ಸಾರಾಂಶ
ಕಾಪು ಮಾರಿಗುಡಿ ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಸಮರ್ಪಣಾ ಪೂರ್ವಭಾವಿ ಸಭೆ ನಡೆಯಿತು. ಅನ್ನಸಂತರ್ಪಣೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಪಟ್ಟಿಯಲ್ಲಿ ಉಲ್ಲೇಖಿಸಿದ ನಿರ್ದಿಷ್ಟ ಬ್ರ್ಯಾಂಡ್ ಸಾಮಗ್ರಿಗಳನ್ನು ಭಕ್ತರು ಒದಗಿಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕಾಪು ಮಾರಿಗುಡಿಯ ಬ್ರಹ್ಮಕಲಶೋತ್ಸವಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗಳಿಂದಲೂ ಹೊರೆಕಾಣಿಕೆ ಸಮರ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನ್ನಸಂತರ್ಪಣೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಪಟ್ಟಿಯಲ್ಲಿ ಉಲ್ಲೇಖಿಸಿದ ನಿರ್ದಿಷ್ಟ ಬ್ರ್ಯಾಂಡ್ ಸಾಮಗ್ರಿಗಳನ್ನು ಭಕ್ತರು ಒದಗಿಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.ಮಂಗಳವಾರ ಕಾಪು ಮಾರಿಗುಡಿ ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಸಮರ್ಪಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇವಸ್ಥಾನಗಳಲ್ಲಿ ನಡೆಯುವ ಅನ್ನದಾನದಿಂದ ಕ್ಷೇತ್ರದ ಸಾನ್ನಿಧ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಕಾಪು ಮಾರಿಗುಡಿ ಬ್ರಹ್ಮಕಲಶೋತ್ಸವದಲ್ಲಿ 3 ರಿಂದ 4 ಲಕ್ಷ ಜನರಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಕ್ಷೇತ್ರಕ್ಕೆ ಫೆ.23ರಂದು ಉತ್ತರವಾಹಿನಿ (ಉಡುಪಿ ಜಿಲ್ಲೆ) ಹಸಿರುವಾಣಿ ಹೊರೆಕಾಣಿಕೆ ಆಯೋಜಿಸಲಾಗಿದೆ. ಹೊರೆಕಾಣಿಕೆ ಮೆರವಣಿಗೆಯ ಸಂದರ್ಭದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಜನಾ ತಂಡಗಳು ನೋಂದಣಿ ಮಾಡಬೇಕು ಎಂದರು.ಹೊರೆಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಫೆ.22ರಂದು 3 ಗಂಟೆಗೆ ದಕ್ಷಿಣ ವಾಹಿನಿ (ದ.ಕ. ಜಿಲ್ಲೆ) ಹೊರೆಕಾಣಿಕೆ ಮೆರವಣಿಗೆ ಕೊಪ್ಪಲಂಗಡಿಯಿಂದ ಕ್ಷೇತ್ರದ ವರೆಗೆ ನಡೆಯಲಿದೆ. ಫೆ.23ಕ್ಕೆ 3 ಗಂಟೆಗೆ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಹಸಿರುಹೊರೆಕಾಣಿಕೆ ಪಾಂಗಾಳದಿಂದ ಹೊರಟು ಕ್ಷೇತ್ರದವರೆಗೆ ಮೆರವಣಿಗೆಯಲ್ಲಿ ಸಾಗಲಿದೆ ಎಂದು ತಿಳಿಸಿದರು.ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯ ರಮೇಶ್ ಕಾಂಚನ್, ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೊಟ್ಯಾನ್, ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ಪ್ರಮುಖರಾದ ವೀಣಾ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಕೃಷ್ಣಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.