ನಾನಾ ಹೆಸರಾಂತ ಕಂಪನಿಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು ₹45 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದು, ಇದರಿಂದಾಗಿ ಜಿಲ್ಲೆಯ ಯುವಜನರಿಗೆ ಇಲ್ಲೇ ಉಜ್ವಲ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ
ಕನ್ನಡಪ್ರಭ ವಾರ್ತೆ ವಿಜಯಪುರ
ಬರದ ನಾಡು ಎಂಬ ಹಣೆಪಟ್ಟಿ ಅಂಟಿಕೊಂಡಿದ್ದ ವಿಜಯಪುರ ಜಿಲ್ಲೆಯಲ್ಲಿ ಹೆಸರಾಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ಜಿಲ್ಲಾಡಳಿತದ ವತಿಯಿಂದ ಸೋಮವಾರ ನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ವಿವಿಧ ಕಾರ್ಖಾನೆ, ಕಂಪನಿಗಳ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗುವುದಲ್ಲದೇ, ಭವಿಷ್ಯದಲ್ಲಿ ವಿಜಯಪುರ ಜಿಲ್ಲೆಯ ಮ್ಯಾನುಫ್ಯಾಕ್ಚರ್ ಕ್ಲಸ್ಟರ್‌ವಾಗಿ ರೂಪಗೊಳ್ಳಲಿದೆ. ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಬಂಡವಾಳ ಹೂಡಿಕೆ ಕುರಿತು ಮಾತುಕತೆ ನಡೆಸಿದ್ದೇನೆ. ನಾನಾ ಹೆಸರಾಂತ ಕಂಪನಿಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು ₹45 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದು, ಇದರಿಂದಾಗಿ ಜಿಲ್ಲೆಯ ಯುವಜನರಿಗೆ ಇಲ್ಲೇ ಉಜ್ವಲ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮರ್ಥ ನಾಯಕತ್ವದಲ್ಲಿ ನಮ್ಮ ಸರ್ಕಾರವು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಕಾಳಜಿ ಪೂರ್ವಕವಾದ ಪಾರದರ್ಶಕ ಆಡಳಿತ ನೀಡುತ್ತ ರಾಜ್ಯದ ಸರ್ವ ಜನರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಿಶೇಷವಾಗಿ ಸಂವಿಧಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಆತ್ಮವೆಂದೆ ಕರೆಯಲ್ಪಡುವ ಪೀಠಿಕೆಯನ್ನು ಅಳವಡಿಸಲಾಗಿರುತ್ತದೆ. ಪ್ರತಿನಿತ್ಯ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದಿಸಲಾಗುತ್ತಿದೆ. ನಮ್ಮ ಸರ್ಕಾರ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ ಎಂದು ಹೇಳಿದರು.ಪಂಚ ಗ್ಯಾರಂಟಿಯಿಂದ ಜನಪರ ಸರಕಾರವೆಂದು ಹೆಸರು ಬಂದಿದೆ. ಗ್ಯಾರಂಟಿ ಯೋಜನೆಗಳಿಗೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 3788 ಕೋಟಿ 44 ಲಕ್ಷ ರು. ವೆಚ್ಚ ಮಾಡಲಾಗಿದೆ. ಇದರೊಂದಿಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹340 ಕೋಟಿ ವಿಶೇಷ ಅನುದಾನ ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ಹೊಸದಾಗಿ 27 ನಗರ ಸಾರಿಗೆ ವಾಹನಗಳು ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ 75 ವಿದ್ಯುತ್ ಚಾಲಿತ ನಗರ ಸಾರಿಗೆ ಬಸ್ ಒದಗಿಸಲಾಗುತ್ತಿದೆ. ರೈತರ ಹಿತಾಸಕ್ತಿ ಕಾಪಾಡಲು ಹಗಲಿನಲ್ಲಿ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ತನ್ನು ಪ್ರತಿನಿತ್ಯ ನೀಡುವ ಉದ್ದೇಶದೊಂದಿಗೆ ಹಲವೆಡೆ ಉಪಕೇಂದ್ರಗಳನ್ನು ಕಾರ್ಯಾರಂಭಿಸಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ ಸುಮಾರು 610 ರೈತರ ಜಮೀನುಗಳಲ್ಲಿ 555 ಕೊಳವೆ ಬಾವಿಗಳಿಗೆ ₹18 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕಂದಾಯ ಇಲಾಖೆಯಡಿ ಜಿಲ್ಲೆಯಲ್ಲಿ ದಾಖಲೆ ರಹಿತ ಪ್ರದೇಶಗಳ ಅಥವಾ ಲಂಬಾಣಿ ತಾಂಡಾಗಳ 193 ಪ್ರದೇಶಗಳನ್ನು ಹೊಸ ಕಂದಾಯ ಗ್ರಾಮಗಳನ್ನಾಗಿ ಅಂತಿಮ ಅಧಿಸೂಚನೆ ಹೊರಡಿಸಿ,. ಈ ತಾಂಡಾ ಪ್ರದೇಶಗಳಲ್ಲಿ ಇರುವ ಮನೆಗಳಿಗೆ ಈಗಾಗಲೇ 13,287 ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.ಸಚಿವರಿಂದ ಧ್ವಜಾರೋಹಣ, ಆಕರ್ಷಕ ಪಥ ಸಂಚಲನ:
ವಿಜಯಪುರ ನಗರದ ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಸಚಿವ ಡಾ.ಎಂ.ಬಿ.ಪಾಟೀಲರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ನಂತರ ಧ್ವಜವಂದನೆ ಸ್ವೀಕರಿಸಿ, ತೆರೆದ ವಾಹನದಲ್ಲಿ ಪೆರೇಡ್ ತಂಡಗಳ ಪರಿವೀಕ್ಷಣೆ ನಡೆಸಿದರು.ಐಪಿಎಸ್ ಪ್ರೊಬೆಷನರಿ ಅಧಿಕಾರಿ ನಿಶಿತಾ ಗುಪ್ತಾ ನೇತೃತ್ವದ ಪಥಸಂಚಲನದಲ್ಲಿ ಡಿ.ಎ.ಆರ್.ದಾನೇಶ್ವರಿ ಕಲ್ಯಾಣಿ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಐಆರ್‌ಬಿ ಘಟಕದ ಪ್ರಸಾದ ಜುನಮಾಲಾ ಮುಂದಾಳತ್ವದಲ್ಲಿ ಐಆರ್‌ಬಿ ಪೊಲೀಸ್ ಪಡೆ ಪಥಸಂಚಲನ ಹಾಗೂ ಪೊಲೀಸ್ ವಾದ್ಯಮೇಳ ನೋಡುಗರ ಕಣ್ಮನ ಸೆಳೆಯಿತು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಮಹಾನಗರ ಪಾಲಿಕೆ ಮಹಾಪೌರ ಎಂ.ಎಸ್.ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಎಸ್ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.