ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬಾಗಲಕೋಟ, ಬೆಳಗಾವಿ ಹಾಗೂ ಮಹಾರಾಷ್ಟ್ರ ಪ್ರದೇಶಗಳಿಗೆ ತೀರಾ ಸಮೀಪ ಮತ್ತು ರಬಕವಿ-ಬನಹಟ್ಟಿ ಹಾಗೂ ಅಥಣಿ ತಾಲೂಕುಗಳ ನಡುವಿನ ವಾಣಿಜ್ಯ ಕೊಂಡಿಯಾದ ರಬಕವಿ-ಮಹಿಷವಾಡಗಿ ಸೇತುವೆಯ ₹ 55 ಕೋಟಿ ವೆಚ್ಚದ ಮಹತ್ತರ ಯೋಜನೆಯಾಗಿದ್ದು, ಇದೀಗ ಕಾಂಗ್ರೆಸ್-ಬಿಜೆಪಿ ನಡುವಿನ ರಾಜಕೀಯ ವೇದಿಕೆಯಾಗಿ ಮಾರ್ಪಟ್ಟಿರುವುದು ತೀವ್ರ ಮುಜುಗರ ಅನುಭವಿಸುವಂತಾಗಿದೆ.

ರಬಕವಿ-ಮಹಿಷವಾಡಗಿ ಸೇತುವೆಯು ಅಥಣಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಮುಖ ಕೊಂಡಿಯಾಗಿದೆ. ಕಳೆದೊಂದು ವಾರದಿಂದ ಅತ್ಯಂತ ವೇಗವಾಗಿ ನದಿಯೊಳಗಿನ ಪಿಲ್ಲರ್ ಕಾರ್ಯ ಹಗಲಿರುಳು ನಡೆಯುತ್ತಿದೆ. ಹಗಲು-ರಾತ್ರಿ ಪ್ರಚಾರ: ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಕೊಣ್ಣೂರ ಮಧ್ಯೆ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಶೀತಲ ಸಮರ ನಡೆಯುತ್ತಿದೆ. ಹಗಲು-ರಾತ್ರಿ ಇದೇ ಸೇತುವೆ ಕಾಮಗಾರಿ ಸ್ಥಳದಲ್ಲಿ ಬಿಡಾರ ಹೂಡಿರುವ ಉಭಯ ಪಕ್ಷಗಳ ಮುಖಂಡರು ಹೇಳಿಕೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಅತ್ತ ಗುತ್ತಿಗೆದಾರ, ಅಭಿಯಂತರರು ಹಾಗೂ ಕಾರ್ಮಿಕರು ಪಿಲ್ಲರ್ ನಂ.8ರ ಬುನಾದಿ ಭದ್ರಗೊಳಿಸಿದ್ದಲ್ಲದೇ ಮೂರು ಹಂತಗಳನ್ನು ಕಾಂಕ್ರೀಟ್‌ಗೊಳಿಸಿದ ಹುರುಪಿನಲ್ಲಿದ್ದು, ಇದೀಗ ಮಂಗಳವಾರ ಮಧ್ಯಾಹ್ನ ಪಿಲ್ಲರ್ ನಂ.7ರ ಸುತ್ತಲಿನ ನೀರು ಹೊರಹಾಕಿ, ಬುನಾದಿ ಪುನಃ ಭದ್ರಗೊಳಿಸಿದ್ದಲ್ಲದೇ ಕಾಂಕ್ರೀಟ ಹಾಕುವ ಕೆಲಸ ಮಾಡುತ್ತಿದ್ದಾರೆ.

ಸೋಮವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಶಾಸಕ ಸಿದ್ದು ಸವದಿ ಗುತ್ತಿಗೆದಾರನಿಗೆ ಮಹಾ ನೀರು ಒಂದು ವಾರದಲ್ಲಿ ನದಿಗೆ ಬರುವ ನಿರೀಕ್ಷೆಯಿದ್ದು, ಪಿಲ್ಲರ್.ನಂ.7ರ ಕೆಲಸ ತೀವ್ರಗೊಳಿಸಿ ಮುಕ್ತಾಗೊಳಿಸಲು ತಾಕೀತು ನೀಡಿದ್ದರು. ಬಿಜೆಪಿ ಮುಖಂಡರು ಸೇತುವೆ ಕಾರ್ಯ ವೀಕ್ಷಣೆ ನಂತರ ತಮ್ಮ ಹೇಳಿಕೆಗಳನ್ನು ನೀಡಿದರೆ ಮತ್ತೊಂದು ಸುತ್ತು ಕಾಂಗ್ರೆಸ್ ಮುಖಂಡರು ಇದೇ ಸೇತುವೆ ಕಾಮಗಾರಿ ಸ್ಥಳದಲ್ಲಿ ನೀಡುವ ಹೇಳಿಕೆಗಳು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸಾಮಾನ್ಯವಾಗಿದೆ.


ಒಟ್ಟಾರೆ 2017ರಿಂದ ಯಾವುದೇ ರೀತಿ ಚರ್ಚೆಗೆ ಬಾರದ ರಬಕವಿ-ಮಹಿಷವಾಡಗಿ ಸೇತುವೆ ಅತ್ಯಂತ ಮಂದಗತಿಯಲ್ಲಿ ನಡೆಯುತ್ತಿತ್ತು. ಸೇತುವೆ ಕಾಮಗಾರಿಗೆ ಆಗ್ರಹಿಸಿ ಡಾ.ರವಿ ಜಮಖಂಡಿ ನಡೆಸಿದ ನಿರಶನ ಸತ್ಯಾಗ್ರಹದಿಂದ ಇದೀಗ ಡಿಸೆಂಬರ್‌ನಿಂದ ತೀವ್ರ ಮುನ್ನೆಲೆಗೆ ಬಂದು ಸಂಪೂರ್ಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ತಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಹಣ ಬಿಡುಗಡೆಗೊಳಿಸದ್ದಾಗಿ ಹೇಳುತ್ತಿದ್ದಾರೆ. ಶಾಸಕ ಸವದಿ ತೇರದಾಳ ಕ್ಷೇತ್ರದಲ್ಲಿ ತಮ್ಮದೇ ಸರ್ಕಾರ ಎಂಬರ್ಥದ ಹೇಳಿಕೆ ನೀಡಿದ್ದರು. ಈ ಜಿದ್ದಾಜಿದ್ದಿ ಹಿನ್ನೆಲೆಯಲ್ಲಿ ಕಾಮಗಾರಿ ವೇಗ ಪಡೆದುಕೊಂಡಂತೂ ಸತ್ಯ!.

ಒಂದು ವಾರದ ಕಾಲಾವಕಾಶ:

ಸದ್ಯ ನದಿಯೊಳಗೆ ನೀರಿನ ಪ್ರಮಾಣ ತೀವ್ರಗತಿಯಲ್ಲಿ ಇಳಿಕೆ ಕಂಡಿದೆ. ಸೇತುವೆಯ ಪಿಲ್ಲರ್ ನಂ.7ರ ಕಾರ್ಯ ಮಂಗಳವಾರ ಮುಖ್ಯವಾದ ಬುನಾದಿ ಕೆಲಸ ಮುಗಿದಿದ್ದು, ಪಿಲ್ಲರ್ ಮೇಲಿನ ಕಾಮಗಾರಿಗೆ ಸರಳುಗಳನ್ನು ಬಿಗಿಗೊಳಿಸಿ ಕಾರ್ಮಿಕರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಲೆಕ್ಕಾಚಾರದಂತೆ ನೆರೆಯ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ಶೀಘ್ರವೇ ನೀರು ಬಿಡುಗಡೆಯಾಗಲಿದೆ. ಇನ್ನೊಂದು ವಾರದೊಳಗೆ ಕೃಷ್ಣೆ ತನ್ನ ಒಡಲನ್ನು ತುಂಬಿಕೊಳ್ಳುವ ಸಾಧ್ಯತೆಯಿದ್ದು, ಶೀಘ್ರವೇ ಪಿಲ್ಲರ್ ಕಾರ್ಯ ಪೂರ್ಣಗೊಂಡಲ್ಲಿ ಮುಂದಿನ ವರ್ಷದೊಳಗಾಗಿ ಸೇತುವೆ ಕಾರ್ಯ ಪೂರ್ಣಗೊಳ್ಳುವ ಭರವಸೆ ನಾಗರಿಕರಲ್ಲಿ ಮೂಡಿದೆ.ನಾನು ಮಾಡಿಸಿದ್ದು: ಇದೀಗ ಹಾಲಿ ಶಾಸಕ ಸಿದ್ದು ಸವದಿ ಜನಪ್ರತಿನಿಧಿಯಾದ ನಾನು ರಬಕವಿ-ಮಹಿಷವಾಡಗಿ ಸೇತುವೆ ಕಾರ್ಯಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದೇನೆಂದು ಹೇಳುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ರಬಕವಿ-ಬನಹಟ್ಟಿ ಅವಳಿ ನಗರದ ಹಿರಿಯರು ನನಗೆ ಒತ್ತಾಯಪಡಿಸಿ ಸರ್ಕಾರದಿಂದ ಹೆಚ್ಚಿನ ಕಾಳಜಿಗೆ ಮನವಿ ಮಾಡಿದ್ದರ ಪರಿಣಾಮ ಅಧಿಕಾರಿಗಳಿಗೆ ಒತ್ತಡ ಹೇರಿ ನಾನೇ ಕಾಮಗಾರಿ ನಡೆಯಲು ಯತ್ನಿಸಿದ್ದೇನೆಂಬ ಬಹಿರಂಗ ಹೇಳಿಕೆಗಳು ರಾಜಕೀಯ ತಿರುವಿಗೆ ಕಾರಣವಾಗಿವೆ.

ರಬಕವಿ, ಮಹಿಷವಾಡಗಿ ಜನತೆ ಫುಲ್ ಖುಷ್: ಸೇತುವೆ ನಿರ್ಮಾಣಕ್ಕೆ ಇದೀಗ ರಾಜಕೀಯ ತಿರುವು ಪಡೆದುಕೊಂಡು ಕಾಮಗಾರಿ ವೇಗ ಪಡೆದುಕೊಂಡಿದ್ದರೆ, ಸೇತುವೆ ಕಾರ್ಯ ಮುಂದಿನ ವರ್ಷ ಬಹುತೇಕ ಪೂರ್ಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿರುವ ಹಿನ್ನಲೆಯಲ್ಲಿ ರಬಕವಿ ಮತ್ತು ಮಹಿಷವಾಡಗಿ ಸುತ್ತಲಿನ ಜನತೆ ಖುಷ್ ಆಗಿದ್ದಾರೆ. ತಾಲೂಕಿನ ಜನತೆ ಮಾತ್ರ ಸಂತಸದಿಂದ ದಿನಂಪ್ರತಿ ಸೇತುವೆ ಕಾರ್ಯ ವೀಕ್ಷಣೆಗೆ ತಂಡೋಪತಂಡವಾಗಿ ಆಗಮಿಸುತ್ತಿರುವುದು ನಿತ್ಯದ ದೃಶ್ಯವಾಗಿದೆ.