ಸಾರಾಂಶ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆತ ಖಂಡಿಸಿ, ತಪ್ಪಿತಸ್ಥ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ಗಡೀಪಾರಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಬಣ) ಮತ್ತು ದಾವಣಗೆರೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
- ತಪ್ಪಿತಸ್ಥ ವಕೀಲ ಗಡೀಪಾರಿಗೆ ಒತ್ತಾಯಿಸಿ ದಸಂಸ ಪ್ರತಿಭಟನೆ
- - -ದಾವಣಗೆರೆ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆತ ಖಂಡಿಸಿ, ತಪ್ಪಿತಸ್ಥ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ಗಡೀಪಾರಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಬಣ) ಮತ್ತು ದಾವಣಗೆರೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಮಾತನಾಡಿ, ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆ ಮುಖ್ಯಸ್ಥರಿಗೆ ನ್ಯಾಯಾಲಯದೊಳಗೇ ಹಲ್ಲೆಗೆ ಪ್ರಯತ್ನಿಸಿದ್ದಾರೆ. ಇಡೀ ದೇಶದ ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಸನಾತನವಾದಿಗಳು ಅವಮಾನ ಮಾಡಿದ್ದಾರೆ. ಈವರೆಗೂ ಸರ್ಕಾರದ ಮಂತ್ರಿಗಳು ಮತ್ತು ಉನ್ನತ ಸ್ಥಾನದಲ್ಲಿರುವವರು ಇದನ್ನು ಖಂಡಿಸಿ ಮಾತನಾಡದೇ ಇರೋದು ನೋಡಿದರೆ ಪರೋಕ್ಷವಾಗಿ ಇವರೇ ಮನುವಾದಿಗಳಿಗೆ, ಸನಾತನವಾದಿಗಳಿಗೆ ಕುಮಕ್ಕು ನೀಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಟೀಕಿಸಿದರು.ಈ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾ. ಬಿ.ಆರ್. ಗವಾಯಿ ಮೇಲೆ ಹಲ್ಲೆಗೆ ಪ್ರಯತ್ನಿಸಿದ ವಕೀಲ ರಾಕೇಶ್ ಕಿಶೋರ್‌ನನ್ನು ಶಿಕ್ಷೆಗೊಳಪಡಿಸಿ, ದೇಶದಿಂದಲೇ ಗಡಿಪಾರು ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ನೆರಳು ಬೀಡಿ ಕಾರ್ಮಿಕರ ಸಂಘಟನೆಯ ಜಬೀನಾ ಖಾನಂ, ದಸಂಸ ಮುಖಂಡ ಬುಳ್ಳಸಾಗರ ಸಿದ್ದರಾಮಣ್ಣ, ಮುಸ್ಲಿಂ ಒಕ್ಕೂಟದ ಮುಖಂಡ ಟಿ.ಅಸ್ಗರ್, ಸಮಿತಿಯ ಮುಖಂಡರಾದ ತಾಲೂಕು ಸಂಚಾಲಕ ಚಿತ್ರಲಿಂಗಪ್ಪ, ನಾಗರಾಜ ಚಿತ್ತನಹಳ್ಳಿ, ಪರಮೇಶ್ವರಪ್ಪ, ಪ್ರದೀಪ್, ಮಂಜುನಾಥ, ಮಹಂತೇಶ್, ಆರತಿ ಬಿ. ಚಿತ್ತಾನಳ್ಳಿ, ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಮುಖಂಡ ಎಂ.ಲಿಂಗರಾಜು, ಲಿಯಾಖತ್ ಅಲಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ತಾಹಿರ್ ಇತರರು ಭಾಗವಹಿಸಿದ್ದರು.- - -
-16ಕೆಡಿವಿಜಿ31:ನ್ಯಾಯಾಧೀಶರ ಮೇಲೆ ಶೂ ಎಸೆತ ಖಂಡಿಸಿ ದಾವಣಗೆರೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.