ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರಸಕ್ತ ಪರಿಸ್ಥಿತಿಯಲ್ಲಿ ಹಿಂದೂ ಧರ್ಮದ ಮೇಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಹಿಂದೂಗಳ ಬಲಿಷ್ಠ ಸಂಘಟನೆಯ ಅವಶ್ಯಕತೆ ಇಂದು ತುರ್ತು ಅಗತ್ಯವಾಗಿದೆ ಎಂದು ಸನಾತನ ಸಂಸ್ಥೆಯ ಪ್ರಮುಖರಾದ ಲಕ್ಷ್ಮಿ ಪೈ ಅಭಿಪ್ರಾಯಪಟ್ಟರು.ಕುಶಾಲನಗರದ ಗೌಡ ಸಮಾಜದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧನೆ ಮತ್ತು ಧರ್ಮ ಸಂಘಟನೆಯ ಅಡಿಪಾಯವಾಗಿದ್ದರೆ ಮಾತ್ರ ರಾಷ್ಟ್ರ-ಧರ್ಮ ಕಾರ್ಯ ಭದ್ರವಾಗಿರಲು ಸಾಧ್ಯ. ಸಾಧನೆಯಿಂದಲೇ ಯಾವುದೇ ಪರಿಸ್ಥಿತಿಯನ್ನು ಎದುರಿಸುವ, ಯಾವುದೇ ಪರಿಸ್ಥಿತಿಯಲ್ಲಿ ಸ್ಥಿರವಾಗಿರುವ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಮತೆ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಪವಿತ್ರ ದಿನವಾಗಿದೆ:ಎಲ್ಲರೂ ಆಧ್ಯಾತ್ಮಿಕ ಸಾಧನೆಯೊಂದಿಗೆ ರಾಷ್ಟ್ರ-ಧರ್ಮದ ಕಾರ್ಯ ಮಾಡುವ ಸಂಕಲ್ಪ ತೊಡಬೇಕಿದೆ. ಗುರುಪೂರ್ಣಿಮೆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮತ್ತು ಗುರುಸೇವೆಗಾಗಿ ಸಂಕಲ್ಪ ಮಾಡುವ ಪವಿತ್ರ ದಿನವಾಗಿದೆ. ಭಾರತದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಗುರು-ಶಿಷ್ಯ ಪರಂಪರೆಯಾಗಿದ್ದು, ಈ ದೈವೀ ಪರಂಪರೆಯು ಕೇವಲ ಗುರು ಮತ್ತು ಶಿಷ್ಯ, ಅಧ್ಯಾತ್ಮ ಮತ್ತು ಮೋಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ.
ಬದಲಾಗಿ ಅದು ವಿಶ್ವ ಕಲ್ಯಾಣದ ಕಾರ್ಯ ಮಾಡುತ್ತಿದೆ. ಧರ್ಮಸಂಸ್ಥಾಪನೆ ಮತ್ತು ರಾಷ್ಟ್ರರಕ್ಷಣೆಯ ಕಾರ್ಯವನ್ನೂ ಮಾಡಿದೆ. ತ್ರೇತಾಯುಗ, ದ್ವಾಪರಯುಗ ಹೀಗೆ ಪ್ರತಿ ಯುಗದಲ್ಲಿ ಧರ್ಮ ಮತ್ತು ನ್ಯಾಯದ ಪರವಾಗಿ ಹೋರಾಡುವವರಿಗಿಂತ ಅಧರ್ಮಿಗಳ ಸಂಖ್ಯೆ ಮತ್ತು ಶಸ್ತ್ರಬಲ ಎರಡೂ ಹೆಚ್ಚಿತ್ತು. ಆದರೆ ಅಂತಿಮ ವಿಜಯವು ಧರ್ಮದ್ದೇ ಆಯಿತು. ಭಗವಂತನ ಆಶೀರ್ವಾದವು ಧರ್ಮದ ಪರವಾಗಿ ಹೋರಾಡುವವರ ಮೇಲಿತ್ತು. ಇಂದು ಸಮಾಜದಲ್ಲಿ ಅಂಥದ್ದೇ ಅಧರ್ಮ, ಕೊಲೆ, ಸುಲಿಗೆ, ವಂಚನೆ, ಭ್ರಷ್ಟಾಚಾರ ಹೆಚ್ಚಿದೆ, ಆದರೆ ಇಂದಿಗೂ ಪರಮ ಕಲ್ಯಾಣಕಾರಿ ಗುರು ತತ್ವವು ಸನಾತನ ಧರ್ಮದ ರಕ್ಷಣೆಗಾಗಿ ಹಾಗೂ ಭವ್ಯ ಭಾರತದ ನಿರ್ಮಾಣಕ್ಕಾಗಿ ಕಾರ್ಯನಿರತವಾಗಿದೆ. ನಮ್ಮ ಕರ್ತವ್ಯವೇನೆಂದರೆ, ಒಬ್ಬ ವ್ಯಕ್ತಿಯಾಗಿ ಕೇವಲ ತನ್ನ ಕುಟುಂಬದ ಬಗ್ಗೆ ಮಾತ್ರ ಯೋಚಿಸದೆ, ರಾಷ್ಟ್ರ ಮತ್ತು ಧರ್ಮಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ನಿಜವಾದ ಅರ್ಥದಲ್ಲಿ ಸುಖ-ಸಂತೋಷವನ್ನು ಪಡೆಯಬೇಕಾದರೆ, ಧರ್ಮವನ್ನು ನಿಷ್ಠೆಯಿಂದ ಪಾಲಿಸಬೇಕು. ಕೇವಲ ವೈಯಕ್ತಿಕ ಉಪಾಸನೆಗೆ ಸೀಮಿತವಾಗದೆ ಸಮಾಜದಲ್ಲಿ ಧರ್ಮ ಪ್ರಸಾರ ಮತ್ತು ಧರ್ಮ ಜಾಗೃತಿ ಮಾಡುವುದು ಕಾಲದ ಅವಶ್ಯಕತೆಯಾಗಿದೆ. ಅದಕ್ಕಾಗಿ ನಮ್ಮ ಕ್ಷೇತ್ರಗಳನ್ನು ವಿಸ್ತರಿಸಿ, ವೃತ್ತಿ-ವ್ಯವಹಾರ, ಮನೆ-ಕೆಲಸಗಳಿಂದ ಸಮಯ ತೆಗೆದು ಅದನ್ನು ರಾಷ್ಟ್ರ-ಧರ್ಮ ಕಾರ್ಯಕ್ಕಾಗಿ ಸಮರ್ಪಣೆ ಮಾಡೋಣ ಎಂದು ಕರೆ ನೀಡಿದರು.ಸಾಮೂಹಿಕ ಶಕ್ತಿ ಇಡೀ ಜಗತ್ತಿಗೆ ತಿಳಿಯುತ್ತದೆ:ನಾಟಕಕಾರ ಹಿಂದೂ ಕಾರ್ಯಕರ್ತ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಭಾರತವು ಜಗತ್ತಿಗೆ ಗುರು ಸ್ಥಾನದಲ್ಲಿದೆ. ನಮ್ಮ ಕಂಬ ಮಹರ್ಷಿಗಳು ಭಾರತದಿಂದ ಹೊರಟು ಈಗಿನ ಕಾಂಬೋಡಿಯಾ ದೇಶಕ್ಕೆ ಹೋಗಿ, ಅಲ್ಲಿನ ಜನರಿಗೆ ನಾಗರಿಕತೆ ಮತ್ತು ಜೀವನ ಪದ್ಧತಿಯನ್ನು ಕಲಿಸಿದರು. ಇಂದಿಗೂ ಕಾಂಬೋಡಿಯಾದಲ್ಲಿ ನಮ್ಮ ಮಹರ್ಷಿಗಳ ಕೃತಿಗಳನ್ನು ನೋಡಬಹುದು. ಇದು ಭಾರತದ ಜಾಗತಿಕ ಗುರು ಸ್ಥಾನಕ್ಕೆ ಒಂದು ಉತ್ತಮ ಉದಾಹರಣೆ. ಈ ಕಥೆಯು, ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಾಗಿ, ನಮ್ಮ ಅಂತರಂಗದ ಶಕ್ತಿ ಮತ್ತು ಕ್ಷಾತ್ರ ತೇಜವನ್ನು ಅರಿತು, ಕುರಿಗಳಂತೆ ಬದುಕದೆ ಹುಲಿಗಳಂತೆ ಗರ್ಜಿಸಬೇಕು ಎಂಬ ಸಂದೇಶವನ್ನು ನೀಡುತ್ತದೆ. ಸುಮಾರು 100 ಕೋಟಿ ಹಿಂದೂಗಳಾದ ನಾವೆಲ್ಲರೂ ಒಂದಾದರೆ, ನಮ್ಮ ಸಾಮೂಹಿಕ ಶಕ್ತಿ ಇಡೀ ಜಗತ್ತಿಗೆ ತಿಳಿಯುತ್ತದೆ ಎಂದರು.
ಸನಾತನ ಸಂಸ್ಥೆಯ ಗುರುಗಳ ಸಂದೇಶವನ್ನು ವಿನಯ ಕುಮಾರ್ ವಾಚಿಸಿದರು. ಶ್ರೀಕೃಷ್ಣನ ಸಾಮೂಹಿಕ ಪ್ರಾರ್ಥನೆ ನಡೆಯಿತು.ಬಾಂಧವ್ಯ ವಿವೇಕ್ ಸ್ವಾಗತಿಸಿ ನಿರೂಪಿಸಿದರು. ಕುಶಾಲನಗರದ ಉದ್ಗಮ್ ಶಾಲೆಯ ಮುಖ್ಯಸ್ಥೆ ಪ್ರೇಮಾ ಅಚ್ಚಯ್ಯ, ಹಿಂದೂ ಜನಜಾಗೃತಿ ವೇದಿಕೆ ಪ್ರಮುಖರಾದ ವಿನಯಕುಮಾರ್, ಕೆ.ಸಿ. ನಂಜುಂಡಸ್ವಾಮಿ, ಬಿ.ಪಿ.ಶ್ರೀನಾಥ್, ರಮೇಶ್ ಕುಮಾರ್, ವಿಜಯಲಕ್ಷ್ಮಿ, ಸಹನಾ, ಉಮಾಶ್ರೀನಾಥ್, ಶರ್ಮಿಳಾ ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕರಾದ ಮುಕುಂದ, ನರೇಶ್ಚಂದ್ರ ಸೇರಿದಂತೆ ವಿವಿಧ ರಂಗ ಸಂಸ್ಥೆಗಳ ಪ್ರಮುಖರು ಇದ್ದರು.