5ಎ ನಾಲೆಗೆ 992 ಕೋಟಿ: ಕೊಟ್ಟ ಮಾತು ಉಳಿಸಿಕೊಂಡ ಸರ್ಕಾರ

| Published : Feb 19 2024, 01:30 AM IST

ಸಾರಾಂಶ

ಕೃಷ್ಣಾ ನದಿ ನೀರಾವರಿ ಯೋಜನೆಯಿಂದ ವಂಚಿತಗೊಂಡಿದ್ದ ಜಿಲ್ಲೆಯ ಲಿಂಗಸುಗೂರು, ಮಸ್ಕಿ, ಮಾನ್ವಿ ತಾಲೂಕಿನ ಹಳ್ಳಿಗಳಿಗೆ ನಾರಾಯಣಪುರ ಬಲದಂಡೆ ಯೋಜನೆ 5ಎ ನಾಲೆಗೆ ಸರ್ಕಾರ ಬಜೆಟ್‌ನಲ್ಲಿ 992 ಕೋಟಿ ರು. ಅನುದಾನ ಒದಗಿಸುವ ಮೂಲಕ ಈ ಭಾಗದ ರೈತರಿಗೆ ಕೊಟ್ಟ ಮಾತು ಸರ್ಕಾರ ನೆರವೇರಿಸಿದ್ದು, ರೈತರಲ್ಲಿ ಹರ್ಷ ತಂದಿದೆ

ಲಿಂಗಸುಗೂರು: ಕೃಷ್ಣಾ ನದಿ ನೀರಾವರಿ ಯೋಜನೆಯಿಂದ ವಂಚಿತಗೊಂಡಿದ್ದ ಜಿಲ್ಲೆಯ ಲಿಂಗಸುಗೂರು, ಮಸ್ಕಿ, ಮಾನ್ವಿ ತಾಲೂಕಿನ ಹಳ್ಳಿಗಳಿಗೆ ನಾರಾಯಣಪುರ ಬಲದಂಡೆ ಯೋಜನೆ 5ಎ ನಾಲೆಗೆ ಸರ್ಕಾರ ಬಜೆಟ್‌ನಲ್ಲಿ 992 ಕೋಟಿ ರು. ಅನುದಾನ ಒದಗಿಸುವ ಮೂಲಕ ಈ ಭಾಗದ ರೈತರಿಗೆ ಕೊಟ್ಟ ಮಾತು ಸರ್ಕಾರ ನೆರವೇರಿಸಿದ್ದು, ರೈತರಲ್ಲಿ ಹರ್ಷ ತಂದಿದೆ ಎಂದು 5ಎ ನಾಲೆ ಸಂಯುಕ್ತ ಹೋರಾಟ ವೇದಿಕೆ ಸಂಚಾಲಕ ಆರ್.ಮಾನಸಯ್ಯ ಹರ್ಷ ವ್ಯಕ್ತಪಡಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಲಿಂಗಸುಗೂರು, ಮಸ್ಕಿ ಹಾಗೂ ಮಾನವಿ ತಾಲೂಕಿನ 58 ಗ್ರಾಮಗಳ 72000 ಹೆಕ್ಟೇರ್ ಭೂಮಿ ನೀರಾವರಿಯಿಂದ ವಂಚಿತಗೊಂಡಿತ್ತು. ನೀರಾವರಿ ಜಾರಿಗೊಳಿಸಲು ಆಗ್ರಹಿಸಿ ಸಹಸ್ರಾರು ರೈತರು ಹಲವು ವರ್ಷಗಳ ಕಾಲ ಹೋರಾಟ ನಡೆಸಿದರೂ ಬಿಜೆಪಿ ಆಡಳಿತ ಸಂದರ್ಭದಲ್ಲಿ ನಾಲೆ ಜಾರಿ ಅಸಾಧ್ಯ ಎಂದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ನಡೆದುಕೊಂಡಿದ್ದರು. ಆದರೂ ಛಲ ಬಿಡದೇ ನಿರಂತರ ಹೋರಾಟ ಮಾಡಿದಾಗ, ಹೋರಾಟದ ಸ್ಥಳಕ್ಕೆ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎನ್.ಎಸ್.ಬೋಸರಾಜು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾಲೆ ನಿರ್ಮಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ 2024-25ನೇ ಸಾಲಿನ ಬಜೆಟ್ನಲ್ಲಿ 5ಎ ನಾಲೆಗೆ 992 ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ಈ ಭಾಗದ ರೈತರ ಬದುಕು ಹಸಿರಾಗುವಂತೆ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ನಾಲೆ: 5ಎ ನಾಲೆ ಕಾಮಗಾರಿ ಕಾರ್ಯಾರಂಭಗೊಂಡು ತ್ವರಿತ ಗತಿಯಲ್ಲಿ ಮುಗಿದರೆ 5ಎ ನಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲೆ ಎಂದು ನಾಮಕರಣ ಮಾಡಬೇಕೆಂದು ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಎನ್ಆಬಿಆರ್‌ಸಿ 5ಎ ನಾಲೆ ಸಂಯುಕ್ತ ಹೋರಾಟ ವೇದಿಕೆ ಸಂಚಾಲಕ ಆರ್. ಮಾನಸಯ್ಯ ಆಗ್ರಹಿಸಿದ್ದಾರೆ.