ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ ಕಳೆದ ಶುಕ್ರವಾರ ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್‌ಗೆ ಬಂದಿದ್ದ ಬೆಂಗಳೂರಿನ ಕಾಡುಗೋಡಿಯ ಮೈತ್ರಿ ಲೇಔಟ್‌ನ ನಿವಾಸಿ ಅದ್ವೈತ್ ಉಪದ್ಯಾಯ (32) ಕಳೆದ ಎರಡೂ ದಿನವಾದರೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರವೂ ಸಹ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ.

ನೆಲಮಂಗಲ, ದಾಬಸ್‍ಪೇಟೆ ಪೊಲೀಸರು, ಎನ್ ಡಿಆರ್‌ಎಫ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಶಿವಗಂಗೆ ಬೆಟ್ಟ ಸೇರಿದಂತೆ ಬೆಟ್ಟದ ಸುತ್ತಲೂ ಅರಣ್ಯ ಪ್ರದೇಶದಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ.

ಈತ ಆ.7ರಂದು ಮನೆಯಲ್ಲಿ ಶಿವಗಂಗೆ ಬೆಟ್ಟದಲ್ಲಿ ಟ್ರಕಿಂಗ್ ಹೋಗುವಾಗಿ ಹೇಳಿ ಬಂದಿದ್ದು, ಅದರಂತೆ ಬೆಳಿಗ್ಗೆ 6.30ಕ್ಕೆ ಶಿವಗಂಗೆ ಬೆಟ್ಟದ ಕೆಳಗೆ ಬೈಕ್‌ ಅನ್ನು ಪಾರ್ಕಿಂಗ್ ಮಾಡಿ ಶಿವಗಂಗೆ ಬೆಟ್ಟವನ್ನು ಹತ್ತಿರುವ ದೃಶ್ಯ ಬೆಟ್ಟದ ಕೆಳಗಿನ ದಾಸೋಹ ಭವನದ ಸಿಸಿ ಕ್ಯಾಮಾರದಲ್ಲಿ ಪತ್ತೆಯಾಗಿತ್ತು. ಬಳಿಕ ಬೆಟ್ಟಕ್ಕೆ ತಲುಪಿದ್ದಾನೋ, ಇಲ್ಲವೋ ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು.ಆದರೆ ಈತ ಪೂರ್ಣ ಬೆಟ್ಟವನ್ನು ಹತ್ತಿರುವ ಬಗ್ಗೆ ಸಾಕ್ಷಿ ಸಿಕ್ಕಿದ್ದು, ಸ್ಥಳೀಯರೊಬ್ಬರು ತಮ್ಮ ಫೋಟೋ ತೆಗೆದುಕೊಳ್ಳುವಾಗ ಅದ್ವೈತ್ ಆ ಫೋಟೋ ಹಿಂದೆ ಹೋಗುತ್ತಿರುವುದು ಕಂಡಿದೆ. ಶಾಂತಲಾ ಡ್ರಾಫ್‌ವರೆಗೂ ಬೆಟ್ಟವನ್ನು ಹತ್ತಿರುವುದು ಈ ಫೋಟೋದಿಂದ ಖಚಿತವಾಗಿದೆ.ಇನ್ನೂ ಈ ಯುವಕ ಮಧ್ಯಪ್ರದೇಶ ರಾಜ್ಯದ ಇಂದೋರ್ ಮೂಲದ ಉದ್ಯಮಿಯ ಮಗ ಎನ್ನಲಾಗಿದ್ದು, ವೈಟ್‍ಫೀಲ್ಡ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಾಡುಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬೇಗೂರು ರಸ್ತೆಯಲ್ಲಿ ನಿಶ್ಚಿತಾರ್ಥವಾಗಿರುವ ಯುವತಿಯೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ. ನೆಲಮಂಗಲ, ಕಾಡುಗೋಡಿ ಹಾಗೂ ದಾಬಸ್‍ಪೇಟೆ ಪೋಲೀಸರು, ಎನ್‌ಡಿಆರ್‌ಎಫ್, ಅರಣ್ಯ ಇಲಾಖೆಯವರು ಭಾನುವಾರ ಸಂಜೆಯವರೆಗೂ ಸುಮಾರು 5 ರಿಂದ 6 ಡ್ರೋನ್‌ ಕ್ಯಾಮೆರಾ, ಬಾಡಿ ಫೌಂಡ್ ಮೆಟಲ್ ಡಿಟೆಕ್ಟರ್ ಕ್ಯಾಮೆರಾದಿಂದ ಹುಡುಕಾಟ ನಡೆಸಿದ್ದು, ಸೋಮವಾರವೂ ಶೋಧ ಕಾರ್ಯ ಮುಂದುವರೆಯಲಿದೆ.ಅದ್ವೈತ್ ಅವರ ಮೊಬೈಲ್‌ನ ಕೊನೆಯ ಸ್ಥಳದ ಮಾಹಿತಿ ಅವರು ನಾಪತ್ತೆಯಾದ ಸ್ಥಳದಿಂದ ಸುಮಾರು 22 ಕಿ.ಮೀ. ದೂರದಲ್ಲಿ ದಾಖಲಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದ್ವೈತ್ ಒಬ್ಬರೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ಅವರನ್ನು ಅಪಹರಿಸಿ ಹಾನಿ ಮಾಡಿರಬಹುದು ಎಂದು ಕುಟುಂಬದವರು ಬಲವಾಗಿ ಶಂಕಿಸಿದ್ದಾರೆ. -ಬಾಕ್ಸ್‌-ಕಾಡುಗೋಡಿಯಲ್ಲಿ ಕೇಸ್‌

ಬೆಂಗಳೂರು: ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಹೋಗಿದ್ದ ಬೆಂಗಳೂರಿನ ಕಾಡುಗೋಡಿಯ ಯುವಕನೊಬ್ಬನ ನಾಪತ್ತೆ ಸಂಬಂಧ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಡುಗೋಡಿಯ ಮೈತ್ರಿ ಲೇಔಟ್‌ನ ನಿವಾಸಿ ಅದ್ವೈತ್‌ ಉಪಾಧ್ಯಾಯ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಆ.7ರಂದು ಮನೆಯಲ್ಲಿ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್‌ಗೆ ಹೋಗುವುದಾಗಿ ಹೇಳಿ ಬೆಳಗ್ಗೆ 7.30ಕ್ಕೆ ಬೆಟ್ಟದ ಕೆಳಗೆ ಬೈಕ್ ಪಾರ್ಕಿಂಗ್ ಮಾಡಿ ಬೆಟ್ಟ ಹತ್ತಿದ್ದರು. ಅದ್ವೈತ್‌ ಬೆಟ್ಟ ಹತ್ತುತ್ತಿರುವ ದೃಶ್ಯ ದೇವಾಲಯದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆದರೆ ಬೆಟ್ಟದಿಂದ ವಾಪಸ್ಸು ಬಂದಿರುವ ಬಗ್ಗೆ ಅನುಮಾನವಿದ್ದು, ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ದೂರು ಸಲ್ಲಿಕೆ ನಂತರ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಇದುವರೆಗೂ ಪತ್ತೆಯಾಗಿಲ್ಲ.

ನಾಪತ್ತೆಯಾದ ಯುವಕನ ಪತ್ತೆಗೆ ಪೊಲೀಸರು ಡ್ರೋನ್ ಮೂಲಕ ಹುಡುಕಾಟ ನಡೆಸಿದ್ದಾರೆ. ಮಳೆ ಬಂದ ಹಿನ್ನೆಲೆ ಭಾನುವಾರವೂ ಕಾರ್ಯಾಚರಣೆ ಮುಂದುವರಿದಿದೆ. ಸ್ವಲ್ಪ ಮುಂಚಿತವಾಗಿ ಅಧಿಕೃತ ಟ್ರೆಕಿಂಗ್ ರೂಟ್ಸ್ ನಲ್ಲಿ ಹೋದರೆ ಎಲ್ಲರಿಗೂ ಅನುಕೂಲ, ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ಟ ಗ್ರಾಮ್ ನೋಡಿ ಅನಧಿಕೃತ ಟ್ರೆಕಿಂಗ್ ಕ್ಯಾಂಪ್‌ನ ಮುಖಾಂತರ ಹೋದರೆ ನಮಗೆ ಗೊತ್ತಾಗುವುದಿಲ್ಲ. ಈ ಬಗ್ಗೆ ಗಮನಹರಿಸಲಾಗುತ್ತದೆ. ಕಾರ್ಯಾಚರಣೆ ಮುಂದುವರೆಯಲಿದೆ.


-ಪ್ರಿಯಾಂಕ್‌ ಖರ್ಗೆ, ಗೃಹಸಚಿವ