ಕನ್ನಡಪ್ರಭ ವಾರ್ತೆ ಬೆಳಗಾವಿ: ತೀವ್ರ ಬಿಸಿಲಿನ ತಾಪಮಾನ ಏರಿಕೆಯಿಂದ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ನಗರದ ಚನ್ನಮ್ಮ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ ವಿಶೇಷ ಸಮ್ಮರ್ ಪ್ರೋಟೋಕಾಲ್ ಜಾರಿಗೆ ತಂದಿದೆ. ಮೃಗಾಲಯದ 195ಕ್ಕೂ ಹೆಚ್ಚು ಪ್ರಾಣಿಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಅಧಿಕಾರಿಗಳು, ಪ್ರಾಣಿಗಳಿಗೆ ತಂಪು ವಾತಾವರಣ ಕಲ್ಪಿಸಲು ಸ್ಫಿಂಕ್ಲರ್, ಫಾಗರ್ ಹಾಗೂ ಐಸ್ ಕ್ಯೂಬ್‌ಗಳ ಬಳಕೆಯನ್ನು ಹೆಚ್ಚಿಸಿದ್ದಾರೆ. ಡಿಹೈಡ್ರೇಷನ್ ತಪ್ಪಿಸಲು ಗ್ಲೂಕೋಸ್ ಮಿಶ್ರಿತ ನೀರನ್ನು ನೀಡಲಾಗುತ್ತಿದೆ.

ಬಿಸಿಲಿನ ತೀವ್ರತೆಗೆ ಚಿರತೆಗಳು, ಹುಲಿಗಳು ಹಾಗೂ ಸಿಂಹಗಳು ನೆರಳಿನ ಆಶ್ರಯ ಪಡೆದುಕೊಂಡಿದ್ದು, ಅವುಗಳ ಆರೋಗ್ಯದ ಮೇಲೂ ವಿಶೇಷ ನಿಗಾ ವಹಿಸಲಾಗಿದೆ. ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ ಮತ್ತು ಚಿರತೆಗಳಿಗೆ ಪ್ರೋಸನ್ ಫುಡ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಜಿಂಕೆಗಳಿಗೆ ಮಡ್ಡ್ ಬಾತ್ ಸೌಲಭ್ಯ ಕಲ್ಪಿಸಲಾಗಿದ್ದು, ಪಕ್ಷಿಗಳಿಗೆ ಹಣ್ಣುಗಳನ್ನು ನೀಡಲಾಗುತ್ತಿದೆ. ಕರಡಿಗಳಿಗೆ ಜೇನುತುಪ್ಪದೊಂದಿಗೆ ತಂಪಾದ ಆಹಾರವನ್ನು ಪೂರೈಸಲಾಗುತ್ತಿದೆ. ಜೊತೆಗೆ, ಎಲ್ಲಾ ಪ್ರಾಣಿಗಳಿಗೆ ಐಸ್ ಕ್ಯೂಬ್ ಬಳಸಿ ತಂಪಾದ ನೀರನ್ನು ಒದಗಿಸಲಾಗುತ್ತಿದೆ.ಎಸಿಎಫ್ ನಾಗರಾಜ್ ಬಾಳೇಹೊಸರು ನೇತೃತ್ವದಲ್ಲಿ ಮೃಗಾಲಯದ ಸಂಪೂರ್ಣ ಪ್ರದೇಶದಲ್ಲಿ ನಿರಂತರ ನಿಗಾವಹಿಸಲಾಗುತ್ತಿದೆ. ಕಳೆದ ವರ್ಷದ ಚಳಿಗಾಲದಲ್ಲಿ ನಡೆದ ದುರಂತದಲ್ಲಿ 31 ಕೃಷ್ಣಮೃಗಗಳು ಸಾವನ್ನಪ್ಪಿದ್ದ ಹಿನ್ನೆಲೆ, ಈ ಬಾರಿ ಯಾವುದೇ ಅನಾಹುತ ಸಂಭವಿಸದಂತೆ ಹೆಚ್ಚಿನ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಸಿಲಿನ ತಾಪದಿಂದ ಪ್ರಾಣಿಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಪ್ರಾಣಿಗಳ ಆರೈಕೆಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ.