ಚೋಳೇನಹಳ್ಳಿ ಹೊರವಲಯದಲ್ಲಿ 7 ತಿಂಗಳ ಚಿರತೆ ಮರಿ ಪ್ರತ್ಯಕ್ಷ..!

| Published : Oct 17 2025, 01:00 AM IST

ಚೋಳೇನಹಳ್ಳಿ ಹೊರವಲಯದಲ್ಲಿ 7 ತಿಂಗಳ ಚಿರತೆ ಮರಿ ಪ್ರತ್ಯಕ್ಷ..!
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ತಾಲೂಕಿನ ಕದಬಹಳ್ಳಿ ಸಮೀಪದ ಚೋಳೇನಹಳ್ಳಿ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ಕಾಣಿಸಿಕೊಂಡಿದ್ದ 7 ತಿಂಗಳ ಹೆಣ್ಣು ಚಿರತೆ ಮರಿಯನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಪಟ್ಟಣದ ಅರಣ್ಯಾಧಿಕಾರಿ ಕಚೇರಿಗೆ ತಂದ ಕೆಲ ಸಮಯದಲ್ಲೇ ಮೃತಪಟ್ಟ ಘಟನೆ ಜರುಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಕದಬಹಳ್ಳಿ ಸಮೀಪದ ಚೋಳೇನಹಳ್ಳಿ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ಕಾಣಿಸಿಕೊಂಡಿದ್ದ 7 ತಿಂಗಳ ಹೆಣ್ಣು ಚಿರತೆ ಮರಿಯನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಪಟ್ಟಣದ ಅರಣ್ಯಾಧಿಕಾರಿ ಕಚೇರಿಗೆ ತಂದ ಕೆಲ ಸಮಯದಲ್ಲೇ ಮೃತಪಟ್ಟ ಘಟನೆ ಜರುಗಿದೆ.

ತಾಯಿಯಿಂದ ಬೇರ್ಪಟ್ಟಿದ್ದ 7 ತಿಂಗಳ ಪ್ರಾಯದ ಹೆಣ್ಣು ಚಿರತೆ ಮರಿ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಆತಂಕಗೊಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಂಡಿಗನವಿಲೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಚಿರತೆ ಮರಿ ಸ್ಥಳದಿಂದ ಕದಲದಂತೆ ನೂರಾರು ಮಂದಿ ಸುತ್ತುವರಿದು ನಿಂತ್ತಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ವಲಯ ಅರಣ್ಯಾಧಿಕಾರಿ ಸಂಪತ್ ಪಟೇಲ್, ಚಿರತೆ ಮರಿಯನ್ನು ಸುರಕ್ಷಿತವಾಗಿ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡಿಸುವ ಸಲುವಾಗಿ ಮೈಸೂರಿನ ಚಿರತೆ ಕಾರ್ಯಪಡೆ(ಎಲ್‌ಟಿಎಫ್) ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮನವಿ ಮಾಡಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

ಚಿರತೆ ಕಾರ್ಯಪಡೆ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳೀಯರ ಜೊತೆಗೂಡಿ ಚಿರತೆ ಮರಿಯನ್ನು ಹಿಡಿದಿದ್ದ ಅರಣ್ಯ ಸಿಬ್ಬಂದಿ ಪಟ್ಟಣದ ಅರಣ್ಯಾಧಿಕಾರಿ ಕಚೇರಿಗೆ ತಂದಿದ್ದರು. ಹಿಡಿಯುವ ಸಮಯದಲ್ಲಿ ಹೊಟ್ಟೆ ಭಾಗ ಮತ್ತು ಕಾಲುಗಳನ್ನು ಟವಲ್‌ನಿಂದ ಬಿಗಿದಿದ್ದ ಹಿನ್ನೆಲೆಯಲ್ಲಿ ತಕ್ಷಣ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ ಬಳಿಕ ತಿನ್ನಲು ಆಹಾರ ಹಾಕಿದ್ದರು. ಆದರೆ, ಅಸ್ವಸ್ಥಗೊಂಡಿದ್ದ ಚಿರತೆ ಮರಿ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿತು.

ಪಶು ವೈದ್ಯರು ಪಂಚನಾಮೆ ನಡೆಸಿದ ಬಳಿಕ ಇಲಾಖೆ ನಿಯಮಾನುಸಾರ ತಾಲೂಕಿನ ಎಂ.ಹೊಸೂರು ಗೇಟ್ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಮೃತ ಚಿರತೆ ಮರಿ ಅಂತ್ಯಕ್ರಿಯೆ ನೆರವೇರಿಸಲಾಗುವುದೆಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಚಿರತೆ ಮರಿ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಹೇಳಲಾಗುತ್ತಿದೆ.

ಚಿರತೆ ಸೇರಿದಂತೆ ಯಾವುದೇ ಕಾಡು ಪ್ರಾಣಿಗಳು ಕಾಣಿಸಿಕೊಂಡರೆ ಜನರು ಅವುಗಳನ್ನು ಗಾಬರಿಗೊಳಿಸುವ ಅಥವಾ ಹಿಡಿಯುವ ಪ್ರಯತ್ನ ಮಾಡಬಾರದು. ಆಕಸ್ಮಿಕವಾಗಿ ಚಿರತೆ ಕಾಣಿಸಿಕೊಂಡಲ್ಲಿ ವಾಟ್ಸಾಪ್ ಚಾಲನೆಯಲ್ಲಿರುವ ಚಿರತೆ ಕಾರ್ಯಪಡೆ ಎಲ್‌ಟಿಎಫ್ ಸಹಾಯವಾಣಿ ನಂಬರ್ 9481996026ಕ್ಕೆ ಕರೆ ಮಾಡಿ ಚಿರತೆ ಕಾಣಿಸಿಕೊಂಡ ಸ್ಥಳದ ಮಾರ್ಗಸೂಚಿಯನ್ನು ಷೇರ್ ಮಾಡಬೇಕೆಂದು ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಸಂಪತ್ ಪಟೇಲ್ ಜನರಲ್ಲಿ ಮನವಿ ಮಾಡಿದ್ದಾರೆ.

ಚಿರತೆ ಕಾಣಿಸಿಕೊಳ್ಳುವ ಹಳ್ಳಿಗಳಲ್ಲಿ ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಚಿರತೆ ಕಾರ್ಯಾಚರಣೆ ಸಮಯದಲ್ಲಿ ಅರಣ್ಯ ಸಿಬ್ಬಂದಿ ಮತ್ತು ಎಲ್‌ಟಿಎಫ್ ಸಿಬ್ಬಂದಿಯೊಂದಿಗೆ ಜನರು ಸಂಯಮದಿಂದ ವರ್ತಿಸಿ ಸಹಕಾರ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಚಿರತೆ ದಾಳಿಗೆ 50 ಸಾವಿರ ರು. ಬೆಲೆ ಬಾಳುವ ಹಸು ಬಲಿ

ಹಲಗೂರು: ಚಿರತೆ ದಾಳಿಯಿಂದ 50 ಸಾವಿರ ಬೆಲೆ ಬಾಳುವ ಹಸು ಬಲಿಯಾಗಿರುವ ಘಟನೆ ತೊರೆಕಾಡನಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಗ್ರಾಮದ ವೆಂಕಟೇಗೌಡರ ಪುತ್ರ ಶ್ರೀನಿವಾಸ ಗೌಡ ಅವರು ಮನೆ ಸಮೀಪವಿದ್ದ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಎಂದಿನಂತೆ ಗುರುವಾರ ಬೆಳಗಿನ ಜಾವ ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ತಮ್ಮ ಜಮೀನಿನಲ್ಲಿ ಕಟ್ಟಿ ಹಾಕಿ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಹಸುವಿನ ಚೀರಾಟ ಕೇಳಿ ಓಡಿ ಬಂದಾಗ ತಕ್ಷಣ ಚಿರತೆ ಓಡಿ ಹೋಗಿದೆ.

ಚಿರತೆ ದಾಳಿ ಮಾಡಿ ಹಸುವಿನ ಕತ್ತಿನ ಭಾಗ ಕಚ್ಚಿ ರಕ್ತ ಕುಡಿದು ಹೊಟ್ಟೆ ಭಾಗವನ್ನು ಬಗೆದಿದೆ. ಇದರಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಜಮೀನುಗಳಿಗೆ ಹೋಗುವುದಕ್ಕೂ ಭಯವಾಗುತ್ತಿದೆ. ಅರಣ್ಯ ಅಧಿಕಾರಿಗಳು ಬೋನಿಟ್ಟು ಚಿರತೆ ಹಿಡಿಯುವಂತೆ, ನನಗೆ ಆದ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಶ್ರೀನಿವಾಸಗೌಡ ಮನವಿ ಮಾಡಿದ್ದಾರೆ.

ಗ್ರಾಮದ ವಾಸಿಗಳಾದ ಶಿವರಾಜೇಗೌಡ, ಕೆಂಪ ದಾಸೇಗೌಡ, ರಾಮಚಂದ್ರಗೌಡ ,ಸೇರಿದಂತೆ ಇತರರು ಕೂಡ ಚಿರತೆ ದಾಳಿಯನ್ನು ಖಂಡಿಸಿ ಕ್ರಮಕ್ಕೆ ಆಗ್ರಹಿಸಿದರು.