ಸಾರಾಂಶ
ಗದಗ: ಹಿಂದಿನ ಕಾಲದಲ್ಲಿ ಶ್ರೀಮಂತರಿಗೆ ಸಕಲ ಗೌರವಗಳೂ ಸಲ್ಲುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. 21ನೇ ಶತಮಾನದಲ್ಲಿ ಯಾರಲ್ಲಿ ಜ್ಞಾನ ಹಾಗೂ ಕೌಶಲ್ಯ ಇರುತ್ತದೆಯೋ ಅವರಿಗೆ ಗೌರವ ಸಲ್ಲುತ್ತದೆ ಎಂದು ವಿಪ ಹಿರಿಯ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಅವರು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪಪೂ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಶೈಕ್ಷಣಿಕ ಚಟುವಟಿಕೆ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.ಲಿಂ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಆಶಯಗಳಿಗೆ ಅನುಗುಣವಾಗಿ ಸ್ಥಾಪನೆಯಾದ ಈ ಪಪೂ ಮಹಾವಿದ್ಯಾಲಯ ಕೆಲವೇ ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿ ಫಲಿತಾಂಶದಲ್ಲೂ ಗಮನಾರ್ಹ ಸಾಧನೆ ಮಾಡಿದೆ. ಇದಕ್ಕೆ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ದೂರದೃಷ್ಟಿ ಹಾಗೂ ಕಾಲೇಜು ಸಿಬ್ಬಂದಿಯ ಶ್ರಮ ಕಾರಣವಾಗಿದೆ.
ಪಿಯುಸಿ ಪರೀಕ್ಷೆಯಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರಿಂದ ಇತರೆ ವಿದ್ಯಾರ್ಥಿಗಳಲ್ಲೂ ಸಾಧನೆ ಮಾಡುವ ಸ್ಫೂರ್ತಿ ದೊರೆಯುತ್ತದೆ. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣವಾಗಿದ್ದು, ವಿದ್ಯಾರ್ಥಿಗಳು ಕೇವಲ ಪಠ್ಯದ ಕಡೆ ಗಮನ ನೀಡದೇ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕಿದೆ. ಬಡತನ ಅಥವಾ ಇನ್ನಿತರ ದೌರ್ಬಲ್ಯಗಳ ಕೀಳರಿಮೆಯಿಂದ ಹೊರಬಂದು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, 15ನೇ ಶತಮಾನದಲ್ಲಿ ಬಸವತತ್ವವನ್ನು ಪುನರುತ್ಥಾಪಿಸಿದ ತೋಂಟದ ಸಿದ್ಧೇಶ್ವರ ಯತಿಗಳ ಹೆಸರಿನಲ್ಲಿ ಆರಂಭವಾದ ಈ ಮಹಾವಿದ್ಯಾಲಯ ಕೆಲವೇ ವರ್ಷಗಳಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಈ ಮೂರು ವಿಭಾಗಗಳಲ್ಲೂ ಉತ್ತಮ ಫಲಿತಾಂಶ ನೀಡುತ್ತಿದೆ. ಶಿಕ್ಷಣವು ಸ್ವಾವಲಂಬಿ ಬದುಕಿಗೆ ಆಧಾರವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಅರಿಯುವ ಜತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಈ ವೇಳೆ ಕಾಲೇಜು ಸಂಸತ್ತಿನ ನೂತನ ವಿದ್ಯಾರ್ಥಿ ಪ್ರತಿನಿಧಿಗಳು ಪ್ರಮಾಣವಚನ ಸ್ವೀಕರಿಸಿದರು. ಕಳೆದ ವರ್ಷ ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ತೋಂಟದ ಸಿದ್ಧಲಿಂಗ ಸ್ವಾಮಿಗಳ ಪ್ರತಿಭಾ ಪುರಸ್ಕಾರವನ್ನು ನಗದು ಬಹುಮಾನ ರೂಪದಲ್ಲಿ ನೀಡಲಾಯಿತು. ಉತ್ತಮ ಫಲಿತಾಂಶ ನೀಡಿದ ವಿಷಯವಾರು ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಗ್ರಂಥಪಾಲಕ ಡಾ. ಮಂಜುನಾಥ ಉತ್ತರಕರ ಮಾತನಾಡಿದರು.ಸರ್ಕಾರಿ ಐಟಿಐ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಮಾಲೂರ ಇದ್ದರು. ಕೊಟ್ರೇಶ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ವೈ.ಎಸ್. ಮತ್ತೂರ ಸ್ವಾಗತಿಸಿದರು. ರೇಷ್ಮಾ ಎಚ್. ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಭಜಂತ್ರಿ ವಂದಿಸಿದರು.