ಸಿಸಿ ಕ್ಯಾಮೆರಾ ತೆರವುಗೊಳಿಸಲು ಆಗ್ರಹ

| Published : Sep 26 2024, 09:56 AM IST

ಸಾರಾಂಶ

. ಪ್ರತಿದಿನ ರೈತರ ಮೊಬೈಲ್ ಗೆ 500 ದಂಡ ಕಟ್ಟುವಂತೆ ಸಂದೇಶ ಬರುತ್ತಿದ್ದು, ಹೀಗೆಯೇ ಪ್ರತಿ ರೈತರಿಗೆ 20 ಸಾವಿರಕ್ಕು ಹೆಚ್ಚು ದಂಡ ಬಂದಿದೆ

ಕನ್ನಡಪ್ರಭ ವಾರ್ತೆ ಬನ್ನೂರುಪಟ್ಟಣದ ವಿವಿಧ ವೃತ್ತದಲ್ಲಿ ಹಾಕಲಾಗಿರುವಂತ ಸಿಸಿ ಕ್ಯಾಮರಾಗಳನ್ನು ತೆರವುಗೊಳಿಸಿ ಹಾಗೂ ಹಾಕಿರುವ ದಂಡವನ್ನು ಮನ್ನಾ ಮಾಡಿ ಎಂದು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದೊಂದಿಗೆ ರೈತ ಪರ ಸಂಘಟನೆ ಸದಸ್ಯರು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಅತ್ತಳ್ಳಿ ದೇವರಾಜು ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.ಮೊದಲು ಟಿ. ನರಸೀಪುರ ರಸ್ತೆ, ಮಳವಳ್ಳಿ ಬನ್ನೂರು ಮೈಸೂರು ರಸ್ತೆಯನ್ನು ಬಂದ್ ಮಾಡಿ, ವಿವಿಧ ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಕುಳಿತು ತಮ್ಮ ಆಕ್ರೋಶವನ್ನು ಹೊರಹಾಕಿದರು. ಹೊಟ್ಟೆಪಾಡಿಗೆ ದುಡಿಯುವ ನಮ್ಮಿಂದ ಕಾಂಗ್ರೆಸ್ ಸರ್ಕಾರ ಹಣ ವಸೂಲಾತಿಗೆ ನಿಂತಿದೆ ಎಂದು ದೂರಿದರು.ರೈತರು ಸೇರಿದಂತೆ, ವಿವಿಧ ಕೆಲಸಗಳಿಗೆ ಓಡಾಡುವಂತ ಸ್ಥಳೀಯರು, ಪ್ರತಿ ನಿತ್ಯ ಗದ್ದೆ, ತೋಟ, ವಿದ್ಯಾರ್ಥಿಗಳನ್ನು ಶಾಲೆಗೆ ಬಿಡಲು, ಶುದ್ದ ಕುಡಿಯುವ ನೀರು ತರಲು, ಮನೆ ಸಾಮನು ಕೊಳ್ಳಲು, ವಿವಿಧ ಉದ್ದೇಶಗಳಿಗೆ ಬರುವಂತ ಜನರ ಪಾಡು, ಸಿಸಿ ಕ್ಯಾಮರಾ ಅಳವಡಿಕೆಯಿಂದ ದುಸ್ಥರವಾಗಿದ್ದು, ಪ್ರತಿ ದಂಡ ಪಾವತಿಸುವಂತಾಗಿದೆ ಎಂದು ಸಾರ್ವಜನಿಕರು ಪ್ರತಿಭಟಿಸಿದರು.ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಅತ್ತಳ್ಳಿ ದೇವರಾಜು ಮಾತನಾಡಿ, ಪ್ರತಿನಿತ್ಯ ರೈತರು ತಮ್ಮ ಜಮೀನುಗಳಿಗೆ ಕೆಲಸ ಕಾರ್ಯಗಳಗೆ ಹೋಗಿಬರಲು, ಜಾನುವಾರುಗಳಿಗೆ ಮೇವು, ರಸಗೊಬ್ಬರ ಹೀಗೆ ವಿವಿಧ ಕಾರಣಗಳಿಗೆ ಹೆಲ್ಮೆಟ್ ಧರಿಸಿಕೊಂಡು ಓಡಾಡಲು ಸಾಧ್ಯವಿಲ್ಲ . ಪ್ರತಿದಿನ ರೈತರ ಮೊಬೈಲ್ ಗೆ 500 ದಂಡ ಕಟ್ಟುವಂತೆ ಸಂದೇಶ ಬರುತ್ತಿದ್ದು, ಹೀಗೆಯೇ ಪ್ರತಿ ರೈತರಿಗೆ 20 ಸಾವಿರಕ್ಕು ಹೆಚ್ಚು ದಂಡ ಬಂದಿದೆ ಎಂದು ತಿಳಿಸಿದರು. ಈ ರೀತಿ ಆದರೆ, ಸಾಲ ಮಾಡಿ ಕೃಷಿ ಮಾಡುವಂತ ರೈತನ ಪಾಡೇನು ಎಂದು ಪ್ರಶ್ನಿಸಿದರು. ಪ್ರಸ್ತುತ ಸರ್ಕಾರ ಭಾಗ್ಯದ ನೆಪದಲ್ಲಿ ರೈತರ ಶೋಷಣೆಗೆ ನಿಂತಿದೆ ಎಂದು ಕಿಡಿಕಾರಿದರು.ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ರಘು , ನರಸೀಪುರ ಸಿಪಿಐ ಧನಂಜಯ ಕುಮಾರ್, ತಹಸೀಲ್ದಾರ್ ಸುರೇಶ್ ಆಚಾರ್, ಬನ್ನೂರು ಸರ್ಕಲ್ ಇನ್ಸ್ಪೆಕ್ಟರ್ ಮನೋಜ್ಕುಮಾರ್, ಸಿಸಿ ಕ್ಯಾಮರಾ ವಿಚಾರವನ್ನು ಎಸ್ಪಿ ಮತ್ತು ಡಿಸಿ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತಂದು ವಾರದೊಳಗೆ ಸಮಸ್ಯೆಯನ್ನು ಪರಿಹರಿಸುವಂತೆ ಭರವಸೆ ನೀಡಿದ ಮೇಲೆ ಪ್ರತಿಭಟನೆ ಅಂತ್ಯ ಕಂಡಿತು.ಜಿಲ್ಲಾ ಉಪಾಧ್ಯಕ್ಷ ನೀಲಕಂಠಪ್ಪ, ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್, ಲಿಂಗಣ್ಣ, ಅರುಣ್ ಕುಮಾರ್, ಸೂರಿ, ನಂಜೇಗೌಡ, ಸಿದ್ದೇಶ್, ಪ್ರದೀಪ್, ಮಂಜುನಾಥ್, ನಾಗೇಶ್, ರಂಗರಾಜು, ಲೋಕೇಶ್, ಶಿವರಾಜು, ಸ್ವಾಮಿ, ಕುಳ್ಳೇಗೌಡ, ಮೋಹನ್ ಕುಮಾರ್, ಮನು ಇದ್ದರು.-------------