ಕನ್ನಡಪ್ರಭ ವಾರ್ತೆ ತುಮಕೂರು

ಪಾಗಲ್ ಪ್ರೇಮಿಯೊಬ್ಬ ಕಾರಿನೊಳಗೆ ನಾಡ ಬಾಂಬ್ ಸ್ಫೋಟಿಸಿಕೊಂಡು ಸಜೀವವಾಗಿ ದಹನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಗಲ್ ಪ್ರೇಮಿ‌ ವಿರುದ್ಧ ಯುವತಿ ದೂರು ನೀಡಿದ್ದಾಳೆ. ತುಮಕೂರು ಜಿಲ್ಲೆ ಶಿರಾ ತಾಲೂಕು ಜೋಗಿಹಳ್ಳಿಯಲ್ಲಿ ಘಟನೆ ನಡೆದಿತ್ತು. ಈ ನಡುವೆ ಪೊಲೀಸರು ಆತ ಎಸೆದಿದ್ದ ನಾಡ ಬಾಂಬ್‌ಗಳನ್ನು ನಾಶಪಡಿಸಿದ್ದಾರೆ.ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ನಾಲ್ಕು‌ ಪುಟಗಳ ದೂರು ಸಲ್ಲಿಸಿರುವ ಯುವತಿ ರಮ್ಯಾ, ತಮ್ಮಿಬ್ಬರ ನಡುವಿನ 6 ವರ್ಷದ ಪ್ರೀತಿಯ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ. ತಮ್ಮಿಬ್ಬರ ಪ್ರೀತಿಗೆ 6 ವರ್ಷವಾದರೂ ಕಳೆದ ನಾಲ್ಕು ವರ್ಷಗಳಿಂದ ಪ್ರೇಮಿ‌ ನಾಗೇಂದ್ರನ ನಡವಳಿಕ ಸಂಪೂರ್ಣ ಬದಲಾಗಿತ್ತು‌. 2 ವರ್ಷಗಳಿಂದ ಇದು ವಿಕೋಪಕ್ಕೆ ಹೋಗಿ ನಾಗೇಂದ್ರ ತೀವ್ರವಾಗಿ‌ ಕಿರುಕುಳ‌ ನೀಡುತ್ತಿದ್ದ. ಸಣ್ಣಪುಟ್ಟ ವಿಚಾರಕ್ಕೂ ಹೊಡೆಯುವುದು, ಬೈಯುವುದು ಮಾಡುತ್ತಿದ್ದ, ಇದರಿಂದ ಬೇಸತ್ತು ದೂರವಾಗಿದ್ದೆ. ಅವನಿಂದ ದೂರವಾಗಿದ್ದರೂ ಪದೇ ಪದೇ ನನ್ನನ್ನು ಹುಡುಕಿಕೊಂಡು ಬಂದು ಗಲಾಟೆ ಮಾಡಿ ಹೋಗುತ್ತಿದ್ದ. ಅವನ ವರ್ತನೆಯಿಂದ ಬೇಸತ್ತು ಊರು ತೊರೆದಿದ್ದಾಗಿ ತಿಳಿಸಿದ್ದಾಳೆ.‌ ಈಕೆಯ ದೂರಿನ ಹಿನ್ನೆಲೆಯಲ್ಲಿ ನಾಗೇಂದ್ರನ ವಿರುದ್ಧ ಕೊಲೆಯತ್ನ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ ಅಡಿ ಎಫ್ಐಆರ್ ದಾಖಲಾಗಿದೆ.

ಆತ ಎರಡು ದಿವಸದ ಹಿಂದೆ ಈಕೆಯ ರೂಮ್ ಬಳಿ ಹೋಗಿ ನನ್ನ ಬಳಿ ನಾಡ ಬಾಂಬ್ ಇದ್ದು, ನೀನು ಮದುವೆಗೆ ಒಪ್ಪದಿದ್ದರೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನಂತೆ. ಬೆದರಿಕೆ ಹಾಕಿದ ಬಳಿಕ‌ ಆತ ನೇರವಾಗಿ ಊರಿಗೆ ತೆರಳಿ ನಾಡ ಬಾಂಬ್ ತಂದಿದ್ದ ಎಂದು ತಿಳಿದು ಬಂದಿದೆ. ತನ್ನ ಬಳಿ‌ 3 ನಾಡ ಬಾಂಬ್ ಇರುವುದನ್ನು ಆತ ರಮ್ಯಾಗೆ ತಿಳಿಸಿದ್ದನಂತೆ. ಒಂದನ್ನು ಕಾರಿನಲ್ಲೇ ಸ್ಫೋಟಿಸಿಕೊಂಡಿದ್ದು, ಉಳಿದೆರಡನ್ನು ಹೊರಗೆ ಎಸೆದಿದ್ದ. ಶಿರಾ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಮೆಗ್ಗರ್ ಬಳಸಿ ಇವುಗಳನ್ನು ಪೊಲೀಸರು ನಿಷ್ಕ್ರೀಯಗೊಳಿಸಿದ್ದು, ನಾಡ ಬಾಂಬ್‌ನ ತೀವ್ರತೆ ಕಂಡು ಪೊಲೀಸರು ಶಾಕ್ ಆಗಿದ್ದಾರೆ ಎನ್ನಲಾಗಿದೆ. ನಾಡ ಬಾಂಬ್‌ನ ಮತ್ತಷ್ಟು ಮಾಹಿತಿಗಾಗಿ ಅದರ ಸ್ಯಾಂಪಲ್‌ಗಳನ್ನು ಬೆಂಗಳೂರಿನ ಎಫ್ಎಸ್ಎಲ್‌ಗೆ ರವಾನಿಸಲಾಗಿದೆ.

ಈ ಮಧ್ಯೆ, ಗಾಯಾಳು ರಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಆಕೆಯ ಕುಟುಂಬಸ್ಥರು ಅವಳನ್ನು ಅಂಕೋಲಾಕ್ಕೆ ಕರೆದೊಯ್ದಿದ್ದಾರೆ. ಈ ಮಧ್ಯೆ, ಮೃತ ನಾಗೇಂದ್ರನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.