ಹವ್ಯಕ ಮಹಾಸಭೆಯ ಮಹಿಳಾ ವೇದಿಕೆ ಉದ್ಘಾಟನಾ ಸಮಾರಂಭಕನ್ನಡಪ್ರಭ ವಾರ್ತೆ ಶಿರಸಿ
ಅಖಿಲ ಹವ್ಯಕ ಮಹಾಸಭೆಯ ವತಿಯಿಂದ ಡಿ. 20ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹವ್ಯಕ ಮಹಿಳಾ ಸಮಾವೇಶ ಆಯೋಜಿಸಲಾಗಿದ್ದು, ಮಹಾಸಭೆಯ 83ನೇ ವರ್ಷದ ಸಂಭ್ರಮದ ಅಂಗವಾಗಿ ದೇಶ-ವಿದೇಶಗಳಲ್ಲಿ ಒಟ್ಟು 83 ಹವ್ಯಕ ಮಹಿಳಾ ವೇದಿಕೆಗಳನ್ನು ಸ್ಥಾಪಿಸಲಾಗುವುದು ಎಂದು ಮಹಾಸಭೆಯ ಅಧ್ಯಕ್ಷ, ಖ್ಯಾತ ವೈದ್ಯ ಡಾ. ಗಿರಿಧರ ಕಜೆ ತಿಳಿಸಿದರು.ನಗರದ ಪೂಗಭವನದಲ್ಲಿ ಭಾನುವಾರ ಹವ್ಯಕ ಮಹಾಸಭೆಯ ಮಹಿಳಾ ವೇದಿಕೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾಸಭೆಯ 83ನೇ ವರ್ಷದ ಅಂಗವಾಗಿ 83 ಮಹಿಳಾ ವೇದಿಕೆಗಳನ್ನು ಆರಂಭಿಸಲಾಗುತ್ತಿದೆ. ಅವುಗಳಲ್ಲಿ ಎಂಟು ವಿದೇಶಗಳಲ್ಲಿ, ಎಂಟು ಹೊರರಾಜ್ಯಗಳಲ್ಲಿ ಹಾಗೂ ಉಳಿದವು ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾರ್ಯಾರಂಭ ಮಾಡಲಿವೆ. ಈಗಾಗಲೇ 18 ಪ್ರಾಂತ್ಯಗಳ ಮಹಿಳಾ ವೇದಿಕೆಗಳು ಉದ್ಘಾಟನೆಗೊಂಡಿವೆ. ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶಗಳಿಗೆ ಆದ್ಯತೆ ನೀಡಿ ಮುಂದಿನ ಎರಡು ತಿಂಗಳೊಳಗೆ ಉಳಿದ ಎಲ್ಲ ವೇದಿಕೆಗಳನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.ಹವ್ಯಕ ಸಮಾಜ ಸಂಸ್ಕೃತಿ, ಸಂಸ್ಕಾರ ಮತ್ತು ಶ್ರೇಷ್ಠ ಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿಯನ್ನು ಎಲ್ಲರೂ ಹೊತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಹವ್ಯಕ ಮಹಿಳೆಯರು ದೀಪದ ಕೆಳಗಿನ ಬೆಳಕಾಗದೆ, ಸಮಾಜವನ್ನು ಬೆಳಗಿಸುವ ಶಕ್ತಿಯಾಗಬೇಕು. ಅವರ ಪ್ರತಿಭೆ ಹಾಗೂ ಹವ್ಯಕತನಕ್ಕೆ ಸಮಾಜದಲ್ಲಿ ಸೂಕ್ತ ಗೌರವ ದೊರೆತಾಗ ಸಮಾಜ ಮತ್ತಷ್ಟು ಪ್ರಜ್ವಲಿಸುತ್ತದೆ. ನವೆಂಬರ್ 15ರಂದು ಬೆಂಗಳೂರಿನಲ್ಲಿ ಶಂಕರೋತ್ಸವ ಕೂಡ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಉಪನ್ಯಾಸಕಿ ವಿಜಯನಳಿನಿ ರಮೇಶ್ ಮಾತನಾಡಿ, ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕು ಎಂದರು.
ಕೇಂದ್ರ ಹವ್ಯಕ ಮಹಿಳಾ ವೇದಿಕೆಯ ಸಂಚಾಲಕಿ ಮಧುರಾ ಗಾಂವಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭ ಹವ್ಯಕ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 17 ಪ್ರತಿಭಾವಂತರಿಗೆ ಹವ್ಯಕ ಪಲ್ಲವ ಪುರಸ್ಕಾರ ಪ್ರದಾನ ಮಾಡಲಾಯಿತು.
ಬಿಂದು ಹೆಗಡೆ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರೇಖಾ ಸತೀಶ ಭಟ್ಟ ಸ್ವಾಗತಿಸಿದರು. ಭವ್ಯಾ ಹಳೆಯೂರು ನಿರ್ವಹಿಸಿದರು. ಗಾಯತ್ರಿ ರಾಘವೇಂದ್ರ ವಂದಿಸಿದರು. ಈ ವೇಳೆ ಮಹಾಸಭೆಯ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಕಾರ್ಯದರ್ಶಿ ಆದಿತ್ಯ ಕಲಗಾರು, ನಿರ್ದೇಶಕರಾದ ಶಶಾಂಕ್ ಹೆಗಡೆ ಶೀಗೇಹಳ್ಳಿ ಹಾಗೂ ಜಿ.ಎಂ. ಭಟ್ಟ ಕಾಜಿನಮನೆ ಸೇರಿ ಹಲವರಿದ್ದರು.