ಬೆಂಗಳೂರು: ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಂಡು ದಂಧೆ ನಡೆಸಲು ಹೊರಟಿದ್ದಾರೆ. ಈ ದಂಧೆಯ ವಿರುದ್ಧ ಇವತ್ತಿನಿಂದ ನಾನು ಹೋರಾಟಕ್ಕೆ ಧುಮುಕುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಶನಿವಾರ ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೈತರ ಭೂಮಿಯನ್ನು ಕಿತ್ತುಕೊಂಡು ದಂಧೆ ಮಾಡಲು ಈ ಸರ್ಕಾರ ಹೊರಟಿದೆ. ಒಬ್ಬರು ರೈತರು ಹೊಡೆದರೆ ಹೊಡೆಸಿಕೊಳ್ಳುವೆ ಎಂದು ಹೇಳಿದ್ದಾರೆ. ಮೊದಲು ಅವರು ಹೋಗಿ ರೈತರಿಂದ ಹೊಡೆಸಿಕೊಂಡು ಬರಲಿ, ಆಮೇಲೆ ನಾನು ಹೋಗಿ ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸದೆ ಗುಡುಗಿದರು.ದೇವೇಗೌಡರು ಈ ಹಿಂದೆ ಸಭೆಯಲ್ಲಿ ಅಳುತ್ತಿದ್ದರು ಎಂದು ಕೆಲವರು ವ್ಯಂಗ್ಯ ಮಾಡುತ್ತಿದ್ದರು. ಆದರೆ ಈ ವ್ಯವಸ್ಥೆಯನ್ನು ನೋಡಿ ನಾನು ನಗುತ್ತಿದ್ದೇನೆ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಸ್ನೇಹಿತರು ಮತ್ತು ಹಳೆಯ ಸಹೋದ್ಯೋಗಿ. ಜೊತೆಯಲ್ಲಿ ಕೆಲಸ ಮಾಡಿದ್ದೇವೆ. ಆದರೆ ಇಲ್ಲಿ ನಡೆಯುತ್ತಿರುವುದು ಯಾರಿಗೂ ಕಾಣದಿರುವುದು ನನಗೆ ಅತೀವ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಡದಿ ಟೌನ್ ಶಿಪ್ ಕೈ ಬಿಡಿ:ಬೆಂಗಳೂರು ನಗರದ ಮೇಲೆ ಹೆಚ್ಚು ಒತ್ತಡ ಆಗುತ್ತದೆ ಎಂದು ಕುಮಾರಸ್ವಾಮಿ ಐದು ಟೌನ್ ಶಿಪ್ ಗಳನ್ನು ಮಾಡಲು ಹೊರಟಿದ್ದರು. ಆಗ ಕಾಂಗ್ರೆಸ್ ಪಕ್ಷದ ನಾಯಕರು ದೊಡ್ಡ ಅಪಪ್ರಚಾರ ನಡೆಸಿ ಕುಮಾರಸ್ವಾಮಿಯವರು ಭೂಮಿಯನ್ನು ಹೊಡೆಯಲು ಹೊರಟಿದ್ದಾರೆ ಎಂದು ಸತ್ಯಶೋಧನ ಸಮಿತಿ ರಚಿಸಿ ತನಿಖೆಯನ್ನು ಮಾಡಿದರು. ಅವರ ಸತ್ಯಶೋಧನ ಸಮಿತಿ ವರದಿಯಲ್ಲಿ ಯಾವ ಸತ್ಯ ಹೊರಗೆ ಬಂತು ದೇವರೇ ಬಲ್ಲರು. ಅಂದು ಜನರು ವಿರೋಧ ಮಾಡಿದ್ದಕ್ಕೆ ಕುಮಾರಸ್ವಾಮಿಯವರು ಐದು ಟೌನ್ ಶಿಪ್ ಯೋಜನೆಗಳನ್ನು ಕೈಬಿಟ್ಟರು. ಈಗಲೂ ಕೂಡ ಬಿಡದಿ ಟೌನ್ ಶಿಪ್ ಯೋಜನೆಗೆ ಜನರ ಆಕ್ರೋಶ, ವಿರೋಧ ಇದೆ. ಹೀಗಾಗಿ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ದೇವೇಗೌಡರು ಆಗ್ರಹಿಸಿದರು.
ಈಗ ಬೆಂಗಳೂರು ಜವಾಬ್ದಾರಿ ಹಾಗೂ ನೀರಾವರಿ ಜವಾಬ್ದಾರಿಯನ್ನು ಒಬ್ಬರೇ ವಹಿಸಿಕೊಂಡಿದ್ದಾರೆ. ಅದರ ಜೊತೆಗೆ ರಾಷ್ಟ್ರೀಯ ಪಕ್ಷದ ಜವಾಬ್ದಾರಿಯನ್ನು ಕೂಡ ಅವರೇ ಹೊತ್ತುಕೊಂಡಿದ್ದಾರೆ. ಏನೋ ಮುಖ್ಯಮಂತ್ರಿ ಆಗಬೇಕೆಂದು ಒಡಂಬಡಿಕೆ ಆಗಿದೆಯಂತೆ. ನಿಮ್ಮಗಳ ಮುಂದೆ ಮನೋರಂಜನೆ ಮಾಡುತ್ತಿದ್ದಾರೆ. ಬಿಡದಿಯ ರೈತರು ಕಣ್ಣೀರಿನಲ್ಲಿ ಕೈ ತೊಡೆಯುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.
20 ಸಾವಿರ ಎಕರೆ ಯಾರ ಹೆಸರಿನಲ್ಲಿ ಇದೆ?
ಸಿದ್ದರಾಮಯ್ಯನವರೇ, ನೀವು ನನ್ನ ಜೊತೆ ಕೆಲಸ ಮಾಡಿದ್ದೀರಿ. ನಿಮ್ಮ ಸಾಮಾಜಿಕ ನ್ಯಾಯದ ಮಾತಿನ ಬಗ್ಗೆ ನನಗೂ ಅರಿವಿದೆ. ಬೆಂಗಳೂರು ಸುತ್ತಮುತ್ತ ಸುಮಾರು 20 ಸಾವಿರ ಎಕರೆ ಭೂಮಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತನಿಖೆ ಮಾಡಿ ಎಂದು ಈಗಾಗಲೇ ಪತ್ರ ಬರೆದಿದ್ದೇನೆ. ಸಿದ್ದರಾಮಯ್ಯನವರೇ ಬೆಂಗಳೂರು ನಗರದ ಹೊಣೆ ಹೊತ್ತಿರುವವರ ಒತ್ತಡಕ್ಕೆ ಮಣಿದು ಜನರ ಸಮಸ್ಯೆಯನ್ನು ನೀವು ಕೇಳುತ್ತಿಲ್ಲ. ಬಿಡದಿ ರೈತರ ಸಮಸ್ಯೆಯನ್ನು ಯಾರಾದರೂ ಹೋಗಿ ಕೇಳಿದ್ದೀರಾ ಎಂದು ದೇವೇಗೌಡರು ಪ್ರಶ್ನಿಸಿದರು.ಸಿಎಂಗೆ ಬಿಡದಿಗೆ ಆಹ್ವಾನ:
ಸಿದ್ದರಾಮಯ್ಯ ಅವರೇ ಬಿಡದಿಯ ರೈತರ ಪರಿಸ್ಥಿತಿಯನ್ನು ಒಮ್ಮೆ ನೀವೇ ಖುದ್ದಾಗಿ ನೋಡಿ. ನಾನು ಬರುತ್ತೇನೆ, ನೀವು ಬನ್ನಿ. ಸ್ಥಳಕ್ಕೆ ಭೇಟಿ ನೀಡೋಣ. ಈವರೆಗೂ ಸ್ಥಳೀಯ ಶಾಸಕರು ತಹಸೀಲ್ದಾರರು ಜಿಲ್ಲಾಧಿಕಾರಿಗಳು ಆ ಜನರ ಸಮಸ್ಯೆಯನ್ನು ಕೇಳಿಲ್ಲ. ಇಲ್ಲಿ ದಂಧೆ ನಡೆಯುತ್ತಿದೆ. ರೈತರ ಭೂಮಿಯನ್ನು ಕಿತ್ತುಕೊಂಡು ದಂಧೆ ಮಾಡುತ್ತಿದ್ದಾರೆ. ಕನಕಪುರದಲ್ಲಿ ಎಷ್ಟು ಜಮೀನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ಯಾರೊಬ್ಬರ ಹೆಸರು ಹೇಳದೆಯೇ ಎಚ್.ಡಿ.ದೇವೇಗೌಡರು ವಾಗ್ದಾಳಿ ನಡೆಸಿದರು.(ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗ್‌ಶಾಟ್ ಫೋಟೋ ಬಳಸಿ)
