ಸಾರಾಂಶ
ಸಂಪತ್ ತರೀಕೆರೆ
ಬೆಂಗಳೂರು : ಕಳೆದ ಆರೇಳು ವರ್ಷಗಳಿಂದ ಸಂಗೀತ ನೃತ್ಯ, ನಾಟಕ, ಬಂಜಾರ ಸಂಸ್ಕೃತಿ ಅಕಾಡೆಮಿಗಳು ಸೇರಿದಂತೆ 10ಕ್ಕೂ ಹೆಚ್ಚು ಅಕಾಡೆಮಿಗಳಲ್ಲಿ ಕಾಯಂ ರಿಜಿಸ್ಟ್ರಾರ್‌ಗಳು ಇಲ್ಲ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಸಂಗೀತ ನೃತ್ಯ ಅಕಾಡೆಮಿ, ನಾಟಕ ಅಕಾಡೆಮಿ, ತುಳು, ಕೊಂಕಣಿ ಅಕಾಡೆಮಿ ಸೇರಿದಂತೆ ಒಟ್ಟು 14 ಅಕಾಡೆಮಿಗಳಿವೆ. ಈ ಪೈಕಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿಗಳನ್ನು ಹೊರತುಪಡಿಸಿ ತುಳು, ಕೊಂಕಣಿ, ಜಾನಪದ, ಶಿಲ್ಪಕಲೆ ಒಳಗೊಂಡಂತೆ 11 ಅಕಾಡೆಮಿಗಳಲ್ಲಿ ರಿಜಿಸ್ಟ್ರಾರ್‌ಗಳೇ ಇಲ್ಲ.
ಇರುವಂತಹ ಮೂರ್‍ನಾಲ್ಕು ರಿಜಿಸ್ಟ್ರಾರ್‌ಗಳಿಗೆ ಎರಡ್ಮೂರು ಅಕಾಡೆಮಿಗಳ ಜವಾಬ್ದಾರಿಯನ್ನು ಹೊರಿಸಲಾಗಿದೆ. ಹೀಗಾಗಿ ರಿಜಿಸ್ಟ್ರಾರ್‌ಗಳು ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ಇದೆ. ಅಕಾಡೆಮಿಯಲ್ಲಿ 10 ಸಾವಿರ ರು.ಗಳಿಗಿಂತ ಕಡಿಮೆ ಮೊತ್ತದ ಯೋಜನೆಗೆ ರಿಜಿಸ್ಟ್ರಾರ್ ಅನುಮತಿ ಕೊಡಬೇಕು. ಅದಕ್ಕಿಂತ ಹೆಚ್ಚಿನ ಮೊತ್ತದ ಕಾರ್ಯಕ್ರಮ ನಡೆಯಬೇಕಾದರೆ ರಿಜಿಸ್ಟ್ರಾರ್ ಮತ್ತು ಲೆಕ್ಕಾಧಿಕಾರಿಯ ಅನುಮೋದನೆ ಸಿಗಬೇಕು. ರಿಜಿಸ್ಟ್ರಾರ್ ಇಲ್ಲದ್ದರಿಂದ ಅಕಾಡೆಮಿಗಳ ಅಧ್ಯಕ್ಷರುಗಳು ಕೂಡ ತಿಂಗಳಾನುಗಟ್ಟಲೆ ಹೊಸ ಯೋಜನೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಅಕಾಡೆಮಿಗಳ ಸಂಪೂರ್ಣ ಆಡಳಿತ ರಿಜಿಸ್ಟ್ರಾರ್ ಅವರ ಕೈಯಲ್ಲಿ ಇರುತ್ತದೆ. ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರೂ ಒಳಗೊಂಡಂತೆ ಸದಸ್ಯರೆಲ್ಲರಿಗೂ ಬೈಲಾ ಪ್ರಕಾರ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ನಿಯಮಗಳ ಅನುಸಾರ ಕೆಲಸ ಮಾಡಿಸಬೇಕು. ಆದರೆ, ರಿಜಿಸ್ಟ್ರಾರ್‌ಗಳೇ ಇಲ್ಲದ ಕಳೆದ ಐದಾರು ವರ್ಷಗಳಿಂದ ಅಕಾಡೆಮಿಗಳು ತಮ್ಮ ಸಂಪೂರ್ಣ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಲವು ತಿಂಗಳು ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರುಗಳನ್ನು ನೇಮಕ ಮಾಡಿರಲಿಲ್ಲ. ಆದ್ದರಿಂದ ಅಕಾಡೆಮಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.
ಆ ನಂತರ ಬಂದ ಸರ್ಕಾರ 13 ತಿಂಗಳು ಅಧ್ಯಕ್ಷರು, ಸದಸ್ಯರನ್ನು ನೇಮಿಸಿರಲಿಲ್ಲ. ಕಳೆದ ಜುಲೈನಲ್ಲಿ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿತ್ತಾದರೂ ಈವರೆಗೂ ವಿವಿಧ ಅಕಾಡೆಮಿಗಳಲ್ಲಿ ಖಾಲಿಯಿರುವ ರಿಜಿಸ್ಟ್ರಾರ್ ಹುದ್ದೆಗಳನ್ನು ಭರ್ತಿ ಮಾಡುವಂತಹ ಕೆಲಸಕ್ಕೆ ಕೈಹಾಕಿಲ್ಲ. ಇದು ಅಕಾಡೆಮಿಯ ಮೂಲ ಉದ್ದೇಶ ಈಡೇರಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ. ಹೀಗಾಗಿ ಅಕಾಡೆಮಿಗಳು ಕಳೆದ ಎರಡ್ಮೂರು ವರ್ಷಗಳಿಂದ ವಿತರಣೆಯಾಗದ ಪ್ರಶಸ್ತಿಗಳ ಪ್ರದಾನಕ್ಕೆ ಸೀಮಿತಗೊಂಡಿವೆಯೇನೋ ಎಂಬ ಅನುಮಾನ ಶುರುವಾಗಿದೆ ಎಂದು ಕಲಾವಿದರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾಯಂ ರಿಜಿಸ್ಟ್ರಾರ್ ಬೇಕು
ಎರಡು ಅಕಾಡೆಮಿಗಳಲ್ಲಿ ಒಂದೇ ದಿನ ಕಾರ್ಯಕ್ರಮ ಇದ್ದರೆ ರಿಜಿಸ್ಟ್ರಾರ್‌ಗಳಿಗೆ ಸಮಸ್ಯೆಯಾಗುತ್ತದೆ. ಮುಖ್ಯವಾಗಿ ರಿಜಿಸ್ಟ್ರಾರ್‌ಗಳು ಎರವಲು ಸೇವೆಯಲ್ಲಿದ್ದರೂ ಪರವಾಗಿಲ್ಲ. ಆದರೆ, ಅಕಾಡೆಮಿಗಳಿಗೆ ಕಾಯಂ ಸಿಬ್ಬಂದಿಗಳ ಅವಶ್ಯಕತೆ ಇದೆ.
-ಕೆ.ವಿ.ನಾಗರಾಜಮೂರ್ತಿ, ಅಧ್ಯಕ್ಷ, ಕರ್ನಾಟಕ ನಾಟಕ ಅಕಾಡೆಮಿ.
ಬಜೆಟ್ ಇದೆ, ವೇಗ ಇಲ್ಲ
ಅಕಾಡೆಮಿಗಳಿಗೆ ಅಲ್ಪ ಪ್ರಮಾಣದಲ್ಲಿ ಬಜೆಟ್ ಇದೆ. ಇರುವುದರಲ್ಲಿ ಕೆಲಸ ಮಾಡುತ್ತಿದ್ದು ನಿರ್ವಹಣೆ ಕಷ್ಟವಾಗುತ್ತಿಲ್ಲ. ಕಾಯಂ ರಿಜಿಸ್ಟ್ರಾರ್ ಇದ್ದಿದ್ದರೆ ಯೋಜನೆಗಳ ವೇಗ ಹೆಚ್ಚಿಸಬಹುದಿತ್ತು.
-ಗೊಲ್ಲಹಳ್ಳಿ ಶಿವಪ್ರಸಾದ್, ಅಧ್ಯಕ್ಷ, ಕರ್ನಾಟಕ ಜಾನಪದ ಅಕಾಡೆಮಿ.
ಚಟುವಟಿಕೆಗಳಿಗೆ ತೊಡಕು
ರಿಜಿಸ್ಟ್ರಾರ್ ಇಲ್ಲದೇ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಅಧ್ಯಕ್ಷರೇ ಎಲ್ಲ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಕೆಲಸ ಮಾಡದಿದ್ದರೆ ಸಮುದಾಯಕ್ಕೆ ಮೋಸ ಮಾಡಿದಂತಾಗುತ್ತದೆ. ಅಧ್ಯಕ್ಷರು, ಸದಸ್ಯರಿಗೆ ಮಾರ್ಗದರ್ಶನ ಮಾಡಲು ಕಾಯಂ ರಿಜಿಸ್ಟ್ರಾರ್ ಅವಶ್ಯಕತೆ ಇದೆ.
-ಡಾ। ಎ.ಆರ್.ಗೋವಿಂದಸ್ವಾಮಿ, ಅಧ್ಯಕ್ಷ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ.-