ಕನ್ನಡಪ್ರಭ ವಾರ್ತೆ ಬೆಂಗಳೂರು:
ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 550 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಮತ್ತು 572 ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಿದೆ. ಇದರಿಂದಾಗಿ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣಪ್ರಕಾಶ್ ಪಾಟೀಲ್ ತಿಳಿಸಿದರು.ವಿಕಾಸಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಲಭ್ಯತೆ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ 1122 ಸ್ನಾತಕೋತ್ತರ ವೈದ್ಯಕೀಯ ಮತ್ತು ಪಿಜಿ ಸೀಟುಗಳನ್ನು ನೀಡುತ್ತಿದೆ. ಈ ವೈದ್ಯಕೀಯ ಸೀಟುಗಳಲ್ಲಿ ಬಹುಪಾಲನ್ನು ಕೊಪ್ಪಳ, ಶಿವಮೊಗ್ಗ, ಹುಬ್ಬಳ್ಳಿ, ಮಂಡ್ಯ, ಗದಗ, ಮಡಿಕೇರಿ, ಚಾಮರಾಜನಗರ, ಕಾರವಾರ, ಹಾವೇರಿ, ಚಿಕ್ಕಮಗಳೂರು ಜಿಲ್ಲೆಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇನ್ನು, ಹೆಚ್ಚುವರಿ ಸೀಟು ಹಂಚಿಕೆಯಿಂದಾಗಿ ವೈದ್ಯಕೀಯ ಮೂಲಸೌಕರ್ಯ ವೃದ್ಧಿ ಮಾಡುವುದಕ್ಕೆ ಕೇಂದ್ರ ಸರ್ಕಾರ ಒಟ್ಟಾರೆ ₹1090 ಕೋಟಿ ಅಭಿವೃದ್ಧಿ ಅನುದಾನ ನೀಡಲಿದ್ದು, ರಾಜ್ಯ ಸರ್ಕಾರ ₹600 ಕೋಟಿಗೂ ಹೆಚ್ಚಿನ ಅನುದಾನವನ್ನು ಕೊಡಲಿದೆ ಎಂದರು.
ರಾಜ್ಯ ಸರ್ಕಾರದ ನಿರಂತರ ಪ್ರಯತ್ನ ಫಲವಾಗಿ ಈ ಹೆಚ್ಚುವರಿ ಸೀಟುಗಳು ಲಭ್ಯವಾಗಿವೆ. ಕಳೆದ ವರ್ಷವೂ ಹೆಚ್ಚುವರಿ ಸೀಟುಗಳಿಗೆ ಮಂಜೂರಾತಿ ನೀಡಲಾಗಿತ್ತು. ಹೆಚ್ಚುವರಿ ಸೀಟು ಹಂಚಿಕೆಯಿಂದಾಗಿ ರಾಜ್ಯಕ್ಕೆ ಯಾವುದೇ ಹೊಸ ಮೆಡಿಕಲ್ ಕಾಲೇಜು ನಿರ್ಮಿಸದೆಯೇ ಹೆಚ್ಚುವರಿಯಾಗಿ 10 ಮೆಡಿಕಲ್ ಕಾಲೇಜು ಸ್ಥಾಪಿಸಿದಂತಾಗಿದೆ. ಇನ್ನು, ಒಂದೇ ವರ್ಷ ಒಂದು ಸಾವಿರ ಮೆಡಿಕಲ್ ಸೀಟುಗಳು ಒಂದು ರಾಜ್ಯಕ್ಕೆ ದೊರೆತಿರುವುದು ದಾಖಲೆಯಾಗಿದೆ. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಅನುಕೂಲವಾಗಲಿದೆ ಎಂದರು.ಸಿಇಟಿ ಮಾದರಿಯನ್ನು ಕೇಂದ್ರ ನೀಟ್‌ಗೆ ಬಳಸಿಕೊಳ್ಳಲಿ:ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಪ್ರತಿಕ್ರಿಯಿಸಿದ ಡಾ। ಶರಣಪ್ರಕಾಶ್ ಪಾಟೀಲ್, ಕಳೆದ 5 ವರ್ಷಗಳಿಂದ ಪದೇಪದೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವಂತಾಗಿದೆ. ವೈದ್ಯರಾಗಬೇಕು ಎಂದು ಕನಸು ಕಾಣುವ ಮಕ್ಕಳ ಭವಿಷ್ಯಕ್ಕೆ ಕೇಂದ್ರ ಸರ್ಕಾರ ಕೊಳ್ಳಿ ಇಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ತಲೆದಂಡವಾಗಬೇಕು. ಎಂಬಿಬಿಎಸ್ ಸೀಟುಗಳ ಮಾರಾಟಕ್ಕಾಗಿಯೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಹಗರಣಗಳನ್ನು ನಡೆಸಲಾಗುತ್ತಿದೆ ಎಂಬ ಅನುಮಾನವಿದೆ. ಹೀಗಾಗಿ, ಸಿಬಿಐ ತನಿಖೆ ಬದಲು ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರವು ರಾಜ್ಯಗಳ ಸಲಹೆ ಪಡೆಯದೆ ತನಗೆ ತಾನೇ ನಿರ್ಧಾರ ತೆಗೆದುಕೊಳ್ಳುವುದರ ಫಲವಾಗಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪದೇಪದೇ ನಡೆಯುತ್ತಿದೆ. ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಗಳನ್ನು ಅತ್ತುತ್ತಮವಾಗಿ ನಡೆಸಲಾಗುತ್ತಿದೆ. ಈ ಮಾದರಿಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಆಯಾ ರಾಜ್ಯಗಳೇ ಪರೀಕ್ಷೆ ನಡೆಸಲು ಅನುಮತಿಸಬೇಕು. ಇನ್ನು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಅವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ ಎಂದು ಸ್ಪಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.