ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಅಂತಾರಾಜ್ಯ ಕಳ್ಳರಿಬ್ಬರಿಂದ 30 ಮೊಬೈಲ್ ಹಾಗೂ 62 ಗ್ರಾಂ ಚಿನ್ನದ ವಸ್ತುಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸ್ಥಳೀಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರತ್ಯೇಕ ಪ್ರಕರಣಗಳಲ್ಲಿ ವಿವಿಧ ಕಂಪನಿಯ ₹ 4,19,000 ಮೌಲ್ಯದ 30 ಮೊಬೈಲ್ ಹಾಗೂ 62 ಗ್ರಾಂ ₹ 9,15,000 ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು ₹ 13,34,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಹಾರಾಷ್ಟ್ರದ ಸೋಲಾಪೂರ ಸಲಗರ ವಸ್ತಿಯ ಆರೋಪಿ ಗೋರಕನಾಥ ಚಂದ್ರಕಾಂತ ಜಾಧವ ಹಾಗೂ ಬಸವ್ವ ಸಿದ್ದಪ್ಪ ಭದ್ರಶೆಟ್ಟಿ ಬಂಧಿತ ಆರೋಪಿಗಳು. ವಶಪಡಿಸಿಕೊಂಡ ಮೊಬೈಲ್ ಹಾಗೂ ಚಿನ್ನದ ವಸ್ತುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ ಗೋಯಲ್ ಅವರು ಮಂಗಳವಾರ ಕೆಲ ವಾರಸುದಾರರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದ್ದಾರೆ.
ಸಮೀರವಾಡಿಯ ಮಂಜುನಾಥ ದು. ಹಕ್ಕಲ ಎಂಬುವವರ ಮನೆಯಲ್ಲಿಯ 32 ಗ್ರಾಂ ಚಿನ್ನದ ಆಭರಣ ಮತ್ತು ಶಿವಾಪೂರ ಗ್ರಾಮದ ಮಂಜುಳಾ. ಮ. ಪಾಟೀಲ್ ಅವರ ಮನೆಯಲ್ಲಿಯ 30 ಗ್ರಾಂ ಚಿನ್ನದ ಮಾಂಗಲ್ಯ ಕಳವಾಗಿತ್ತು. ಅವುಗಳನ್ನು ವಾಪಸ್ ನೀಡಲಾಗಿದೆ.ವಿಶೇಷ ತನಿಖಾ ತಂಡ ಆರೋಪಿಯಿಂದ ಸಮೀರವಾಡಿ 30 ಗ್ರಾಂ ಚಿನ್ನದ ಮಾಂಗಲ್ಯ, ಸಮೀಪದ ಹಂದಿಗುಂದ ಗ್ರಾಮದ ಹಾಲಿ ವಸ್ತಿ ಸಮೀರವಾಡಿಯಲ್ಲಿ ವಾಸವಿರುವ ಬಸವ್ವ ಎಂಬ ಆರೋಪಿಯಿಂದ 32 ಗ್ರಾಂ ಚಿನ್ನದ ಮಾಂಗಲ್ಯ ವಶಕ್ಕೆ ಪಡೆಯಲಾಗಿದೆ. ಇದರ ಜತೆಗೆ ಸ್ಥಳೀಯ ಪೊಲೀಸ್ ಠಾಣೆಯ ಸಿ.ಇ.ಆರ್ ಪೋರ್ಟಲ್ ಬಳಸಿಕೊಂಡು ಕಳೆದು ಹೋದ 30 ಮೊಬೈಲ್ ಳನ್ನು ಸಹಿತ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಎಸ್ಪಿ ಸಿದ್ಧಾರ್ಥ ಗೋಯಲ್, ಎಡಿ ಎಸ್ಪಿ. ಎಂ.ಜಗದೀಶ, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ಆರ್.ಆರ್.ಪಾಟೀಲ್ ಇವರು ಈ ಪ್ರಕರಣ ಭೇದಿಸುವಲ್ಲಿ ಮಾರ್ಗದರ್ಶನ ನೀಡಿದರು. ತನಿಖಾ ತಂಡದಲ್ಲಿ ಪಿಎಸೈಗಳಾದ ಶಾಂತಾ ಹಳ್ಳಿ, ಕಿರಣ ಸತ್ತಿಗೇರಿ ಮತ್ತು ಸಿಬ್ಬಂದಿ ವಿ.ಬಿ.ತೇಲಿ, ಎ.ಎಂ.ಜಮಖಂಡಿ, ಬಿ.ಜಿ.ದೇಸಾಯಿ, ಎ.ಎಂ.ದೇಸಾಯಿ, ಕೃಷ್ಣಾ ಲಮಾಣಿ, ಈಶ್ವರ ಇಂಗಳಗಾಂವಿ, ಮಲ್ಲೇಶ ಲಮಾಣಿ, ಜಗದೀಶ ದಳವಾಯಿ, ಮಂಜುನಾಥ ಸಣ್ಣಕ್ಕಿ, ಶ್ರೀಶೈಲ ಔರಸಂಗ, ವಿಠ್ಠಲ ಬಳಗಾನೂರ, ವೀರೇಶ ಮಸ್ಕಿ, ಡಿ.ಎಂ.ತಳವಾರ, ಅಶೋಕ ಸವದಿ ಇತರರು ಇದ್ದರು.
ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಷಮತೆ ಮೆಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.