ಸಾರಾಂಶ
ಬ್ಯಾಡಗಿ: ಕಳೆದ ಮಾರ್ಚ್‌ನಲ್ಲಿ ಬ್ಯಾಡಗಿಯಲ್ಲಿ ನಡೆದ ರೈತರ ಗಲಾಟೆ ಪ್ರಕರಣದಲ್ಲಿ ಸುಟ್ಟು ಹೋಗಿದ್ದ ವಾಹನಗಳಿಗೆ ರು.15 ಲಕ್ಷ ವಿಮಾ ಪರಿಹಾರ ನೀಡುವ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೆರವಿಗೆ ಧಾವಿಸಿದ್ದೇವೆ ಎಂದು ನ್ಯೂ ಇಂಡಿಯಾ ಅಶ್ಯೂರೆನ್ಸ್ ಲಿ. ಹುಬ್ಬಳ್ಳಿ ವಿಭಾಗೀಯ ಪ್ರಬಂಧಕ ಸುಧೀಂದ್ರ ಇಂಡೀಕರ ಹೇಳಿದರು.
ಸ್ಥಳೀಯ ಎಪಿಎಂಸಿಯಲ್ಲಿ ಕಳೆದ ಮಾರ್ಚ್‌ನಲ್ಲಿ ರೈತರು ನಡೆಸಿದ ದಾಂಧಲೆಯಲ್ಲಿ ಸಂಪೂರ್ಣ ಸುಟ್ಟಿದ್ದ 4 ವಾಹನಗಳಿಗೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಲಿ. ವತಿಯಿಂದ ರು.15 ಲಕ್ಷ ಮೊತ್ತದ ವಿಮೆ ಪರಿಹಾರದ ಕಾರ್ಯಾದೇಶ ಪತ್ರ ವಿತರಿಸಿ ಅವರು ಮಾತನಾಡಿದರು.ಜನರ ಯೋಗಕ್ಷೇಮ ಕಂಪನಿಯ ಉದ್ದೇಶ: ಭಾರತದ ಜನರ ಯೋಗಕ್ಷೇಮ ಖಾತರಿಪಡಿಸುವ ಧ್ಯೇಯವಾಕ್ಯದೊಂದಿಗೆ ಕಳೆದ 1919ರಲ್ಲಿ ಸರ್ ದೊರಾಬ್ಜಿ ಟಾಟಾ ಅವರು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ.ಲಿ. ಸ್ಥಾಪಿಸಿದರು. ಬಹುರಾಷ್ಟ್ರೀಯ ವಿಮಾ ಕಂಪನಿಯಾಗಿದ್ದು ಪ್ರಸ್ತುತ ವಿಶ್ವದ 50 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. ಪ್ರೀಮಿಯಂ ಸಂಗ್ರಹದ ಆಧಾರದ ಮೇಲೆ ಭಾರತದ ಅತಿದೊಡ್ಡ ರಾಷ್ಟ್ರೀಕೃತ ವಿಮಾ ಕಂಪನಿಯಾಗಿ ಹೊರಹೊಮ್ಮಿದೆ ಎಂದರು.
ನಿಮ್ಮ ನೆರವಿಗೆ ಸದಾಸಿದ್ಧ: ವೈ. ಶ್ರೀನಿವಾಸ ಮಾತನಾಡಿ, ವಾಹನ ವಿಮೆ ಸೇರಿದಂತೆ, ಟ್ರ್ಯಾನ್ಸಿಟ್, ವರ್ಕಮನ್ ಶಿಪ್, ಸ್ಟಾಕ್ & ಫೈರ್, ಆರೋಗ್ಯ ಹೀಗೆ ಹತ್ತಾರು ವಿಭಾಗಗಳಲ್ಲಿ ವಿಮೆ ಮಾಡಿಸಬಹುದಾಗಿದ್ದು ಪ್ರೀಮಿಯಂ ಹಣ ತುಂಬಿದ ಗ್ರಾಹಕನಿಗೆ ತ್ವರಿತವಾಗಿ ನ್ಯಾಯಸಮ್ಮತವಾಗಿ ಸಲ್ಲಬೇಕಾದ ವಿಮಾ ಪರಿಹಾರ ಹಣವನ್ನು ತಲುಪಿಸುವ ಮೂಲಕ ಗ್ರಾಹಕರ ನೆರವಿಗೆ ಸದಾಸಿದ್ಧವಾಗಿದೆ ಎಂದರು.ಬ್ಯಾಡಗಿ ವ್ಯಾಪಾರಸ್ಥರ ನೆರವಿಗೆ: ವಿನಯ್ ಗೋಬಣ್ಣನವರ ಮಾತನಾಡಿ, ಈಗಾಗಲೇ ಬ್ಯಾಡಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ನ್ಯೂ ಇಂಡಿಯಾ ಅಶ್ಯೂರೆನ್ಸ್ ಲಿ. ವಿಮಾ ಕಂಪನಿಯು ಸ್ಥಳೀಯ ವ್ಯಾಪಾರಸ್ಥರಿಗೆ ಅನುಕೂಲಕ್ಕಾಗಿ ಗೋಡೌನ್ ನಿಂದ ಗೋಡೌನ್ ಗೆ ಪಾಲಿಸಿ ಆರಂಭಿಸಿದೆ, ಮೆಣಸಿನಕಾಯಿ ಲಾರಿಗಳಲ್ಲಿ ರವಾನೆಯಾದ ಸಂದರ್ಭದಲ್ಲಿ, ಕಳ್ಳತನ, ಹವಾಮಾನ ವೈಪರೀತ್ಯ, ಪ್ರವಾಹ, ಬೆಂಕಿ, ದೊಂಬಿ ಇನ್ನಿತರ ರಾಷ್ಟ್ರೀಯ ವಿಪತ್ತು ಘಟನೆ ಜರುಗಿದ ವೇಳೆ ವಿಮಾ ಕಂಪನಿಯ ಪರಿಹಾರ ನೀಡಲಿದ್ದು ವ್ಯಾಪಾರಸ್ಥರು ಇಂತಹ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಖುಷಿ ತಂದಿದೆ: ಎಪಿಎಂಸಿ ಕಾರ್ಯದರ್ಶಿ ಎಂ.ವಿ.ಶೈಲಜಾ ಮಾತನಾಡಿ, ನಮ್ಮ ವಾಹನಗಳಿಗೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಲಿ.ವಿಮೆ ಮಾಡಿಸಿದ್ದರಿಂದ ಬಹುಬೇಗನೆ ವಿಮಾ ಪರಿಹಾರ ನೀಡಿದ್ದಲ್ಲದೇ ಇಲಾಖೆಗೆ ಹಣಕಾಸಿನ ಹೊರೆಯನ್ನು ಇಳಿಸಿದಂತಾಗಿದ್ದು ವಿಮಾ ಕಂಪನಿಯ ಎಲ್ಲ ಅಧಿಕಾರಿಗಳಿಗೆ ಸರ್ಕಾರ ಹಾಗೂ ಕೃಷಿ ಮಾರಾಟ ಇಲಾಖೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ನ್ಯೂ ಇಂಡಿಯಾದ ಕುಮಾರ ನೀರಜ್, ಅಜಯ್ ಕುಲಕರ್ಣಿ, ಸ್ಥಳೀಯ ಏಜೆಂಟ್ ಶಿವಾನಂದ ಮಲ್ಲನಗೌಡ್ರ, ಎಪಿಎಂಸಿ ಸಿಬ್ಬಂದಿಗಳಾದ ಸಹ ಕಾರ್ಯದರ್ಶಿ ವಿಜಯಕುಮಾರ ಗೂರಪ್ಪನವರ, ಬಿ.ಎಸ್. ಗೌಡರ, ಎಸ್.ಎಂ.ಪೊಟೇರ, ವಿಕಾಸ್, ಕೊಪ್ಪದ, ಶಂಕ್ರಡ್ಡಿಮಠ, ಮಾಲತೇಶ ಇನ್ನಿತರರಿದ್ದರು.