ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದೇಶ ನಡೆಸುವ ರಾಜಕಾರಣಿಗಳು ಸೇರಿದಂತೆ ಪ್ರತಿಯೊಂದು ಸಂಘ ಸಂಸ್ಥೆಗಳ ನಡೆಸುವವರನ್ನು ಹಿಡಿದು ಪ್ರತಿಯೊಬ್ಬರಲ್ಲಿ ತಾಯಿತನವಿದ್ದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.ನವನಗರದ ಬಾಪೂಜಿ ಬ್ಯಾಂಕ್ ಕೇಂದ್ರ ಕಚೇರಿಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಜಾಜಿ ಮಲ್ಲಿಗೆ ಕವಿ ಡಾ.ಸತ್ಯಾನಂದ ಪಾತ್ರೋಟ ಅವರ ತಾನು ಕವಿತೆಯಾಗಿ ನನ್ನನ್ನು ಕವಿತೆಯಾಗಿಸಿದಳು ಹಾಗೂ ಬಟಾ ಬಯಲು ಎಂಬ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃತಕ ಸಾಹಿತಿಗಳು ಮತ್ತು ಒಣ ಪ್ರತಿಷ್ಠೆಗೆ ಸಾಹಿತ್ಯವನ್ನು ಬಳಸಿಕೊಳ್ಳವರಲ್ಲಿ ಏನನ್ನು ಕಾಣಲು ಸಾಧ್ಯವಿಲ್ಲ. ಆದರೆ, ಸಹಜತೆಯಿಂದ ಕವಿಯಾದವರಲ್ಲಿ ತಾಯಿತನದ ಹೃದಯ ಇರುತ್ತದೆ. ಒಳ್ಳೆಯ ಗುಣಗಳು ಹಾಗೂ ಸಾರ್ಥಕ ಬದುಕು ಅವರಲ್ಲಿ ಇರುತ್ತದೆ. ಅಂತಹ ಕವಿಗಳ ಕೃತಿಗಳನ್ನು ಪ್ರತಿಯೊಬ್ಬರು ಓದಬೇಕು. ಸತ್ಯಾನಂದ ಪಾತ್ರೋಟಿಯವರು ಒಬ್ಬ ತಾಯಿಯ ಹೃದಯ ಇರುವಂತಹ ಕವಿಯಾಗಿದ್ದಾರೆ. ಅವರ ಕೃತಿಗಳು ಓದುವಂತಹದ್ದು, ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು ಮತ್ತು ಬಟಾ ಬಯಲು ಎರಡೂ ಕೃತಿಗಳು ಪ್ರತಿಯೊಬ್ಬರು ಓದಬೇಕು. ಇದರಿಂದ ಇವರಿಗೆ ಕವಿ ಚಕ್ರವರ್ತಿ ಸ್ಥಾನ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ ಮಾತನಾಡಿ, ಸಂಕಷ್ಟ, ಅವಮಾನ, ಬಡತನ ಹಾಗೂ ಹಸಿವೆಯಿಂದಲೇ ಕವನಗಳು ಹುಟ್ಟಲು ಸಾಧ್ಯ. ಹಸಿವೆಗೆ ಜಾತಿ-ಮತ, ವರ್ಣ ಬೇಧವಿಲ್ಲ. ಅಂತಹ ಹಸಿವೆಯಿಂದಲೇ ನನ್ನ ಈ ಕವನ ಹುಟ್ಟಿಕೊಂಡಿದೆ. ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜಾತಿ ಹಾಗೂ ಧರ್ಮ ಸೇರಿಕೊಂಡು ಮೊದಲಿನ ಸಾಮರಸ್ಯದ ಬದುಕು ಹಾಳಾಗುತ್ತಿದೆ. ಜಾತಿ ಹಾಗೂ ಧರ್ಮವನ್ನು ಬಿಟ್ಟು ಮನುಷ್ಯನನ್ನು ಪ್ರೀತಿಸಬೇಕು ಎಂದರು.ಎಲ್ಲ ಮಕ್ಕಳಿಗೂ ಅವರ ತಾಯಂದಿರೇ ಕವಯಿತ್ರಿಗಳು. ನಾನು ಈ ಕೃತಿ ಪ್ರಾರಂಭಿಸಿದಾಗ ರಾಜ್ಯದ 55 ಜನ ಖ್ಯಾತ ಸಾಹಿತಿಗಾರರು, ಕವಿಗಳು ಹಾಗೂ ಸಂಗೀತ ನಿರ್ದೇಶಕರು ತಮ್ಮ ತಾಯಿಗಳ ಕುರಿತು ಕವಿತೆಗಳನ್ನು ಕಳುಹಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಇದೊಂದು ಹೊಸ ಪ್ರಯೋಗ ಎಂದರು.
ನನಗೆ ಜೀವ ಕೊಟ್ಟವಳು ಒಬ್ಬ ತಾಯಿಯಾಗಿರದಬಹುದು. ಆದರೆ, ತುತ್ತು ಕೊಟ್ಟು ನಾನು ಇಲ್ಲಿಯವರೆಗೆ ಸಾಧನೆ ಮಾಡಲು ಒಟ್ಟು 6 ಜನ ಮಹಿಳೆಯರು ಕಾರಣಿಕೃತರಾಗಿದ್ದರು. ಈ ಎಲ್ಲರೂ ನನಗೆ ತಾಯಂದಿರ ಸಮಾನರಾದ ಕಾರಣ ನನಗೆ ಒಟ್ಟು 6 ತಾಯಂದಿರು ಎಂದರು.ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಲಲಿತಾ ಹೊಸಪ್ಯಾಟಿ ಮಾತನಾಡಿ, ಸತ್ಯಾನಂದ ಪಾತ್ರೋಟ ಅವರು ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕವಿ. ಸತ್ಯಾನಂದ ಪಾತ್ರೋಟ ಅವರ ಹೆಸರೇ ಸತ್ಯದ ಪ್ರತೀಕ. ಅವರ ಹಾಗೆಯೇ ಅವರ ಕವಿತೆಗಳಲ್ಲಿ ಪದಗಳನ್ನು ಹೆಣೆಯಲಾಗಿದೆ. ಕವಿ ಹಾಗೂ ಕವಿತೆಗೆ ಎಂದಿಗೂ ಸಾವಿಲ್ಲ ಎಂದು ತಿಳಿಸಿದರು.ಎಲ್ಲ ತಾಯಿ ಕೂಡ ತನ್ನ ಮಕ್ಕಳನ್ನು ಪ್ರೀತಿಸುತ್ತಾಳೆ. ಆ ತಾಯಿಯನ್ನು ಮಗುವಾಗಿ ಪ್ರೀತಿಸುವ ಗುಣ ಎಲ್ಲ ಮಕ್ಕಳಲ್ಲಿ ಬರಲು ಸಾಧ್ಯವಿಲ್ಲ. ತಾಯಿಯನ್ನು ಮಗುವಾಗಿ ಪ್ರೀತಿಸಿದವರೆಲ್ಲ ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು ಎಂಬ ಕೃತಿಯನ್ನು ತಾಯಿಯ ಬಗ್ಗೆ ಪದ್ಯಗಳನ್ನು ಬರೆದಿದ್ದಾರೆ ಎಂದರು.ಉಮಾ ಎಸ್.ಆರ್.ಪಾಟೀಲ ಹಾಗೂ ಶಕುಂತಲಾ ಬಿ.ಕೆ.ಹಿರೇಮಠ ಅವರು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಇಳಕಲ್ಲನ ಚಿತ್ತರಗಿ ಸಂಸ್ಥಾನ ಮಠದ ಡಾ.ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಸ್.ಆರ್.ಪಾಟೀಲ, ಬೀಳಗಿಯ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎನ್.ಪಾಟೀಲ, ಸುರೇಶಗೌಡ ಪಾಟೀಲ, ಪ್ರವೇಶ ಪಾತ್ರೋಟ, ಮಲ್ಲಮ್ಮ ಪಾಟೀಲ, ಅಶ್ವಿನಿ ಪಾತ್ರೋಟ, ಶೋಭಾ ಕಲಬುರ್ಗಿ, ಬಾಗಿರಥಿ ಪಾಟೀಲ, ಸಕುಂತಲಾ ಕಂಕಣಮೇಲಿ, ಜ್ಯೋತಿ ಕವಳ್ಳಿ ಹಾಗೂ ಸಮತಾ ಪಾತ್ರೋ ಸೇರಿದಂತೆ ಇತರರಿದ್ದರು.