ಮಾಂಬಳ್ಳಿ ಗ್ರಾಮದ ಸಮಸ್ಯೆ ಬಗೆಹರಿಸಲು ಕ್ರಮ

| Published : Oct 17 2025, 01:00 AM IST

ಸಾರಾಂಶ

ಕಳೆದ ಮೂರು ದಿನಗಳಿಂದ ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮದ ಸಮಸ್ಯೆ ಬಗೆಹರಿಸುವಲ್ಲಿ ಇಲ್ಲಿನ ಪಿಡಿಒ ಉಷಾರಾಣಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಹೋರಾಟ ನಡೆಸುತ್ತಿದ್ದು, ಇಲ್ಲಿನ ಪಂಚಾಯಿತಿ ಕಚೇರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಗುರುವಾರ ಭೇಟಿ ನೀಡಿ ಸದಸ್ಯರು, ಪಿಡಿಒ ಜೊತೆ ಸಭೆ ನಡೆಸಿದರು

ಕನ್ನಡಪ್ರಭ ವಾರ್ತೆ, ಯಳಂದೂರು

ಕಳೆದ ಮೂರು ದಿನಗಳಿಂದ ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮದ ಸಮಸ್ಯೆ ಬಗೆಹರಿಸುವಲ್ಲಿ ಇಲ್ಲಿನ ಪಿಡಿಒ ಉಷಾರಾಣಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಹೋರಾಟ ನಡೆಸುತ್ತಿದ್ದು, ಇಲ್ಲಿನ ಪಂಚಾಯಿತಿ ಕಚೇರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಗುರುವಾರ ಭೇಟಿ ನೀಡಿ ಸದಸ್ಯರು, ಪಿಡಿಒ ಜೊತೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಇಒ ಅವರು, ಗ್ರಾಮದಲ್ಲಿ ದೀಪಾವಳಿ ಜಾತ್ರೆ ಅ.೨೨ ರಿಂದ ಆರಂಭವಾಗಲಿದೆ. ಆದರೂ ಕೂಡ ಇಲ್ಲಿ ಸ್ವಚ್ಛತೆ ಇಲ್ಲ, ಕಸ ವಿಲೇವಾರಿಯಾಗಿಲ್ಲ. ಬೀದಿ ದೀಪ ಕೆಟ್ಟು ನಿಂತಿದೆ, ರಸ್ತೆಯ ತುಂಬೆಲ್ಲಾ ಅನೈರ್ಮಲ್ಯ ಇದೆ, ರಸ್ತೆಗಳು ಗುಂಡಿ ಬಿದ್ದಿವೆ. ಇದನ್ನು ಸರಿಪಡಿಸಲು ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಧ್ಯಕ್ಷ ಸೇರಿದಂತೆ ಸದಸ್ಯರು ಹಾಗೂ ಕೆಲ ಗ್ರಾಮಸ್ಥರು ದೂರು ನೀಡಿ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದರು. ನಾನು ಕಚೇರಿಗೆ ಭೇಟಿ ನೀಡಿ ಗ್ರಾಮ ಸಂಚಾರ ನಡೆಸಿದ್ದೇನೆ. ಇಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಕಸ ವಿಲೇವಾರಿಯೂ ಸೇರಿದಂತೆ ಇರತೆ ಸಮಸ್ಯೆ ನಿವಾರಣೆಗೆ ಪಂಚಾಯತ್ ರಾಜ್ ಇಲಾಖೆಯ ಎಇಇ ಚಂದ್ರಶೇಖರಮೂರ್ತಿಗೆ ಅಂದಾಜು ಪಟ್ಟಿ ತಯಾರಿಸಿ ಈ ಸಮಸ್ಯೆ ನಿವಾರಿಸಿ ಎಂದು ಸೂಚನೆ ನೀಡಿದ್ದೇನೆ. ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಅನೇಕ ಆರೋಪಗಳನ್ನು ಸದಸ್ಯರು ಮಾಡಿದ್ದಾರೆ. ಇವರ ವಿರುದ್ಧ ಉನ್ನತ ಅಧಿಕಾರಿಗಲಿಗೆ ದೂರನ್ನು ನೀಡಿದ್ದಾರೆ. ಈ ಹಬ್ಬದ ಬಳಿಕ ಇಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ತನಿಖೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.ಗ್ರಾಪಂ ಅಧ್ಯಕ್ಷ ಆರ್. ಮಲ್ಲೇಶ್ ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ ೧೫ನೇ ಹಣಕಾಸಿನಲ್ಲಿ ಯಾವುದೇ ಕೆಲಸ ನಡೆದಿಲ್ಲ. ವಿಕಲಚೇತನರ ಶೇ. ೫ರ ಅನುದಾನ ಬಳಕೆಯಾಗಿಲ್ಲ. ನರೇಗಾ ಕಾಮಗಾರಿ ದುರ್ಬಳಕೆಯಾಗಿದೆ, ಇತರೆ ಸರ್ಕಾರಿ ಅನುದಾನಗಳನ್ನು ಬಳಸಿಕೊಂಡಿಲ್ಲ. ಪಿಡಿಒ ಕೇವಲ ತಮ್ಮ ಲಾಭಕ್ಕಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಇ-ಸ್ವತ್ತು ಸೇರಿದಂತೆ ಇತರೆ ತಮಗೆ ಆದಾಯ ಬರುವ ಕೆಲಸವನ್ನು ಮಾಡುತ್ತಿದ್ದಾರೆ.

ಕೇವಲ ಕಚೇರಿ ಕೆಲಸಗಳಿಗೆ ಸೀಮಿತವಾಗಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಇವರು ಇದರ ಅಭಿವೃದ್ಧಿಗೆ ಕ್ರಮ ವಹಿಸುತ್ತಿಲ್ಲ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಪೌರ ಕಾರ್ಮಿಕರಿಗೆ ಸಂಬಳವನ್ನು ನೀಡಿಲ್ಲ, ಪಂಚಾಯಿತಿಯಲ್ಲಿ ಅನೇಕ ಅಕ್ರಮಗಳನ್ನು ಇವರು ಮಾಡಿದ್ದಾರೆ. ಇವರ ವಿರುದ್ಧ ಈಗಾಗಲೇ ಇಒ, ಸಿಎಸ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಇವರು ಇದನ್ನೇ ಮುಂದುವರೆಸಿದ್ದಲ್ಲಿ ಇವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಜೊತೆ ಗ್ರಾಮದ ಕೆಲ ಬಡಾವಣೆಗಳ ಸ್ಥಿತಿಗತಿಗಳನ್ನು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಇಲ್ಲಿನ ಸಮಸ್ಯೆ ಶೀಘ್ರವಾಗಿ ನಿವಾರಿಸುವಂತೆ ಇಒ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮುಬಾರಕ್‌ಉನ್ನೀಸಾ ಸದಸ್ಯರಾದ ಲಕ್ಷ್ಮೀಪತಿ, ದರ್ಶನ್‌ಕುಮಾರ್, ಇಂದ್ರಮ್ಮ, ಎಸ್. ರಾಜೇಶ್ವರಿ ರಾಜಪ್ಪ, ಶೋಭಾಲಕ್ಷ್ಮಿ, ಜ್ಯೋತಿ, ಲಕ್ಷ್ಮಿರಾಮು, ರತ್ನಮ್ಮ, ಮುತ್ತುರಾಜು ಸೇರಿದಂತೆ ಇತರರು ಇದ್ದರು.