ಳತನ ಪ್ರಕರಣಗಳನ್ನು ಕೇಳಿದ್ದ ತಾಲೂಕಿನ ಜನ ಹುಣವಿನಡು ಗ್ರಾಮದಲ್ಲಿ ಹಾಡು ಹಗಲೇ ಭೀಕರವಾಗಿ ನಡೆದಿರುವ ಕೊಲೆಯನ್ನು ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ.