ಕನ್ನಡಪ್ರಭ ವಾರ್ತೆ ವಿಜಯಪುರ

ಆಸ್ತಿ ವಿವಾದದ ಹಿನ್ನೆಲೆ ಏ.14ರಂದು ನಡೆದಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ, ಗ್ರಾಪಂ ಮಾಜಿ ಸದಸ್ಯ ರಾಜು ಖರೆ ಎಂಬಾತನ ಹತ್ಯೆ ಪ್ರಕರಣ ಬೇಧಿಸುವಲ್ಲಿ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಹೇಳಿದರು.ನಗರದ ಪೊಲೀಸ್ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಗೋಲ್ಡನ್‌ ದೊಡ್ಡಿ ಬಳಿ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದ 6 ಜನ ಆರೋಪಿಗಳನ್ನು ಬಬಲೇಶ್ವರ, ತಿಕೋಟಾ, ಇಂಡಿ ಹಾಗೂ ಮಹಾರಾಷ್ಟ್ರದ ಸೋಲಾಪುರದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಏ.14ರಂದು ಮಧ್ಯಾಹ್ನ ರಾಜು ಖರೆ ತನ್ನದೇ ಥಾರ್‌ ಜೀಪನಲ್ಲಿ ಮನೆಯಿಂದ ವಿಜಯಪುರಕ್ಕೆ ಹೊರಟಿದ್ದ ವೇಳೆ ಮೊದಲಿಗೆ ಆತನ ಜೀಪ್‌ ಮೇಲೆ ಟ್ರಕ್ ಹರಿಸಿದ್ದರು.

ಬಳಿಕ ಕಲ್ಲು ಎತ್ತಿಹಾಕಿ, ಬಳಿಕ 6 ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದರು. ಪ್ರಕರಣದ ಬಗ್ಗೆ ಎರಡು ತಂಡಗಳನ್ನು ರಚಿಸಲಾಗಿದ್ದು, ಗ್ರಾಮೀಣ ಠಾಣೆ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ.

ಅಲಿಯಾಬಾದ ಸುತ್ತಮುತ್ತಲಿನ ನಿವಾಸಿಗಳಾದ ಅಬುಶ್ಯಾ ಕೊಡ್ಲೇಕರ, ಅಬಾಶ್ಯಾ ಮಾನೆ, ವಾಗೀಶ ಪೋಳ, ಜಾಲಿಂದರ @ ಪೋಪಟ್ ಹಕ್ಕೆ, ಖಂಡೂಬಾ @ ಅಜೀತ ತಾಂಬೆ, ಮುರಗು ಹಕ್ಕೆ ಬಂಧಿತರು.‌

ಬಂಧಿತರಿಂದ 2 ಕಂಟ್ರಿ ಪಿಸ್ತೂಲ್, 7 ಮೊಬೈಲ್, 2 ಬೈಕ್, 1 ಟಿಪ್ಪರ್‌ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ತುಳಜಪ್ಪ ಸುಳ್ಫಿ, ಸಿಪಿಐಗಳಾದ ರಾಯಗೊಂಡ ಜಾನಾರ, ಪ್ರದೀಪ ತಳಕೇರಿ ಸೇರಿದಂತೆ ವಿವಿಧ ಠಾಣೆಗಳ ಪಿಎಸ್‌ಐ ಗಳು ಹಾಗೂ ಸಿಬ್ಬಂದಿ ಇದ್ದರು.