ಸಾರಾಂಶ
ಚರ್ಚ್‌ಗಳಲ್ಲಿ ಏಸುವಿನ ಹುಟ್ಟು, ಪವಾಡ ಸಾರುವ ಗೋದಲಿ, ಸಂತಾಕ್ಲಾಸ್, ಕ್ರಿಸ್‌ಮಸ್ ಟ್ರೀ ಗಮನ ಸೆಳೆದವು. ಇವುಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹುಬ್ಬಳ್ಳಿ:
ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತ್‌ನ ಜನ್ಮದಿನದ ಅಂಗವಾಗಿ ನಗರದೆಲ್ಲೆಡೆ ಬುಧವಾರ ಸಡಗರ, ಸಂಭ್ರಮದಿಂದ ಕ್ರಿಸ್‌ಮಸ್ ಆಚರಿಸಲಾಯಿತು. ಬಹುತೇಕ ಎಲ್ಲ ಚರ್ಚ್‌ಗಳಲ್ಲಿ ಯೇಸುವಿನ ಸಾಮೂಹಿಕ ಆರಾಧನೆ ನಡೆಯಿತು. ಎಲ್ಲ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿತು.ಮಂಗಳವಾರ ರಾತ್ರಿ ಮಕ್ಕಳ ಕ್ರಿಸ್‌ಮಸ್ ಆಚರಣೆ ಮಾಡಲಾಗಿದ್ದು, ಕೇಶ್ವಾಪುರ, ಘಂಟಿಕೇರಿ, ಕೇಶ್ವಾಪುರದ ಸೇಂಟ್ ಜೋಸೆಫ್ ಕ್ಯಾಥೋಲಿಕ್ ಚರ್ಚ್, ಶಾಂತಿನಗರದ ಇನ್‌ಪ್ಯಾಂಟ್ ಜೀಸಸ್ ಚರ್ಚ್, ಉಣಕಲ್ಲ ಬಳಿಯ ಮುಲ್ಲರ್ ಮೆಮೋರಿಯಲ್ ಚರ್ಚ್, ಕಾರವಾರ ರಸ್ತೆಯ ಮೈಯರ್ ಮೆಮೋರಿಯಲ್ ಚರ್ಚ್, ಘಂಟಿಕೇರಿಯ ಯೇಶುನಾಮ ಮಹಾದೇವಾಲಯ, ಗದಗ ರಸ್ತೆಯ ಸೇಂಟ್ ಫೀಟರ್ ಚರ್ಚ್ ಸೇರಿದಂತೆ ನಗರದ ಎಲ್ಲ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಕ್ರಿಶ್ಚಿಯನ್ನರು ಮನೆ-ಮನೆಗಳಲ್ಲಿ ತಯಾರಿಸಿದ್ದ ವಿಶೇಷ ಸಿಹಿ ತಿನಿಸನ್ನು ವಿನಿಮಯ ಮಾಡಿಕೊಂಡರು. ಪರಸ್ಪರ ಕ್ರಿಸ್‌ಮಸ್ ಹಬ್ಬದ ಶುಭ ಕೋರಿ ಸಂಭ್ರಮಿಸಿದರು. ಚರ್ಚ್‌ಗಳಲ್ಲಿ ಏಸುವಿನ ಹುಟ್ಟು, ಪವಾಡ ಸಾರುವ ಗೋದಲಿ, ಸಂತಾಕ್ಲಾಸ್, ಕ್ರಿಸ್‌ಮಸ್ ಟ್ರೀ ಗಮನ ಸೆಳೆದವು. ಇವುಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಏಸುವಿನ ಸಂದೇಶ, ಆಜ್ಞೆ ಪಾಲಿಸಿ ಜೀವನ ಸುಧಾರಣೆ ಮಾಡಿಕೊಳ್ಳಬೇಕು ಎನ್ನುವ ಮುಖ್ಯ ಸಂದೇಶ ಎಲ್ಲ ಚರ್ಚ್‌ಗಳಲ್ಲಿ ಸಾರಲಾಯಿತು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ ಬಾಂಧವರು ತಮ್ಮ ಮನೆಗಳನ್ನು ವಿದ್ಯುದ್ದೀಪಾಲಂಕರಿಂದ ಸಿಂಗರಿಸಿದ್ದರು. ಮನೆಯ ಮುಂಭಾಗದಲ್ಲಿ ಆಕಾಶಬುಟ್ಟಿ ಕಟ್ಟಿದ್ದು ವಿಶೇಷವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ
ಹಬ್ಬದ ಅಂಗವಾಗಿ ಹೊಸ ಬಟ್ಟೆಗಳನ್ನು ಧರಿಸಿದ್ದ ಮಕ್ಕಳು, ಚರ್ಚ್ ಆವರಣದಲ್ಲಿ ಸಂಭ್ರಮಿಸಿದರು. ಪರಸ್ಪರ ಕೇಕ್ ಹಾಗೂ ಉಡುಗೊರೆ ನೀಡುವ ಮೂಲಕ ಶುಭಾಶಯ ಕೋರಿದರು. ಸಂಜೆ ಚರ್ಚ್‌ಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯುವಲ್ಲಿ ಯಶಸ್ವಿಯಾದವು.