ಕರ್ನಾಟಕದಲ್ಲಿ ದರೋಡೆಗಳು ಸಾಮಾನ್ಯವಾಗಿವೆ. ₹400 ಕೋಟಿ ಇದೆಯೋ, ₹800 ಕೋಟಿಯೋ ಇನ್ನೂ ತನಿಖೆ ಆಗಿಲ್ಲ. ಈ ಪ್ರಕರಣ ಇಡಿ, ಸಿಬಿಐಗೆ ಕೊಡಬೇಕು. ಹಣದ ಹಿಂದಿನ ಷಡ್ಯಂತ್ರ ಬಯಲು ಮಾಡಬೇಕು. ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕದಲ್ಲಿ ದರೋಡೆಗಳು ಸಾಮಾನ್ಯವಾಗಿವೆ. ₹400 ಕೋಟಿ ಇದೆಯೋ, ₹800 ಕೋಟಿಯೋ ಇನ್ನೂ ತನಿಖೆ ಆಗಿಲ್ಲ. ಈ ಪ್ರಕರಣ ಇಡಿ, ಸಿಬಿಐಗೆ ಕೊಡಬೇಕು. ಹಣದ ಹಿಂದಿನ ಷಡ್ಯಂತ್ರ ಬಯಲು ಮಾಡಬೇಕು. ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ₹400 ಕೋಟಿಯ ಎರಡು ಕಂಟೇನರ್ ದರೋಡೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಬೆಳಗಾವಿ ದರೋಡೆ ಉದಾಹರಣೆಯಾಗಿದೆ. ಈ ಸರ್ಕಾರ ಇರುವವರೆಗೂ ರಾಜ್ಯದಲ್ಲಿ ಶಾಂತಿ ಸುರಕ್ಷತೆ ಇಲ್ಲ. ಕಠಿಣ ಕಾನೂನು ಜಾರಿಯಾಗಲ್ಲ. ಹೀಗಾಗಿ ದರೋಡೆ ಈಜಿಯಾಗಿ ಆಗುತ್ತಿವೆ. ಹಿಂದೂ- ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹೆಚ್ಚಾಗಿವೆ. ಬೆಂಗಳೂರಲ್ಲಿ ಹಾಡಹಗಲೇ ಕೋಟ್ಯಂತರ ಲೂಟಿ ಮಾಡಿದರೂ ಏನು ಆಗಲಿಲ್ಲ. ಇಲ್ಲಿನ ಡ್ರಗ್ ಕಾರ್ಖಾನೆಗಳನ್ನು ಮಹಾರಾಷ್ಟ್ರದವರು ಕಂಡು ಹಿಡಿಯುತ್ತಿದ್ದಾರೆ. ಸಿಎಂ ಕ್ಷೇತ್ರದಲ್ಲೆ ಡ್ರಗ್ಸ್ ಫ್ಯಾಕ್ಟರಿ ಇತ್ತು. ಬೆಂಗಳೂರಲ್ಲಿ ಡ್ರಗ್ಸ್ ನಡೆಯುತ್ತಿದೆ ಎಂದು ಆರೋಪಿಸಿದರು.
ಗೃಹ ಮಂತ್ರಿ ಜಿ.ಪರಮೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಅಂತಾರಾಷ್ಟ್ರೀಯ ಗೊತ್ತಿಲ್ಲ ಮಂತ್ರಿ ಎಂದರೆ ಅದು ಕರ್ನಾಟಕ ಗೃಹ ಮಂತ್ರಿ. ಅವರಿಗೆ ₹400 ಕೋಟಿಯದ್ದು ಗೊತ್ತಿಲ್ಲ, ಬೆಂಗಳೂರಲ್ಲಿ ಮರ್ಡರ್ ಆದರೂ ಗೊತ್ತಿಲ್ಲ. ವಿಜಯಪುರದಲ್ಲಿ ಸಿಎಂ ಕಾರ್ಯಕ್ರಮ ಆಗಿದ್ದು ಗೊತ್ತಿಲ್ಲ, ಅವರು ಊಟ ಮಾಡಿದ್ದು ಗೊತ್ತಿಲ್ಲ, ಮಲಗಿದ್ದು ಗೊತ್ತಿಲ್ಲ ಎಂದು ಲೇವಡಿ ಮಾಡಿದರು.ಸರ್ಕಾರಿ ಹುದ್ದೆಗಳಿಗೆ ಹಣ ಕೊಡಬೇಕು ಎಂದು ಹೊಸ ಬಾಂಬ್ ಹಾಕಿದ ಯತ್ನಾಳ, ಪೊಲೀಸ್ ಇಲಾಖೆಯ ಮೇಲೆ ಸರ್ಕಾರಕ್ಕೆ ಕಂಟ್ರೋಲ್ ಇಲ್ಲ. ಎಲ್ಲ ಇಲಾಖೆ ಅಧಿಕಾರಿಗಳನ್ನು ಆಕ್ಸನ್‌ಗೆ (ಹರಾಜಿಗೆ) ಇಟ್ಟಿದ್ದಾರೆ. ಬೆಂಗಳೂರು ಕಮಿಷನರ್ ಆಗಬೇಕಾದರೆ ₹50 ಕೋಟಿ ಕೊಡಬೇಕು. ಡಿಸಿ ಆಗೋಕೆ ₹10 ಕೋಟಿ ಕೊಡಬೇಕು. ಒಳ್ಳೆ ಒಳ್ಳೆ ಪೋಸ್ಟ್‌ಗಳು ಹರಾಜು ಆಗುತ್ತಿವೆ. ಪೋಸ್ಟ್ ಹರಾಜಾದರೆ ಯಾರೂ ಒಳ್ಳೆಯ ಅಧಿಕಾರಿಗಳು ಉಳಿಯಲ್ಲ, ಒಳ್ಳೆಯ ಸ್ಥಾನದಲ್ಲಿ ಇರೋದಿಲ್ಲ ಎಂದರು.
ಯತ್ನಾಳರು ಬಿಜೆಪಿಯ ಸಪೋರ್ಟ್ ಮೂಲಕ ಸಿಎಂ ಆಗುತ್ತಾರಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರೇ ಕಾಂಗ್ರೆಸ್‌ನ ಕೊನೆಯ ಸಿಎಂ. 2028ಕ್ಕೆ ನನ್ನದೇ ಜೆಸಿಬಿ ಪಾರ್ಟಿಯೇ ಅಧಿಕಾರಕ್ಕೆ ಬರಬಹುದು. 2028ಕ್ಕೆ ನಾನೇ ಸಿಎಂ. ಬಿಜೆಪಿಗೆ ಬಂದು ಸಿಎಂ ಆಗ್ತಿನಾ? ಅಥವಾ ಬಿಜೆಪಿ ಸಪೋರ್ಟ್ ಪಡೆದು ಸಿಎಂ ಆಗ್ತಿನಾ ಯಾರಿಗೊತ್ತು? ಯಾರು ಏನೇ ಹೇಳಿದ್ರೂ ನಾನೇ 2028ಕ್ಕೆ ಸಿಎಂ ಆಗೋದು ಗ್ಯಾರಂಟಿ. ವಿಜಯೇಂದ್ರನೇ ಸಿಎಂ ಆಗ್ತಾನೆ ಎಂದು ಎಷ್ಟೇ ಹೇಳಿದ್ರೂ, ನಾನೇ ಸಿಎಂ ಆಗೋದು ಗ್ಯಾರಂಟಿ. 5 ವರ್ಷ ನಾನೇ ಸಿಎಂ ಆಗಿರ್ತಿನಿ, ಕರ್ನಾಟಕದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡ್ತೀನಿ. ನಾನು ಸಿಎಂ ಆದ್ಮೇಲೆ ಬುಲ್ಡೋಜರ್ ಸದ್ದು ಎಲ್ಲಾ ಕಡೆಗೆ ಕೇಳುತ್ತವೆ. 2.80 ಲಕ್ಷ ಸರ್ಕಾರಿ ಖಾಲಿ ಹುದ್ದೆ ಭರ್ತಿ ಆಗುತ್ತವೆ. 3 ಲಕ್ಷ ಜನರಿಗೆ ಉದ್ಯೋಗ ಕೊಡ್ತೀನಿ ಎಂದು ಹೇಳಿದರು.ಕಾಂಗ್ರೆಸ್‌ನಿಂದ ಹೊರ ಬಂದ ನಾಯಕ ಮುಂದೆ ಸಿಎಂ ಆಗುತ್ತಾರೆ ಎಂಬ ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲ ಜ್ಯೋತಿಷಿಗಳು ಸುಳ್ಳು ಇದ್ದಾರೆ. ಹಣ ಕೊಟ್ಟ ತಕ್ಷಣ ಏನೇನೋ ಹೇಳುತ್ತಾರೆ. ಪಾದಪೂಜೆ ಮಾಡಿದರೆ ಇವರೇ ವೀರಶೈವ ಮಹಾಸಭಾ ಅಧ್ಯಕ್ಷರು, ಸಿಎಂ ಎಂದೆಲ್ಲ ಹೇಳಿ ಬಿಡ್ತಾರೆ. ಸ್ವಾಮೀಜಿಗಳು ಘನತೆ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ರಾಜ್ಯಪಾಲರು ಕೇಂದ್ರ ಬಿಜೆಪಿ ಏಜೆಂಟ್ ಎಂಬ ಸಚಿವರ ಹೇಳಿಕೆಗೆ, ರಾಜ್ಯಪಾಲರು ಯಾವುದೇ ಪಕ್ಷ ಅಲ್ಲ, ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಕಾಂಗ್ರೆಸ್ಸಿಗರಿಗೆ ಏಜೆಂಟರು ಎನ್ನುವ ಚಟವಿದೆ. ಕಾಂಗ್ರೆಸ್ಸಿಗರೇ ಏಜೆಂಟಗಿರಿ ಮಾಡುತ್ತಾ ಬಂದವರು. ಸೋನಿಯಾಗಾಂಧಿ, ರಾಹುಲ್ ಗಾಂಧಿ ಏಜೆಂಟರು, ಅವರಿಗೆ ಏಜೆಂಟರು ಎನ್ನುವ ಚಟವಿದೆ. ರಾಜ್ಯಪಾಲರು ದಲಿತರು ಅನ್ನೋ ಕಾರಣಕ್ಕೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ರಾಜ್ಯಪಾಲರು ಹಿರಿಯ ದಲಿತ ಮುಖಂಡರು, ಅವರಿಗೆ ಅಪಮಾನ ಮಾಡೋದು, ಸೆಡ್ಡು ಹೊಡೆಯೋದು, ಧಿಕ್ಕಾರ ಕೂಗುವುದು. ತಾವೇ ಬಟ್ಟೆ ಹರಿದುಕೊಳ್ಳೋದು ಎಂದು ವಾಗ್ದಾಳಿ ನಡೆಸಿದರು.ನಾಚಿಕೆಗೇಡಿನ ಸಂಗತಿ. ಬಿಜೆಪಿಯವರು ಬಟ್ಟೆ ಹರಿದಿಲ್ಲ, ರಾಜ್ಯಸಭಾ ಸದಸ್ಯನಾಗಿ ಕೆಲಸ ಮಾಡಿದವ ತಾನೇ ಬಟ್ಟೆ ಹರಿದುಕೊಳ್ತಾನೆ. ತಾವೆ ಅಂಗಿ ಹರಿದುಕೊಂಡು ಬಿಜೆಪಿಯವರು ಬಟ್ಟೆ ಹರಿದರು, ನನಗೆ ಹೊಡೆದರು ಅಂತ ನಾಟಕ ಮಾಡ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಕಾಂಗ್ರೆಸ್ಸಿಗರು ಇದೇ ನಾಟಕ ಮಾಡಿದ್ದಾರೆ. ನೆಹರು ದೊಡ್ಡ ಕ್ರಾಂತಿ ಏನು ಮಾಡಿಲ್ಲ. ಸ್ವಾತಂತ್ರ್ಯ ಸಿಕ್ಕಿದ್ದು ಸುಭಾಶ್ಚಂದ್ರ ಬೋಸ್‌ರಿಂದ ಎಂದು ಸ್ವತಃ ಅಂಬೇಡ್ಕರ್ ಹೇಳಿದ್ದಾರೆ. ಚರಕ ತಿರುಗಿಸಿ, ನೆಹರು ಟೋಪಿ ಹಾಕಿದ್ದರಿಂದ ಸ್ವಾತಂತ್ರ್ಯ ಸಿಕ್ಕಿಲ್ಲ, ನೇತಾಜಿ ಭಯದಿಂದ ಬ್ರಿಟಿಷರು ಭಾರತ ಬಿಟ್ಟು ತೊಲಗಿದರು. ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಅವರೇ ಏಜೆಂಟರು. ನಮ್ಮ ರಾಜ್ಯಪಾಲರು ಸ್ವಚ್ಛ ಹೃದಯದ ದಲಿತರು. ದಲಿತರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ, ದಲಿತರು ಉನ್ನತ ಸ್ಥಾನದಲ್ಲಿದ್ದಾಗ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದರು.ಬಾಂಗ್ಲಾ ನಿವಾಸಿಗಳ ಗಡಿಪಾರಿಗಾಗಿ ಕೇಂದ್ರಕ್ಕೆ ಪತ್ರದೇಶದ ಐಕ್ಯತೆಗೆ, ಒಗ್ಗಟ್ಟಿಗೆ ಹಾಗೂ ಸಮಗ್ರತೆಗಾಗಿ ಕೂಡಲೇ ಬಾಂಗ್ಲಾ ನಿವಾಸಿಗಳನ್ನು ಗಡಿಪಾರುಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೇಂದ್ರ ಗೃಹ ಸಚಿವ ಅಮಿಶ್ ಶಾಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಪತ್ರ ಬರೆದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ವೈಫಲ್ಯದಿಂದ ಕರ್ನಾಟಕ ಬಾಂಗ್ಲಾ ನಿವಾಸಿಗಳ ತವರೂರಾಗಿದೆ. ರಾಜ್ಯದೆಲ್ಲೆಡೆ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದಲ್ಲದೆ, ಆಧಾರ್ ಕಾರ್ಡ್ ಸೇರಿದಂತೆ ಅನೇಕ ಗುರುತಿನ ಚೀಟಿಯನ್ನು ಪಡೆದು ಸ್ಥಳೀಯ ದೇಶವಾಸಿಗಳಿಗೆ ಸಲ್ಲಬೇಕಾಗಿದ್ದ ಸಂಪನ್ಮೂಲಗಳನ್ನು ಬಳಸುತ್ತಿರುವುದು ದುರದೃಷ್ಟಕರ. ಇಲ್ಲಿ ದುಡಿಯುವ ಹಣವನ್ನು ಬಾಂಗ್ಲಾದೇಶಕ್ಕೆ ರವಾನಿಸಿ, ಭಾರತವನ್ನು ಅಭದ್ರಗೊಳಿಸಲು ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿರುವ ಬಗ್ಗೆಯೂ ಗೊತ್ತಾಗಿದೆ. ಕಾಫಿ ತೋಟ, ತ್ಯಾಜ್ಯ ನಿರ್ವಹಣಾ ಘಟಕ, ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸ, ಚಾಲಕ, ಚಿಂದಿ ಆಯುವ ಕೆಲಸವನ್ನು ಮಾಡಿಕೊಂಡು ಭಾರತವನ್ನೇ ತಮ್ಮ ನೆಲೆಯನ್ನಾಗಿ ಮಾಡಿಕೊಂಡಿರುವುದನ್ನು ಮಾಧ್ಯಮಗಳು, ಹಿಂದೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಯಲಿಗೆಳಿದಿದ್ದಾರೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಅಕ್ರಮ ಬಾಂಗ್ಲಾದೇಶಿ ವಾಸಿಗಳನ್ನು ಹುಡುಕಿಕೊಟ್ಟ ಮಾಧ್ಯಮ, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಸರ್ಕಾರ ಪರೋಕ್ಷವಾಗಿ ಅವರ ಪರವೇ ನಿಂತಿದೆ. ರಾಜ್ಯದಲ್ಲಿರುವ ಪ್ರತಿಯೊಬ್ಬ ಬಾಂಗ್ಲಾದೇಶೀಯರನ್ನು ಎಸ್ಐಆರ್ ಮಾದರಿಯಂತೆ ಪತ್ತೆ ಮಾಡುವುದು, ಅವರ ದಾಖಲಾತಿಯನ್ನು ಅಳಿಸುವುದು ಹಾಗೂ ಅವರ ದೇಶಕ್ಕೆ ಗಡಿಪಾರು ಮಾಡುವ ಮಾದರಿಯಲ್ಲಿ ಹುಡುಕಿ ಅವರನ್ನು ಗಡಿಪಾರು ಮಾಡುವಂತೆ ಸವಿವರವಾಗಿ ಪತ್ರದಲ್ಲಿ ವಿವರಿಸಿರುವುದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಯತ್ನಾಳ ತಿಳಿಸಿದ್ದಾರೆ.