ಕನ್ನಡಪ್ರಭ ವಾರ್ತೆ ಖಾನಾಪುರ ಪಟ್ಟಣದ ಹೊರಭಾಗದ ಮಲಪ್ರಭಾ ನದಿ ತೀರದ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಯ(ಸಿವಿಪಿಐ) ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಒಟ್ಟು ₹11.83 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಪಟ್ಟಣದ ಹೊರಭಾಗದ ಮಲಪ್ರಭಾ ನದಿ ತೀರದ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಯ(ಸಿವಿಪಿಐ) ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಒಟ್ಟು ₹11.83 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.

ಸೋಮವಾರ ಸಿವಿಪಿಐ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿದ ಅವರು, ಇದು ಕುಂಬಾರಿಕೆ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ನೀಡುವ ಕರ್ನಾಟಕದ ಮತ್ತು ದಕ್ಷಿಣ ಭಾರತದ ಏಕೈಕ ಮತ್ತು ಐತಿಹಾಸಿಕ ಸಂಸ್ಥೆ. ಈ ಹಣದಲ್ಲಿ ಸುಮಾರು ಐದು ದಶಕಗಳಷ್ಟು ಹಳೆಯದಾದ ಸಂಸ್ಥೆಯ ಕಟ್ಟಡ ತೆರವುಗೊಳಿಸಿ ಅದೇ ಸ್ಥಳದಲ್ಲಿ ಅತ್ಯಾಧುನಿಕ ಹೊಸ ತರಬೇತಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಕಳೆದ ಬಾರಿ ಖಾನಾಪುರಕ್ಕೆ ಬಂದಾಗ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೋದ ಕೊಚೇರಿ ಸಿವಿಪಿಐ ವಿಶೇಷತೆ ಬಗ್ಗೆ ತಿಳಿಸಿ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆಗಿನ ಭೇಟಿ ಸಂದರ್ಭದಲ್ಲಿ ಕಟ್ಟಡವನ್ನು ವೀಕ್ಷಿಸಿದಾಗ ಕಟ್ಟಡದ ಅವಸ್ಥೆಯ ಬಗ್ಗೆ ತಿಳಿದುಬಂದಿತ್ತು. ದೆಹಲಿಗೆ ಹೋದ ನಂತರ ಈ ವಿಷಯವನ್ನು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರ ಗಮನಕ್ಕೆ ತಂದಿದ್ದೆ. ಅದರ ಫಲವಾಗಿ ಸಚಿವರು ಈ ಕಟ್ಟಡ ದುರಸ್ತಿಗೆ ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಹಣದಲ್ಲಿ ಪಾಲಿಟೆಕ್ನಿಕ್ ಮತ್ತು ಸಿವಿಲ್ ಇಂಜಿನಿಯರಿಂಗ್ ಪದವೀಧರರಂತಹ ಹಲವು ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯಗಳೊಂದಿಗೆ ತರಬೇತಿ ನೀಡಿ, ಅವರಿಗೆ ಉದ್ಯೋಗ ಕೌಶಲ್ಯಗಳನ್ನು ಒದಗಿಸಲು ಅಗತ್ಯ ವಾತಾವರಣ ನಿರ್ಮಿಸಲು ಬಳಸುವಂತೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಅಗತ್ಯತೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡ ಈಗಾಗಲೇ ಪ್ರಸ್ತಾವಿತ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಭೌತಿಕ ಮತ್ತು ತಾಂತ್ರಿಕ ಪರಿಸ್ಥಿತಿಗಳ ಸಮಗ್ರ ಪರಿಶೀಲನೆ ನಡೆಸಿದೆ. ಜಂಟಿ ಪರಿಶೀಲನೆಯಲ್ಲಿ ನಡೆದ ಚರ್ಚೆಗಳ ಆಧಾರದ ಮೇಲೆ ರಚನಾತ್ಮಕ ವಿನ್ಯಾಸಗಳಿಗೆ ಸೂಕ್ತವಾದ ಪರಿಷ್ಕೃತ ತಾಂತ್ರಿಕ ಯೋಜನೆ ಸಿದ್ಧಪಡಿಸಿದೆ ಎಂದರು.ಪ್ರಮೋದ ಕೊಚೇರಿ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ಕಿಲ್ ಇಂಡಿಯಾ ಯೋಜನೆಯಡಿ ಬರುವ ತರಬೇತಿಗಳನ್ನು ನೀಡುವ ಕೇಂದ್ರವಾಗಿ ವ್ಯವಸ್ಥಿತವಾಗಿ ರೂಪಿಸಲು ಇಂತಹ ಯೋಜನೆಗಳು ಪೂರಕವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸಿವಿಪಿಐ ಪ್ರಾಚಾರ್ಯ ವಿಜಯೇಂದ್ರ ಸಿಂಗ್, ಹಿರಿಯ ಅಧಿಕಾರಿ ಎಸ್.ಎನ್ ದೇಶಪಾಂಡೆ ಹಾಗೂ ಸಿಬ್ಬಂದಿ ಇದ್ದರು.