ಸಾರಾಂಶ
ಎಸ್ಸಿ-ಎಸ್ಟಿ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲಾದ ಕೇಸ್ । ಜಿಲ್ಲಾ ಜಾಗೃತ, ಉಸ್ತುವಾರಿ ಸಮಿತಿ ಸಭೆಯಲ್ಲಿ ಡಿಸಿ ಚಂದ್ರಶೇಖರ ನಾಯಕ ಮಾಹಿತಿ
ಕನ್ನಡಪ್ರಭ ವಾರ್ತೆ ರಾಯಚೂರು: ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ದಾಖಲಾದ 63 ಪ್ರಕರಣಗಳಿಗೆ 1.30 ಕೋಟಿ ರು. ಪರಿಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದರು. ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 52 ಜಾತಿ ನಿಂದನೆ, ಬೆದರಿಕೆ, 5 ಅತ್ಯಾಚಾರ, 6 ಮೃತಪಟ್ಟ ಪ್ರಕರಣಗಳು ದಾಖಲಾಗಿದ್ದು, ಮೃತಪಟ್ಟ 8 ಜನರಿಗೆ ಪಿಂಚಣಿಯನ್ನು ಮಂಜೂರು ಮಾಡಿ ತಲಾ 6,750 ರು. ಸೇರಿ ಒಟ್ಟು 54 ಸಾವಿರ ಮಂಜೂರು ಮಾಡಲಾಗಿದೆ ಎಂದರು. 2018-19 ರಿಂದ ಪ್ರಸಕ್ತ ಸಾಲಿನ ದೌರ್ಜನ್ಯ ಪ್ರಕರಣದಡಿ ಮೃತಪಟ್ಟ ಕುಟುಂಬಸ್ಥರಲ್ಲಿ ಉದ್ಯೋಗ ಕಲ್ಪಿಸಿಕೊಡುವಂತೆ ಏಳು ಅರ್ಜಿಗಳು ಬಂದಿದ್ದು, ಶೀಘ್ರದಲ್ಲಿಯೇ ಕ್ರಮವಹಿಸಲಾಗುವುದು ಎಂದು ಹೇಳಿದರು.
ತ್ರೈಮಾಸಿಕ ಸಭೆ: ನಂತರ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದ ಡಿಸಿ ಸಫಾಯಿ ಕರ್ಮಚಾರಿಗಳ ಸಮುದಾಯಕ್ಕೆ ಸೇರಿದ 86 ಜನ ಫಲಾನುಭವಿಗಳಿಗೆ (ಎಂಎಸ್‌ಐಡಿ) ಗುರುತಿನ ಚೀಟಿ ಜೊತೆಗೆ ಸರ್ಕಾರದಿಂದ ದೊರೆಯುವ ಅಗತ್ಯ ಸವಲತ್ತುಗಳನ್ನು ಕಲ್ಪಿಸಿಕೊಡಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳಡಿಯಲ್ಲಿ ಈ ಜಿಲ್ಲಾಮಟ್ಟದ ಜಾಗೃತಿ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿಯು ರಚನೆಗೊಂಡಿದೆ. ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ 86 ಜನರಿಗೆ ಎಂಎಸ್‌ಐಡಿ ನೀಡಲು ಆದೇಶಿಸಿದ್ದು, ಕೂಡಲೇ ಕ್ರಮವಹಿಸಬೇಕು ಎಂದರು. ನಗರದಲ್ಲಿ ಸಫಾಯಿ ಕರ್ಮಚಾರಿಗಳ ಸಮುದಾಯ ಭವನ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿ, ನಗರಸಭೆ, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ನಿಧಿ ಸೇರಿ ಒಟ್ಟು 17.16 ಲಕ್ಷ ಬಿಡುಗಡೆಯಾಗಿದ್ದು, ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಸ್ಥಳೀಯ ಸಿಯಾತಲಾಬ್ ಬಡಾವಣೆಯಲ್ಲಿ ಹತ್ತು ತೆರೆದ ಗುಂಡಿಗಳಿದ್ದು, ಅವುಗಳನ್ನು ಮುಚ್ಚಲು ಅಧಿಕಾರಿಗಳು ಕ್ರಮವಹಿಸಬೇಕು, ವಸತಿ ಸವಲತ್ತು ಕಲ್ಪಿಸಬೇಕು ಎಂದು 86 ಸಫಾಯಿ ಕರ್ಮಚಾರಿಗಳು ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರಿಗೆ ಬೋಳಮಾನದೊಡ್ಡಿ ರಸ್ತೆಯಲ್ಲಿ ಸರ್ಕಾರಕ್ಕೆ ಸೇರಿದ 6 ಎಕರೆ ಜಮೀನಿನಲ್ಲಿ ಎರಡು ಎಕರೆಯನ್ನು ಗುರುತಿಸಿ ಮನೆಗಳನ್ನು ಕಟ್ಟಿಸಿಕೊಡಲು ಡಿಸಿ ಆದೇಶಿಸಿದರು. ಈ ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಸವಲತ್ತಿಗಾಗಿ ಶೇ. 24.10 ಜೊತೆಗೆ ಎಸ್ಸಿಪಿ, ಟಿಎಸ್‌ಪಿ ಅನುದಾನದಡಿ ಶೇ. 20ರಷ್ಟು ಮೀಸಲಿಟ್ಟಿದ್ದು, ಅರ್ಹರಿಗೆ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿ. ಸಮುದಾಯಕ್ಕೆ ಸೇರಿದ ರುದ್ರಭೂಮಿ ಒತ್ತುವರಿಯಾಗಿದೆ ಎನ್ನುವ ದೂರುಬಂದಿದ್ದು, ಜಾಗ ಸರ್ವೇ ನಡೆಸಿ ಹದ್ದುಬಸ್ತಿಯನ್ನು ಮಾಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು. ಉಭಯ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ತುಕಾರಂ ಪಾಂಡ್ವೆ, ಎಸ್ಪಿ ನಿಖಿಲ್ ಬಿ,ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಎಸ್ಸಿ-ಎಸ್ಟಿ ಹಾಗೂ ಸಫಾಯಿ ಕರ್ಮಚಾರಿ ಸಮುದಾಯಗಳ ಮುಖಂಡರು ಹಾಜರಿದ್ದರು.