ಈಗಾಗಲೆ 40 ಮಿಷನ್ ವಿಶಿಷ್ಟ ಯೋಜನೆಯ ಕಾರ್ಯ ಅನುಷ್ಠಾನವಾಗುತ್ತಿದ್ದು, ಮಕ್ಕಳು ಧೈರ್ಯವಾಗಿ ಪರೀಕ್ಷೆ ಎದುರಿಸಲು ಸಜ್ಜಾಗುತ್ತಿರುವುದು ಕಂಡು ಬರುತ್ತಿದೆ

ಕುಷ್ಟಗಿ: ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯು 40+ ಮಿಷನ್ ಎಂಬ ವಿಶಿಷ್ಟ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದ್ದು, ಶೇ. 100ರಷ್ಟು ಫಲಿತಾಂಶ ತರಲು ಕಾರ್ಯ ಯೋಜನೆ ರೂಪಿಸಲಾಗಿದೆ.

ಕಳೆದ ವರ್ಷ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದುಳಿದಿರುವ ಶಾಲೆಗಳನ್ನು ಗುರುತಿಸಿ ವಿಶೇಷ ತರಗತಿ ನಡೆಸುವ ಮೂಲಕ ಸುಧಾರಣೆ ತರಲು ಕಾರ್ಯ ಯೋಜನೆ ರೂಪಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಠ್ಯಾಧಾರಿತ ಪ್ರಶ್ನಾವಳಿ ತಯಾರಿಸಲಾಗಿದೆ. ಒಂದು ಅಂಕದ ಪ್ರಶ್ನೆಗಳ ಜತೆಗೆ ಸಾಧಾರಣ ಉತ್ತರ ಬಯಸುವ ಪ್ರಶ್ನೆ ಗ್ರಹಿಸಿ, ಸರಳವಾಗಿ ಉತ್ತರ ಬರೆಯಲು ಪ್ರೇರೇಪಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಈಗಾಗಲೆ 40+ಮಿಷನ್ ವಿಶಿಷ್ಟ ಯೋಜನೆಯ ಕಾರ್ಯ ಅನುಷ್ಠಾನವಾಗುತ್ತಿದ್ದು, ಮಕ್ಕಳು ಧೈರ್ಯವಾಗಿ ಪರೀಕ್ಷೆ ಎದುರಿಸಲು ಸಜ್ಜಾಗುತ್ತಿರುವುದು ಕಂಡು ಬರುತ್ತಿದೆ.

ವಿಷಯವಾರು ಪ್ರತಿಭಾವಂತ, ಅನುಭವಿ ಶಿಕ್ಷಕರನ್ನು ಗುರುತಿಸಿ ಪ್ರಶ್ನೋತ್ತರ ಮಾಲಿಕೆಯುಳ್ಳ ಪುಸ್ತಕ ರೂಪಿಸಿದ್ದು, ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಇದನ್ನು ಆಧಾರವಾಗಿಟ್ಟುಕೊಂಡು ಬೋಧನೆ, ಅಭ್ಯಾಸ ಮಾಡಿಸುತ್ತಿದ್ದಾರೆ. ಇದರ ಜತೆಗೆ ಕಳೆದ ಮೂರ್ನಾಲ್ಕು ವರ್ಷಗಳ ಮಾದರಿ ಪ್ರಶ್ನೆಪತ್ರಿಕೆಗಳ ಪ್ರಶೋತ್ತರ ಬರೆಯುವ ಅಭ್ಯಾಸ ಸಹ ಶಾಲೆಯಲ್ಲಿ ಮಾಡಿಸಲಾಗುತ್ತಿದೆ.

ಒಟ್ಟು ಆರು ವಿಷಯಗಳ 40 ಪ್ಲಸ್ ಮಿಷನ್ ಯೋಜನೆಯ ಪುಸ್ತಕ ಸಿದ್ಧಪಡಿಸಲಾಗಿದ್ದು, ಪ್ರತಿ ವಿಷಯದ ಸರಳ ಬೋಧನೆ, ಟಿಪ್ಪಣಿ, ಉತ್ತರ ಸಿದ್ಧಪಡಿಸಲು ಅನುಕೂಲವಾಗುವಂತೆ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ.

ಪರೀಕ್ಷೆಯ ದೃಷ್ಟಿಯಿಂದ ಮಹತ್ವದ ವಿಷಯ ಮನವರಿಕೆ ಮಾಡಿಸುವ ಪ್ರಯತ್ನ ನಡೆಯುತ್ತಿದೆ. ಮಕ್ಕಳಿಗೆ ಪ್ರಶ್ನೆಪತ್ರಿಕೆ ನೋಡಿದಾಕ್ಷಣ ಆತ್ಮವಿಶ್ವಾಸದಿಂದ ಪರಿಕ್ಷೆ ಬರೆಯುವ ವಿಶ್ವಾಸ ಶಿಕ್ಷಕರು ತುಂಬುತ್ತಿದ್ದಾರೆ.

ತಾಲೂಕಿನಲ್ಲಿ ಕಡಿಮೆ ಫಲಿತಾಂಶ ಪಡೆದುಕೊಂಡ ಶಾಲೆಗಳನ್ನು ಪಟ್ಟಿ ಮಾಡಲಾಗಿದ್ದು, ಅಂತಹ ಶಾಲೆಗಳಿಗೆ ಡಯಟ್ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷವಾಗಿ ಭೇಟಿ ನೀಡಿ ಶಾಲೆಯ ಮುಖ್ಯೋಪಾಧ್ಯಾಯರು, ವಿಷಯವಾರು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳನ್ನು ನಿರಂತರ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಪ್ರೇರೇಪಿಸಲು ಮಾರ್ಗದರ್ಶನ ನೀಡುತ್ತಿದ್ದಾರೆ.

ಏನಿದು ಮಿಷನ್-40+: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆ ಹಾಕಿಕೊಳ್ಳಲಾಗಿದೆ. ಸಂಕಲನಾತ್ಮಕ ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ ಎದುರಿಸಿದ ನಂತರದಲ್ಲಿ ಆ ಪರೀಕ್ಷೆಗಳ ಫಲಿತಾಂಶ ಆಧರಿಸಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ 40+ ಯೋಜನೆಯಡಿ ವಿಶೇಷ ತರಬೇತಿ ನೀಡಲಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಕನಿಷ್ಠ 40 ಅಂಕ ಪಡೆದುಕೊಂಡು ಉತ್ತೀರ್ಣರಾಗಬೇಕು ಎನ್ನುವುದು ಯೋಜನೆಯ ಮೂಲ ಉದ್ದೇಶವಾಗಿದೆ.

ಕುಷ್ಟಗಿ ತಾಲೂಕಿನಲ್ಲಿ 65 ಪ್ರೌಢಶಾಲೆಗಳಿದ್ದು, ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು 4770 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೇ. 30ರಷ್ಟು ಮಿಷನ್-40 ಪ್ಲಸ್ ಯೋಜನೆಗೆ ಮಕ್ಕಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಎಲ್ಲ ತರಹದ ತರಬೇತಿ ನೀಡುತ್ತಿದ್ದೇವೆ ಎಂದು ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಮಹ್ಮದಇಸಾಕ ತಿಳಿಸಿದ್ದಾರೆ.

ಕುಷ್ಟಗಿ ತಾಲೂಕಿನಲ್ಲಿ 40 ಪ್ಲಸ್ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದ್ದೇವೆ. ವಿಷಯವಾರು ಹಿಂದುಳಿದಿರುವಿಕೆ ಗುರುತಿಸಿ, ಸಂಬಂಧಪಟ್ಟ ಶಿಕ್ಷಕರಿಗೆ ತರಬೇತಿ ನೀಡಿ, ಬೋಧನೆಗೆ ಸಜ್ಜುಗೊಳಿಸಿದ್ದೇವೆ. ಶೇ. 100ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಿದ್ದೇವೆ ಎಂದು ಕುಷ್ಟಗಿ ಬಿಇಒ ಉಮಾದೇವಿ ಬಸಾಪುರ ತಿಳಿಸಿದ್ದಾರೆ.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಫಲಿತಾಂಶ ಹೆಚ್ಚಳ ಮಾಡಲು ಈ 40+ಮಿಷನ್ ಯೋಜನೆ ಜಾರಿಗೆ ತಂದಿದ್ದು, ನಮ್ಮ ಕುಷ್ಟಗಿ ತಾಲೂಕಿನಲ್ಲಿ ಸಮರ್ಪಕ ಅನುಷ್ಠಾನಕ್ಕೆ ಕ್ರಮಕೈಗೊಂಡಿದ್ದು ಈ ವರ್ಷ ಹೆಚ್ಚಿನ ಫಲಿತಾಂಶ ನಿರೀಕ್ಷೆ ಹೊಂದಲಾಗಿದೆ ಎಂದು ಕುಷ್ಟಗಿ ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಎಂ. ತಿಳಿಸಿದ್ದಾರೆ.