78 ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ

| Published : Sep 26 2024, 10:06 AM IST

ಸಾರಾಂಶ

ಭದ್ರಾ ಉಪಕಣಿವೆ ಯೋಜನೆಯ 3 ನೇ ಹಂತದ ಯೋಜನೆ, ಟೆಂಡರ್ ಹಂತದಲ್ಲಿದ್ದು ಎಲ್ಲ ಕೆರೆಗಳ ಅಭಿವೃದ್ಧಿಪಡಿಸಿ, ನೀರು ತುಂಬಿಸುವ ಕಾಮಗಾರಿ ಮೂಲಕ ಈ ಭಾಗದ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ಭದ್ರಾ ಉಪಕಣಿವೆ ಯೋಜನೆಯ 3 ನೇ ಹಂತದ ಯೋಜನೆ, ಟೆಂಡರ್ ಹಂತದಲ್ಲಿದ್ದು ಎಲ್ಲ ಕೆರೆಗಳ ಅಭಿವೃದ್ಧಿಪಡಿಸಿ, ನೀರು ತುಂಬಿಸುವ ಕಾಮಗಾರಿ ಮೂಲಕ ಈ ಭಾಗದ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಅವರು ಭದ್ರಾ ಉಪಕಣಿವೆ ಯೋಜನೆಯ 2ನೇ ಹಂತದ ₹382 ಕೋಟಿ ವೆಚ್ಚದಲ್ಲಿ 78 ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಕ್ಷೇತ್ರದ ಮಲ್ಲಾಘಟ್ಟ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಶಿರಾ ಭಾಗಕ್ಕೆ ಹೋಗುವ ಚಾನೆಲ್ ನಲ್ಲಿ ನಮ್ಮ ಕ್ಷೇತ್ರದ 32 ಕೆರೆ ತುಂಬುವ ಅವಕಾಶ ಸಿಕ್ಕಿದೆ. ಸದರಿ ಯೋಜನೆಗೆ ಕೇಂದ್ರ ಸರ್ಕಾರವು ಅನುದಾನ ನೀಡದಿದ್ದರೂ ಸಿದ್ದರಾಮಯ್ಯನವರು ಮತ್ತು ಡಿಕೆ. ಶಿವಕುಮಾರ್ ಹಣ ನೀಡುವ ಮುಖೇನ ಕಾಮಗಾರಿ ಚುರುಕುಗೊಂಡಿದೆ ಎಂದರು.

ನಮ್ಮ ಹಕ್ಕಾಗಿರುವ 1.45 ಟಿಎಂಸಿ ನೀರಿನ ಹೆಬ್ಬೆ ಯೋಜನೆ ಕಾರ್ಯ ಸಾಧುವಲ್ಲ ಎಂದು ಯೋಜನೆ ಕೈ ಬಿಡಲಾಗಿತ್ತು. ಆದರೆ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭದ್ರಾ ಉಪ ಕಣಿವೆ ಯೋಜನೆಗೆ ಒಪ್ಪಿಗೆ ನೀಡಿದ್ದರು. ಬೊಮ್ಮಾಯಿ ಅವರ ಸರ್ಕಾರದಲ್ಲಿ ಯೋಜನೆಗೆ ತರೀಕೆರೆ ಚಿಕ್ಕಮಗಳೂರು ಸೇರಿಸಿ 1.45 ಟಿಎಂಸಿ ನೀರು ನೀಡಿದ್ದರು ಎಂದು ತಿಳಿಸಿದರು.

4 ಹಂತದ ₹1281 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿ, ಇದೀಗ ಎರಡನೇ ಹಂತದ ಕಾಮಗಾರಿ ಆರಂಭವಾಗುತ್ತಿದೆ. ಈ ಯೋಜನೆಯನ್ನು ನಬಾರ್ಡ್ ಗೆ ಸೇರಿಸಲಾಗುತ್ತಿದ್ದು, ಶೀಘ್ರದಲ್ಲಿ ₹400 ಕೋಟಿ ಅನುದಾನ ಸಿಗಲಿದೆ. ನಾನು ಶಾಸಕನಾದ 15 ತಿಂಗಳಲ್ಲಿ ಮಧ್ಯೆ ಮೂರು ಅಧಿವೇಶನದಲ್ಲೂ ನೀರಾವರಿ ಯೋಜನೆಗಳ ಬಗ್ಗೆ ಗಮನ ಸೆಳೆದಿದ್ದೆ. ಆಗ ಡಿ.ಕೆ ಶಿವಕುಮಾರ್ ನಮ್ಮ ಭಾಗದ 118 ಕೆರೆಗಳಿಗೆ ಎರಡು ಹಂತದಲ್ಲಿ ನೀರು ಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ದೊಡ್ಡಘಟ್ಟದಿಂದ ಡೆಲಿವರಿ ಚೇಂಬರ್ ಮೂಲಕ ಸಿಂಗಟಗೆರೆ ಮತ್ತು ತಿಮ್ಮಾಪುರದಿಂದ ಹಿರೇನಲ್ಲೂರು ಭಾಗದವರೆಗೂ ಪೈಪ್ ಲೈನ್ ಮೂಲಕ ನೀರು ಹರಿಯಲಿದೆ. ಅಲ್ಲಿಂದ ಬೈಪಾಸ್ ರಸ್ತೆಯಿಂದ ವಿಷ್ಣುಸಮುದ್ರ ಕೆರೆಗೆ ಹರಿಸಿ, ಮಲ್ಲಾಘಟ್ಟ, ಮತ್ತಿಘಟ್ಟ ಭಾಗದ ಕೆರೆಗಳಿಗೆ ವರ್ಷದ 4 ತಿಂಗಳು ನೀರು ಬರಲಿದೆ ಎಂದು ಭರವಸೆ ನೀಡಿದರು.

ಶರತ್ ಯಾದವೇಂದ್ರರವರ ರೈತ ಮುಖಂಡರೊಂದಿಗಿನ ಹೋರಾಟ ಸಮಿತಿ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಎತ್ತಿನಹೊಳೆ ಯೋಜನೆಯಲ್ಲಿ ಪ್ರಥಮ ಪಾಲುದಾರರೇ ನಾವು. ನಮ್ಮ ವಿಷ್ಣುಸಮುದ್ರ ಕೆರೆಗೆ ನಿಗದಿ ಮಾಡಿರುವ 0.14 ಟಿಎಂಸಿ ನೀರಿನಲ್ಲಿ ಪಂಚನಹಳ್ಳಿ- ಸಿಂಗಟಗೆರೆ ಹೋಬಳಿ, ಕಡೂರು ಮತ್ತು ಬೀರೂರಿಗೆ ಕುಡಿವ ನೀರು ಸಿಗಲಿದೆ ಎಂದರು.

ನೀರಾವರಿ ವಿಚಾರದಲ್ಲಿ ನಮಗೆ ಜಾತಿ, ಪಕ್ಷ ಇಲ್ಲ. ಸಾಮಾನ್ಯ ರೈತನ ಮಗನಾಗಿ, ಶಾಸಕನಾಗಿ ಬೆಳೆಯಲು ರೈತರ ಆಶೀರ್ವಾದವೇ ಕಾರಣ ಎಂದರು.

ವಿಶ್ವೇಶ್ವರಯ್ಯ ಜಲನಿಗಮದ ಎಇಇ ಹರ್ಷ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು 2ನೇ ಹಂತದ ಕಾಮಗಾರಿಗೆ ಶಾಸಕರಾದ ಕೆ.ಎಸ್ ಆನಂದ್ ರವರು ಭೂಮಿ ಪೂಜೆ ನೆರವೇರಿಸಿದ್ದು, 2021ರಲ್ಲಿ ಯೋಜನೆಗೆ ₹1281 ಕೋಟಿ ಮಂಜೂರಾಗಿ 4 ಹಂತಗಳಲ್ಲಿ 197 ಕೆರೆ ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.

2021ರ ಮೊದಲ ಹಂತದ ಟೆಂಡರ್ ನಲ್ಲಿ ಶೇ 80 ಕಾಮಗಾರಿ ಮುಗಿದಿದೆ. 2ನೇ ಹಂತದ ಕಾಮಗಾರಿಗೆ 2023ರಲ್ಲಿ ಟೆಂಡರ್ ಆಗಿದ್ದು, ಈ ಭಾಗದ 78 ಕೆರೆ ತುಂಬಿಸಲು ದೊಡ್ಡಘಟ್ಟದ ಡೆಲಿವರಿ ಚೇಂಬರ್ ನಿಂದ ಬಾಣವಾರದ ತನಕ ಪೈಪ್ ಲೈನ್ ನಿಂದ ನೀರು ಕೊಡಲಾಗುವುದು. ಅದರಲ್ಲಿ ತಂಗಲಿ, ಮಚ್ಚೇರಿ, ಮತ್ತಿಘಟ್ಟ, ವಿಷ್ಣು ಸಮುದ್ರ ಮತ್ತು ಮಲ್ಲಾಘಟ್ಟ ಸೇರ್ಪಡೆಯಾಗಿದೆ ಎಂದು ಮಾಹಿತಿ ನೀಡಿದರು.

ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಎಂ ಆರ್‌ಟಿ ಸುರೇಶ್ ಮಾತನಾಡಿ, ಶಾಸಕರು ನೀರಾವರಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದು, ರೈತರು ಸಹಕರಿಸಿದರೆ ಬೇಗನೆ ನಮ್ಮ ಕೆರೆಗಳು ನೀರು ಕಾಣುತ್ತವೆ. ಇದರಿಂದ ಬೋರ್ ವೆಲ್ ಗಳ ಅಂತರ್ಜಲ ಅಭಿವೃದ್ಧಿಯಾಗುತ್ತದೆ ಹಾಗಾಗಿ ರೈತರು ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಿಮ್ಲಾಪುರ ಗ್ರಾ.ಪಂ. ಸದಸ್ಯ ದಿನೇಶ್,

ಮಾಜಿ ಗ್ರಾ. ಪಂ.ಅಧ್ಯಕ್ಷ ಮಲ್ಲಾಘಟ್ಟ ಆನಂದಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಸತೀಶ್ ನಾಯ್ಕ, ಸಂತೋಷ್ , ಲೀಲಾವತಿ, ನಿರಂಜನ ಮೂರ್ತಿ, ತಿಪ್ಪೇಶ್, ಅಣ್ಣಪ್ಪ ನಾಯ್ಕ, ತಮ್ಮಯ್ಯ, ಪಂಚಾಕ್ಷರಯ್ಯ, ಶಶಿಧರ ದಿನೇಶ್, ಶರತ್ ಯಾದವೇಂದ್ರ, ಶಿವು, ಎಇಇ ತ್ಯಾಗರಾಜು ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.