ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಯುನಿಟ್ 3ರಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ 200 ಎಕರೆ ಜಮೀನು ನೀಡುವುದಕ್ಕೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ ಎಂದು ಬಾಗಲಕೋಟ ಯುನಿಯನ್ ಆಫ್ ಮರ್ಚಂಟ್ಸ್ ಮತ್ತು ಎಂಟರ್‌ಪ್ರೈಸರ್ಸ್ ಅಸೋಸಿಯೇಷನ್ಸ್ ಪದಾಧಿಕಾರಿಗಳು ತಿಳಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪದಾಧಿಕಾರಿಗಳು, ತಮ್ಮ ಅಸೋಸಿಯೇಷನ್ ಮನವಿಗೆ ಸ್ಪಂದಿಸಿ ಯುನಿಟ್ 3ರಲ್ಲಿ ಮಾದರಿಯ ಮಾರುಕಟ್ಟೆ ನಿರ್ಮಿಸಿ ಬಾಗಲಕೋಟೆ ನಗರದ ಹಿಂದಿನ ವ್ಯಾಪಾರ ವೈಭವವನ್ನು ಮರುಕಳಿಸಬೇಕೆನ್ನುವ ಉದ್ದೇಶಕ್ಕೆ 200 ಎಕರೆ ಜಾಗೆ ನೀಡುವುದಕ್ಕೆ ತಾತ್ವಿಕ ಒಪ್ಪಿಗೆ ದೊರೆತಿದೆ. ಇದಕ್ಕಾಗಿ ಶ್ರಮಿಸಿದ ಶಾಸಕ ಎಚ್.ವೈ.ಮೇಟಿ, ವಿಪ ಸದಸ್ಯ ಪಿ.ಎಚ್. ಪೂಜಾರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮುಖಂಡ ಹೊಳಬಸು ಶೆಟ್ಟರರನ್ನು ಅಭಿನಂದಿಸುವುದಾಗಿ ಹೇಳಿದರು.
ಅಸೋಸಿಯೇಷನ್ ಪ್ರಧಾನ ಕಾರ್ಯ ದರ್ಶಿ ವಿರುಪಾಕ್ಷ ಅಮೃತಕರ ಮಾತನಾಡಿ, ಬಾಗಲಕೋಟೆ ನಗರ ಮುಳುಗಡೆಯಿಂದಾಗಿ ಮೂರು ಭಾಗಗಳಾಗಿ ವ್ಯಾಪಾರ ವಹಿವಾಟು ಸಹ ಸೆಕ್ಟರ್ ಹಂಚಿ ಹೋಗಿದೆ. ಹೀಗಾಗಿ ಹಳೇ ಬಾಗಲಕೋಟೆಯಲ್ಲಿನ ವ್ಯಾಪಾರ ಸಂಪೂರ್ಣ ನಿಂತು ಹೋಗಿದೆ. ಇದರಿಂದ ವ್ಯಾಪಾರಸ್ಥರಿಗೆ ಬಹಳಷ್ಟು ತೊಂದರೆಯಾಗಿದ್ದು, ಏಕತ್ರ ಮಾರುಕಟ್ಟೆ ವ್ಯವಸ್ಥೆಯಾದರೆ ವ್ಯಾಪಾರಸ್ಥರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂಬ ಉದ್ದೇಶದಿಂದ ನಮ್ಮ ಅಸೋಸಿಯೇಷನ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದನೆ ದೊರೆತಿದ್ದು, 200 ಎಕರೆ ಜಾಗೆ ಮಂಜೂರಾತಿಗೆ ಹಸಿರು ನಿಶಾನೆ ದೊರೆತಿದೆ ಎಂದರು.ಅಧ್ಯಕ್ಷ ರವಿ ಕುಮಟಗಿ ಮಾತನಾಡಿ, ನಗರದ ಎಲ್ಲ ಬಗೆಯ ವ್ಯಾಪಾರಸ್ಥರ ಸಂಘಟನೆಗಳನ್ನೊಳಗೊಂಡು ಯುನಿಯನ್ ಆಫ್ ಮರ್ಚಂಟ್ಸ್ ವೇದಿಕೆ ರಚಿಸಲಾಗಿದೆ. ಒಂದೇ ಸೂರಿನಡಿ ಉದ್ದಿಮೆಗಳ ಸ್ಥಾಪನೆಯಾಗಿ ನಗರ ಆರ್ಥಿಕವಾಗಿ ಬೆಳವಣಿಗೆ ಹೊಂದಬೇಕು. ಜನರಿಗೆ ಉದ್ಯೋಗಾವಕಾಶಗಳು ಸಿಗಬೇಕು ಎನ್ನುವುದೇ ವೇದಿಕೆ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ಡಾ.ಶೇಖರ ಮಾನೆ ನೂತನವಾಗಿ ರಚಿತವಾಗಿರುವ ಅಸೋಸಿಯೇಷನ್ ಸರಕಾರ ಮತ್ತು ವ್ಯಾಪಾರಸ್ಥರ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದು ಹೇಳಿ, ಒಂದೇ ಕಡೆ ಸುಸಜ್ಜಿತ ಮಾರುಕಟ್ಟೆ ರಚಿತಗೊಂಡರೆ ನಗರದಲ್ಲಿ ಮತ್ತೆ ಹಿಂದಿನ ವ್ಯಾಪಾರ ವಹಿವಾಟಿನ ವೈಭವ ಕಾಣುವಂತಾಗುತ್ತದೆ ಎಂದರು.
ಶ್ರೀನಿವಾಸ ಬಳ್ಳಾರಿ ಮಾತನಾಡಿದರು. ಉಪಾಧ್ಯಕ್ಷ ಪವನ ಸೀಮಿಕೇರಿ, ಪುಕರಾಜ ಬೇತಾಳ, ರಾಮ ಮುಂದಡಾ, ನಾಗರಾಜ ಕುಪ್ಪಸ್ತ ಉಪಸ್ಥಿತರಿದ್ದರು.