ಹುಬ್ಬಳ್ಳಿ:

ಪ್ರಜಾಪ್ರಭುತ್ವ ರಾಷ್ಟ್ರ ನಾಶಗೊಳಿಸಿ ಮನುವಾದಿ ರಾಷ್ಟ್ರ ನಿರ್ಮಾಣ ಮಾಡುವ ದಿಕ್ಕಿನತ್ತ ಕೆಲವರು ಸಾಗುತ್ತಿದ್ದಾರೆ. ಸಂಸದೀಯ ವ್ಯವಸ್ಥೆ ಹಾಗೂ ಸಹಬಾಳ್ವೆಯಲ್ಲಿ ನಂಬಿಕೆಯಿರುವ ಶಕ್ತಿಗಳೆಲ್ಲ ಒಂದಾಗಿ ಇದರ ವಿರುದ್ಧ ಹೋರಾಡಬೇಕಿದೆ ಎಂದು ಹಿರಿಯ ಪತ್ರಕರ್ತ ಸನತ್‌ಕುಮಾರ ಬೆಳಗಲಿ ಕರೆನೀಡಿದರು.

ಲಡಾಯಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಮೇ ಸಾಹಿತ್ಯ ಮೇಳ ಹುಬ್ಬಳ್ಳಿ ಬಳಗದ ಸಹಯೋಗದಲ್ಲಿ ಇಲ್ಲಿನ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದ ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ 12ನೇ ಮೇ ಸಾಹಿತ್ಯ ಮೇಳದ ಗೋಷ್ಠಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುವಾದಿ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಸಂವಿಧಾನ ನಾಶ ಮಾಡುವ ಹುನ್ನಾರ ಯಶಸ್ವಿಯಾಗಿ ಮಾಡುತ್ತ ಬಂದಿವೆ. ಚುನಾವಣಾ ಆಯೋಗ, ನ್ಯಾಯಾಲಯಕ್ಕೆ ಅವರಿಂದ ಅಪಾಯ ಎದುರಾಗಿದೆ. ಸಂಸದೀಯ ವ್ಯವಸ್ಥೆಯ ಅಡಿಯಲ್ಲಿರುವ ಹಕ್ಕನ್ನು ಒಂದೊಂದಾಗಿ ನಾಶ ಮಾಡುತ್ತ ಬಂದಿದ್ದಾರೆ. ಸಮಾನತೆ ಬಯಸುವ ವಿಚಾರಧಾರೆ ಉಳ್ಳವರು ಮೇ ಸಾಹಿತ್ಯ ಮೇಳ ಆಯೋಜಿಸುತ್ತ ಬಂದಿರುವುದು ಶ್ಲಾಘನೀಯ. ಇಂಥ ಮೇಳ ರಾಷ್ಟ್ರಮಟ್ಟದಲ್ಲಿಯೂ ಆಯೋಜನೆಯಾಗುವುದು ಅತ್ಯವಶ್ಯವಾಗಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ತೆಲುಗು ಸಾಹಿತಿ ಪಾಣಿ, ಹೋರಾಟವೇ ನಮ್ಮ‌ ಪರಿಭಾಷೆಯಾಗಿದೆ. ಚೈತನ್ಯಶೀಲ ಸಮಾಜವನ್ನು ಪುನಶ್ಚೇತನ ಮಾಡುವುದು ಪ್ರತಿಯೊಬ್ಬ ಬರಹಗಾರನ ಕರ್ತವ್ಯವಾಗಿದೆ. ನಿರಂಕುಶ ಪ್ರಭುತ್ವವಾದಿಗಳು ಜಾತಿ, ಜಾತಿಗಳ ಮಧ್ಯೆ ಒಡಕು ಸೃಷ್ಟಿಸಿ ಅಮಾಯಕರನ್ನು ಛೂ ಬಿಡುತ್ತಿದ್ದಾರೆ. ಸಾಂಸ್ಕೃತಿಕ ಅಸ್ತ್ರವನ್ನು ಬಳಸಿಕೊಳ್ಳುತ್ತ ಸಮಾಜದಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಭಾರತವನ್ನು ಛಿದ್ರವಾಗಲು ಬಿಡದೆ, ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದರು.


ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ತುಪ್ಪ ತಿಂದವರಲ್ಲಿ ಮಾತ್ರ ಪ್ರತಿಭೆಗಳಿಲ್ಲ, ಮಣ್ಣಿನಲ್ಲೂ ಪ್ರತಿಭೆಗಳಿವೆ ಎಂದು ಈ ಮೇಳ ಸಾಕ್ಷೀಕರಿಸುತ್ತಿದೆ. ಕೋಮುವಾದಿ, ಮನುವಾದಿಗಳನ್ನೆಲ್ಲ ಮೆಟ್ಟಿ ಎದ್ದು ನಿಲ್ಲಲು ಇಂತಹ ಸಮ್ಮೇಳನ ಸಹಕಾರಿಯಾಗಿದೆ. ಕಸಿದು ಉಣ್ಣುವವರ ಕೈಗಳನ್ನು ಜವಾಬ್ದಾರಿಯಿಂದ ಹಿಡಿಯುವ ಹೋರಾಟದ ಭಾವನೆ ನಮ್ಮಲ್ಲಿ ಮೂಡಬೇಕು ಎಂದರು.

ಇದೇ ವೇಳೆ ಹುಬ್ಬಳ್ಳಿ ಘೋಷಣೆ ಮತ್ತು ಸಾಹಿತಿ ಪಾಣಿ ಅವರ ಕಾದಂಬರಿ ''''ಶಿಕಾರಿ'''' ಬಿಡುಗಡೆಗೊಳಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರೆವರೆಂಡ್ ಜಾರ್ಜ್ ಫರ್ಡಿನ್ಯಾಂಡ್ ಕಿಟೆಲ್, ಫ.ಗು. ಹಳಕಟ್ಟಿ, ಜಗದೀಶ ಮಂಗಳೂರಮಠ, ಪ್ರಹ್ಲಾದ ಅಗಸನಕಟ್ಟೆ, ಜಿ.ಎಚ್. ರಾಘವೇಂದ್ರ ಸ್ಮಾರಕ ಪುಸ್ತಕ ಮಳಿಗೆಗಳನ್ನು ಗಣ್ಯರು ಉದ್ಘಾಟಿಸಿದರು. ಹಾಗೂ ಡಿ.ವಿ. ಹಾಲಭಾವಿ, ಎಂ.ವಿ. ಮಿಣಜಗಿ, ಎಂ. ಜೀವನ, ನೀಲಗಂಗಯ್ಯ ಪೂಜಾರ, ಫಕ್ಕೀರವ್ವ ಗುಡಿಸಾಗರ ಅವರ ಸ್ಮಾರಕ ಚಿತ್ರಕಲಾ ಪ್ರದರ್ಶನ ಮಳಿಗೆಯನ್ನು ಶ್ಯಾಮಲಾ ಗುರುಪ್ರಸಾದ ಉದ್ಘಾಟಿಸಿದರು.

ವಿವಿಧ ಗೋಷ್ಠಿಗಳು:

ಕೆ.ಪಿ. ಸುರೇಶ ಪ್ರಾಸ್ತಾವಿಕ ಮಾತನಾಡಿದರು. ಬಳಿಕ ಸಾಂವಿಧಾನಿಕ ಪ್ರಜಾಸತ್ತೆ: ಸ್ವರೂಪ-ಸಂಘರ್ಷದ ಇತಿಹಾಸ, ವರ್ತಮಾನ ಭಾರತದಲ್ಲಿ ಸಾಂವಿಧಾನಿಕ ಪ್ರಜಾಸತ್ತೆ: ಏನು ಎತ್ತ? ಕುರಿತು ಗೋಷ್ಠಿಗಳು, ಅನುಭವ ಕಥನ, ಕವಿಗೋಷ್ಠಿ ನೆರವೇರಿತು.

ಪ್ರಕಾಶಕ ಬಸವರಾಜ ಸೂಳಿಭಾವಿ, ಬಿ.ಎಸ್‌. ಸೊಪ್ಪಿನ, ಬೀಬಿಜಾನ್ ಮುಲ್ಲಾ, ಲಿನೆಟ್ ಡಿಸಿಲ್ವ, ಅನ್ವರ ಮುಧೋಳ, ಡಾ. ಲಿಂಗರಾಜ ಅಂಗಡಿ, ಮಹೇಶ ಪತ್ತಾರ, ಗುರುನಾಥ ಉಳ್ಳಿಕಾಶಿ, ವಿ.ಬಿ. ಮಾಗನೂರ, ಶರೀಫ್ ಬಿಳೆಯಲಿ ಸೇರಿದಂತೆ ಹಲವರಿದ್ದರು.ಶರಣರ ಮೂಲ ತತ್ವ, ವಚನಗಳಿಗೆ ಅವಮಾನ

ದಿಕ್ಸೂಚಿ ಭಾಷಣ ಮಾಡಿದ ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ, ಇಂದು ಬಸವಾದಿ ಶರಣರ ಮೂಲ ತತ್ವ, ಅವರ ಚಳವಳಿ, ವಚನಗಳಿಗೆ ಅಪಮಾನ ಮಾಡುವ ಕೃತ್ಯಗಳು ನಡೆಯುತ್ತಿವೆ. ಕೆಲವು ಕೋಮು, ಮನುವಾದಿಗಳು ಬಬಲೇಶ್ವರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಆಯೋಜಿಸುತ್ತಿರುವುದು ಖಂಡನಾರ್ಹ. ಶರಣರು, ಸಂತರು, ವಚನಕಾರರು ಯಾವುದೇ ಧರ್ಮ, ಜಾತಿಗೆ ಮೀಸಲಾದವರಲ್ಲ. ಹಿಂದೂ ಎಂಬುದು ಒಂದು ಜಾತಿಗೆ ಸೀಮಿತವಾಗಿರುವ ಭಾಷೆ. ಮನುಸ್ಮೃತಿಯ ಧರ್ಮ ರಕ್ಷಣೆಗಾಗಿ ಕೆಲವರು ವಚನ ಸಾಹಿತ್ಯವನ್ನು ತಿರಚಲು ಹೊರಟಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವೆ. ಈ ಕುರಿತು ಸಮಾಜದ ಎಲ್ಲರೂ ಜಾಗೃತಿ ಹೊಂದಿ ವಿರೋಧಿಸಬೇಕಿದೆ ಎಂದರು.

ಜನರ‌ ಮುಂದೆ ಹುಟ್ಟಿರುವ ಸಂವಿಧಾನ ನಮ್ಮದಾಗಿದ್ದು, ಅದರ ರಹದಾರಿ ಮುಚ್ಚುವ ಕೆಲಸ ನಡೆಯುತ್ತಿದೆ. ಅದನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಮುಂದಾಗಬೇಕು. ನಮ್ಮ ಶತ್ರು ಯಾರು, ಮಿತ್ರರು ಯಾರು ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ತಿಳಿಸಿದ್ದಾರೆ. ಆದರೆ, ಮನುವಾದಿಗಳು ನಮ್ಮನ್ನು ನಾವಿದ್ದ ಜಾಗದಲ್ಲೇ ಜೈಲು ಕೈದಿಯನ್ನಾಗಿಸುವ ಹುನ್ನಾರ ನಡೆಸುತ್ತಿದ್ದಾರೆ. ನಮಗೆ ಆಕ್ರೋಶ ಮತ್ತು ಕೋಪ ಬರದಿದ್ದರೆ ಅವರು ಕೊಟ್ಟಿದ್ದನ್ನು ಒಪ್ಪಿಕೊಂಡಂತೆಯೇ. ಅನ್ಯಾಯದ ವಿರುದ್ಧ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.