ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೌಷ್ಠಿಕ ಅಹಾರ ಮುಖ್ಯ

| Published : Jul 23 2024, 12:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೌಷ್ಠಿಕ ಆಹಾರ ಮುಖ್ಯವಾಗಿದ್ದು, ಸಜ್ಜಲಶ್ರೀ ಆರೋಗ್ಯ ಮಹಾವಿದ್ಯಾಲಯ ಗ್ರಾಮೀಣ ಭಾಗದಲ್ಲಿ ಗ್ರಾಮ ಸ್ವಚ್ಚತೆ, ಮಕ್ಕಳಲ್ಲಿ ಪೌಷ್ಠಿಕ ಆಹಾರ ಜಾಗೃತಿ ಮೂಡಿಸುತ್ತದೆ ಎಂದು ಪ್ರಾಧ್ಯಾಪಕ ರೇಣುಕರಾಜ ನಾಗಮ್ಮನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೌಷ್ಠಿಕ ಆಹಾರ ಮುಖ್ಯವಾಗಿದ್ದು, ಸಜ್ಜಲಶ್ರೀ ಆರೋಗ್ಯ ಮಹಾವಿದ್ಯಾಲಯ ಗ್ರಾಮೀಣ ಭಾಗದಲ್ಲಿ ಗ್ರಾಮ ಸ್ವಚ್ಚತೆ, ಮಕ್ಕಳಲ್ಲಿ ಪೌಷ್ಠಿಕ ಆಹಾರ ಜಾಗೃತಿ ಮೂಡಿಸುತ್ತದೆ ಎಂದು ಪ್ರಾಧ್ಯಾಪಕ ರೇಣುಕರಾಜ ನಾಗಮ್ಮನವರ ಹೇಳಿದರು.

ಬ.ವಿ.ವಿ ಸಂಘದ ಸಜ್ಜಲಶ್ರೀ ನರ್ಸಿಂಗ್‌ ಆರೋಗ್ಯ ವಿಜ್ಞಾನಗಳ ಮಹಾವಿದ್ಯಾಲಯದ, ಸಮುದಾಯ ಆರೋಗ್ಯ ಶೂಶ್ರುಷಾ ವಿಭಾಗದಿಂದ ಕೆಲವಡಿ ಹಾಗೂ ತಿಮ್ಮಸಾಗರ ಗ್ರಾಮಗಳ ಅಂಗನವಾಡಿ ಮಕ್ಕಳಲ್ಲಿ ಪೌಷ್ಠಿಕ ಆಹಾರದ ಮಹತ್ವ ಮತ್ತು ಸ್ವಚ್ಚತೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಪೌಷ್ಠಿಕತೆಯಿಂದ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ, ಕಣ್ಣಿನ ಸಮಸ್ಯೆ ಹಾಗೂ ಹೃದಯ ಸಂಬಂಧಿ ಸಮಸ್ಯಗಳಿಗೆ ಕಾರಣವಾಗುತ್ತದೆ. ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಪೌಷ್ಠಿಕ ಆಹಾರ ಮುಖ್ಯವಾಗಿ ಬೇಕು ಎಂದರು.

ಮಹಾವಿದ್ಯಾಲಯದ ಎಂ.ಎಸ್ಸಿ, ಬಿ.ಎಸ್ಸಿ ಹಾಗೂ ಪಿ.ಬಿ.ಬಿ.ಸ್ಸಿ ನರ್ಸಿಂಗ್‌ ವಿದ್ಯಾರ್ಥಿಗಳು ಪಾಲಕರಿಗೆ ಪೌಷ್ಠಿಕ ಆಹಾರದ ಮಹತ್ವದ ಬಗೆಗೆ ಕುರಿತು ಚಿತ್ರಗಳ ಸಮೇತ ವಿವರಿಸಿದರು. ಎಲ್ಲ ಮಕ್ಕಳ ಆಂಥ್ರೊಪೊಮೆಟ್ರಿಕ್ ಅಳತೆ ಮಾಡಿ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ವೈದ್ಯರ ಸಹಾಯದೊಂದಿಗೆ ಆರೈಕೆ ಮಾಡಲು ತಿಳಿಸಿದರು.

ವಿಭಾಗದ ಮುಖ್ಯಸ್ಥೆ ಶಿಲ್ಪಾ.ಎನ್.ಕೂಗಲಿ ಹಾಗೂ ಪ್ರಾಧ್ಯಾಪಕರಾದ ಡಾ.ರಾಜಶೇಖರ ಹೀರೆಗೌಡರ, ಜಗದೀಶ ಹೀರೆಮಠ, ಕಿರಣ ಕಲಕಬಂಡಿ ಹಾಗೂ ಎಲ್ಲ ನಾಲ್ಕು ಅಂಗನವಾಡಿಯ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಸೇರಿದಂತೆ ಎರಡೂ ಗ್ರಾಮಗಳ ಎಲ್ಲ ನಾಲ್ಕು ಅಂಗನವಾಡಿಗಳ ಅರವತ್ತಕ್ಕೂ ಹೆಚ್ಚು ಮಕ್ಕಳು ಪಾಲಕರೊಂದಿಗೆ ಭಾಗವಹಿಸಿದ್ದರು.