ಮಗುವಿನ ಪೋಷಣೆಗೆ ಸಮತೋಲಿತ ಆಹಾರ ಅತ್ಯಗತ್ಯ

| Published : Sep 26 2024, 09:56 AM IST

ಸಾರಾಂಶ

ಗೌರಿಬಿದನೂರು: ಪೌಷ್ಟಿಕಾಂಶದ ಕೊರತೆ ಹೊರತುಪಡಿಸಿ ಪೂರಕ ಆಹಾರಗಳಿಗಿಂತ ಸಹಜ ಆಹಾರಗಳಿಂದ ಸಿಗುವ ಪೋಷಕಾಂಶಗಳು ಯಾವಾಗಲೂ ಉತ್ತಮವಾಗಿರುತ್ತವೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.

ಗೌರಿಬಿದನೂರು: ಪೌಷ್ಟಿಕಾಂಶದ ಕೊರತೆ ಹೊರತುಪಡಿಸಿ ಪೂರಕ ಆಹಾರಗಳಿಗಿಂತ ಸಹಜ ಆಹಾರಗಳಿಂದ ಸಿಗುವ ಪೋಷಕಾಂಶಗಳು ಯಾವಾಗಲೂ ಉತ್ತಮವಾಗಿರುತ್ತವೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಪಂ ಸಂಯುಕ್ತಾಶ್ರಯದಲ್ಲಿ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯನ್ನು ಶಾಸಕ ಕೆ ಎಚ್ ಪುಟ್ಟಸ್ವಾಮಿಗೌಡ ದೀಪ ಬೆಳಗಿ, ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಶೇಂಗಾ ಚೆಕ್ಕಿ ಹಾಗೂ ಬಾಳೆ ಹಣ್ಣುಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.

ಆಹಾರದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಮಗುವಿನ ಆರೋಗ್ಯ ಪೋಷಣೆಯನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವು ಅತ್ಯಗತ್ಯ. ಮಗುವಿನ ದೇಹವು ಸೂಕ್ಷ್ಮವಾಗಿರುತ್ತದೆ. ಅವರನ್ನು ಶಕ್ತಿಯುತ ಮತ್ತು ಆರೋಗ್ಯಕರವಾಗಿಸಲು ಅವರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವ ಅಗತ್ಯವಿದೆ ಎಂದರು.

ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಶೇಂಗಾ ಚೆಕ್ಕಿ, ಬಾಳೆಹಣ್ಣು ಹಣ್ಣು ವಿತರಿಸಲಾಗುತ್ತದೆ. ಈ ಮೊದಲು ಸರ್ಕಾರ 2 ದಿನ ಮಾತ್ರ ನೀಡುತ್ತಿದ್ದ ಮೊಟ್ಟೆಯನ್ನು ಆಜೀಮ್ ಪ್ರೇಮ್ ಜಿ ಯವರ ಸಹಕಾರದಿಂದ ಇಂದು ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ನೀಡಲಾಗುತ್ತದೆ, ಇದರಿಂದ ಶಾಲೆಯ ಬಡ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೆ ಹೊನ್ನಯ್ಯ ಮಾತನಾಡಿ, ಹಳ್ಳಿಗಳಲ್ಲಿನ ಕೂಲಿ ಕಾರ್ಮಿಕರ ಮಕ್ಕಳಿಗೆ ಈ ಕಾರ್ಯಕ್ರಮದಿಂದ ಬಹಳ ಅನುಕೂಲವಾಗಲಿದೆ. ಹಳ್ಳಿಗಳಲ್ಲಿ ಬಡವರ ಪರಿಸ್ಥಿತಿ ಚಿಂತಾಜನಕವಾಗಿದೆ. ಇಂತಹ ಕೆಲಸಗಳು ಬಡ ಮಕ್ಕಳಿಗೆ ಪ್ರಾಮಾಣಿಕವಾಗಿ ತಲುಪಬೇಕು ಎಂದರು.

ಪೋಷಕರಾಗಿ, ನಿಮ್ಮ ಆದ್ಯತೆಯು ನಿಮ್ಮ ಮಗುವಿನ ಬೆಳವಣಿಗೆಯಾಗಿದೆ . ಅಗತ್ಯ ಪ್ರಮಾಣದಲ್ಲಿ ಸರಿಯಾದ ಆಹಾರವನ್ನು ನೀಡುವುದು ಅತ್ಯಗತ್ಯ. ಹಣ್ಣುಗಳು ಮತ್ತು ತರಕಾರಿಗಳು ಜೀವಸತ್ವಗಳ ಪ್ರಮುಖ ಮೂಲಗಳಾಗಿವೆ. ಸಾಮಾನ್ಯವಾಗಿ, ವಯಸ್ಸಾದವರು ಸಹ ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನುವ ಅಭ್ಯಾಸವನ್ನು ಚಿಕ್ಕ ವಯಸ್ಸಿನಲ್ಲೇ ರೂಢಿಸಿಕೊಳ್ಳಬೇಕು, ಇದರಿಂದ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಪತ್ರಿ, ಬಿಇಒ ಶ್ರೀನಿವಾಸ ಮೂರ್ತಿ, ಪೌರಾಯುಕ್ತೆ ಡಿಎಂ ಗೀತಾ, ನಗರಸಭೆ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಶ್ರೀನಿವಾಸ್ ಗೌಡ ಮತ್ತು ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.