ಮರಿಯಮ್ಮನಹಳ್ಳಿ: ಭಗವಂತ ಸೃಷ್ಟಿ ಮಾಡಿದ ದೇಶ ಭಾರತ. ಇದು ಕೇವಲ ಮಾತೃಭೂಮಿಯಲ್ಲ, ಪುಣ್ಯಭೂಮಿ, ತ್ಯಾಗಭೂಮಿ, ಕರ್ಮಭೂಮಿ ಸೇರಿದಂತೆ ಅನೇಕ ರೀತಿಯಲ್ಲಿ ಕರೆಯುತ್ತೇವೆ. ರಾಮಾಯಣ, ಮಹಾಭಾರತ ನಡೆದಿರುವುದರಿಂದ ಮತ್ತು ಅನೇಕ ಸಾಧು, ಸಂತರು, ಸತ್ಪುರುಷರು ವಾಸವಾಗಿರುವುದರಿಂದ ಈ ದೇಶಕ್ಕೆ ಸಾವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹಕಾರ್ಯದರ್ಶಿ ಹುಬ್ಬಳ್ಳಿಯ ವಿನಾಯಕ ತಳಗೇರಿ ಹೇಳಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಸೋಮವಾರ ಸಂಜೆ ನಡೆದ ಮರಿಯಮ್ಮನಹಳ್ಳಿ ಹೋಬಳಿಯ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು.

ನಮ್ಮ ಮನೆಗಳು ದೇವಾಲಯಗಳಾಗಬೇಕು. ಮನೆಯಲ್ಲಿ ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ ಶಾಲೆಗೆ ಹೋಗುವದನ್ನು ಕಲಿಸಬೇಕಾಗಿದೆ. ಅವರು ಚಿಕ್ಕವರಿದ್ದಾಗಲೇ ಉತ್ತಮ ಸಂಸ್ಕಾರ ಕಲಿಸಬೇಕು. ಪ್ರತಿಯೊಬ್ಬರು ಸಾಮರಸ್ಯ ಜೀವನ ಸಾಗಿಸಬೇಕು. ಮತಾಂತರ, ಗೋಹತ್ಯೆ, ಲವ್ ಜಿಹಾದ್‌ ತಡೆಯಬೇಕು. ಈ ಎಲ್ಲ ಸವಾಲುಗಳೊಂದಿಗೆ ಹಿಂದೂಗಳೆಲ್ಲರೂ ಒಂದಾಗಿ ಸಮಾಜದ ಶಕ್ತಿಯಾಗಬೇಕಾಗಿದೆ ಎಂದು ಹೇಳಿದರು.

ಜಿ. ನಾಗಲಾಪುರ ಗುರು ಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನಪ್ರಭು ಮಹಾಸ್ವಾಮೀಜಿ ಮಾತನಾಡಿ, ಹಿಂದೂ ಸನಾತನ ಧರ್ಮವಾಗಿದ್ದು, ಈ ಜಗತ್ತಿನಲ್ಲಿ ಜೀವ ಇರುವ ಪ್ರತಿ ವಸ್ತುವನಲ್ಲಿಯೂ ದೇವರು ಇದ್ದಾನೆ. ಇಂಥ ದೇವರ ನಾಡಾಗಿರುವ ಭಾರತಕ್ಕೆ ಯಾವುದೇ ಭಯವಿಲ್ಲ. ಇನ್ನೂ 100 ವರ್ಷ ಆದರೂ ದೇಶದಲ್ಲಿರುವ ಹಿಂದೂ ಧರ್ಮವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಹಿಂಧೂ ಶಕ್ತಿಯನ್ನು ತೋರಿಸುವಂತಹ ಇಂಥ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದರು.

ಹಿಂದೂ ಸಮಾವೇಶ ಸಮಿತಿ ಅಧ್ಯಕ್ಷ ಡಾ. ಜಿ.ಎಂ. ಸೋಮೇಶ್ವರ, ಮರಿಯಮ್ಮನಹಳ್ಳಿಯ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದರು.


ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಲಾವಿದೆ ಮಾತಾ ಮಂಜಮ್ಮ ಜೋಗತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ಡಾ. ಕೆ. ನಾಗರತ್ನಮ್ಮ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವೈದ್ಯ ಡಾ. ಬಿ. ಅಂಬಣ್ಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹನುಮನಹಳ್ಳಿ ದುರುರ್ಗೇಶ ಪ್ರಾರ್ಥಿಸಿದರು. ಹಿಂದೂ ಸಮಾವೇಶ ಸಮಿತಿಯ ಮುಖಂಡ ಚಿದ್ರಿ ಸತೀಶ್‌ ಸ್ವಾಗತಿಸಿದರು. ಎಂ. ಬದ್ರಿನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಚಿಡಿ ಕೊಟ್ರೇಶ್‌ ಸನ್ಮಾನಿತರ ಪರಿಚಯ ಓದಿದರು.

ನಂದಿಬಂಡಿ ಸೋಮಪ್ಪ ಉಪ್ಪಾರ ವಂದಿಸಿದರು. ಡಿ. ರಾಘವೇಂದ್ರ ಶೆಟ್ಟಿ ನಿರೂಪಿಸಿದರು. ಕಲಾವಿದ ಮಹಾಂತೇಶ ನೆಲ್ಲುಕುದುರೆ ಅವರ ತಂಡದಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಮತ್ತು ಸ್ಥಳೀಯ ಕಲಾವಿದರಿಂದ ಭರತ್ಯನಾಟ್ಯ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.