ಮೂರ್ನಾಡಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

| Published : Nov 13 2025, 01:30 AM IST

ಸಾರಾಂಶ

ಮೂರ್ನಾಡುವಿನಲ್ಲಿ ಕನ್ನಡ ರಾಜ್ಯೋತ್ಸವ ಕನ್ನಡ ಹಬ್ಬ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು, ಮೂರ್ನಾಡು ಹೋಬಳಿ ಘಟಕ, ಮೂರ್ನಾಡು ಗ್ರಾಮ ಪಂಚಾಯಿತಿ, ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೂರ್ನಾಡುವಿನಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕನ್ನಡ ಹಬ್ಬ ಸಂಭ್ರಮದಿಂದ ನಡೆಯಿತು.

ಕನ್ನಡ ಹಬ್ಬದ ಪ್ರಯುಕ್ತ ಮೂರ್ನಾಡುವಿನ ಪಿಎಂ ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮೈದಾನ ಬಳಿಯಿಂದ ಕೊಂಡಂಗೇರಿ ವೃತ್ತದವರೆಗೆ ಕನ್ನಡಾಂಬೆಯ ಭಾವಚಿತ್ರವನ್ನೊಳಗೊಂಡ ಮೆರವಣಿಗೆ ನಡೆಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿ.ದೀರ್ಘಕೇಶಿ ಶಿವಣ್ಣ ಮೆರವಣಿಗೆಯನ್ನು ಉದ್ಘಾಟಿಸಿದರು. ಡೊಳ್ಳು ಕುಣಿತ, ಬೊಂಬೆ ಕುಣಿತ ಸೇರಿದಂತೆ ಮೂರ್ನಾಡು ಹೋಬಳಿಯ ವಿವಿಧ ಶಾಲಾ-ಕಾಲೇಜುಗಳ ಮಕ್ಕಳು, ಸಂಘ ಸಂಸ್ಥೆಗಳು, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್‌ಸಿಸಿ ತಂಡ, ಸೇರಿದಂತೆ ನೂರಾರು ಕನ್ನಡ ಅಭಿಮಾನಿಗಳು, ಸಾಹಿತ್ಯ ಪರಿಷತ್ತು ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಸಭಾ ಕಾರ್ಯಕ್ರಮ

ಮೆರವಣಿಗೆಯ ಬಳಿಕ ಪಿ.ಎಂ.ಶ್ರೀ ಶಾಲಾ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು, ಮೂರ್ನಾಡುವಿನಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಲಂಕಾರ ನೋಡಿ ಸಮ್ಮೇಳನದಂತೆ ಭಾಸವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನವಂಬರ್ ತಿಂಗಳಿನಲ್ಲಿ ಕನ್ನಡ ಬೆಳವಣಿಗೆಗಾಗಿ ಮಾಡುತ್ತಿರುವ ಈ ಕಾರ್ಯಕ್ರಮ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು ಪ್ರತಿದಿನ ಕನ್ನಡ ನಮ್ಮ ಮನದಲ್ಲಿ ಹಚ್ಚ ಹಸಿರಾಗಿರಬೇಕು ಎಂದು ಕರೆ ನೀಡಿದರು.ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡುವುದು ಸುಲಭ. ಆದರೆ ಯಾವುದೇ ಅನುದಾನವಿಲ್ಲದೆ ಹೋಬಳಿ ಘಟಕದಲ್ಲಿ ಒಬ್ಬ ಮಹಿಳಾ ಮಣಿ ಅಧ್ಯಕ್ಷತೆಯಲ್ಲಿ ಇಷ್ಟು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಕಾರ್ಯಕ್ರಮ ಮಾಡುವುದು ಬಹಳ ಮೆಚ್ಚುಗೆಯ ವಿಷಯ ಎಂದರು.ಕನ್ನಡಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮ ಹೀಗೆ ಮುಂದುವರೆಯಲಿ ಹಾಗೂ ಮಕ್ಕಳಿಗೂ ಕನ್ನಡದ ಅಭಿಮಾನ ಮೂಡಲಿ ಎಂದು ಹಾರೈಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ದೀರ್ಘಕೇಶಿ ಶಿವಣ್ಣನವರು ಮಾತನಾಡಿ ಮೂರ್ನಾಡುವಿನಲ್ಲಿ ಈಗಾಗಲೇ ಅದ್ದೂರಿಯಾಗಿ ಕ ಸಾ ಪ ಜಿಲ್ಲಾ ಮಟ್ಟದ ಸಮ್ಮೇಳನ ನಡೆದಿದ್ದು ತುಂಬಾ ವರ್ಷದ ನಂತರ ಈರಮಂಡ ಹರಿಣಿ ವಿಜಯ್ ರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವದ ಅದ್ದೂರಿ ಕಾರ್ಯಕ್ರಮ ಬಹಳ ಮೆಚ್ಚುಗೆಯ ವಿಚಾರ, ಆದರೆ ಮುಂಬರುವ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹೋಬಳಿ ಘಟಕದವರಿಗೂ ಅನುದಾನ ದೊರಕಲಿ ಎಂದು ಹೇಳಿದರು.ನಾಡ ಧ್ವಜರೋಹಣ ನೆರವೇರಿಸಿ, ಪ್ರಾಸ್ತವಿಕ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಕನ್ನಡ ಸಾಹಿತ್ಯ ಪರಿಷತ್ ಹಲವಾರು ಕಾರ್ಯಕ್ರಮಗಳ ಮೂಲಕ ಕನ್ನಡ ಹಬ್ಬವನ್ನು ನಿರಂತರವಾಗಿ ಆಚರಿಸುತ್ತಾ ಬರುತ್ತಿದ್ದು, ಕನ್ನಡ ನಾಡು ನುಡಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದರು. ಕನ್ನಡ ಬೆಳವಣಿಗೆಗಾಗಿ ಪ್ರತಿ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಇಂತಹ ಕಾರ್ಯಕ್ರಮ ನಡೆಯಬೇಕು. ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದು ಎಂಬ ಸೂಚನೆಯಿಂದ, ಕನ್ನಡದ ಕಾರ್ಯಕ್ರಮ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಹಾಗಾಗಿ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಯುವ ಕನ್ನಡದ ಬೆಳವಣಿಗೆಯ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡಲು ಅವಕಾಶ ಮಾಡಿಕೊಡುವಂತೆ ಶಾಸಕರಲ್ಲಿ ಇದೇ ಸಂದರ್ಭ ಮನವಿ ಮಾಡಿದರು. ಮಾನವ ಹಕ್ಕುಗಳ ಆಯೋಗದ ರಾಜ್ಯಾಧ್ಯಕ್ಷ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ, ಇಂದು ಇಂಗ್ಲೀಷನ್ನೇ ಹೆಚ್ಚು ಬಳಸುವಂತಹ ಸಂದರ್ಭದಲ್ಲಿ ಕನ್ನಡಕ್ಕಾಗಿ ಈ ರೀತಿಯ ಕಾರ್ಯಕ್ರಮಗಳು ಆಯೋಜನೆಗೊಂಡಿರುವುದು ಶ್ಲಾಘನೀಯ. ಇದು ಮಕ್ಕಳಲ್ಲಿ ಕನ್ನಡದ ಅಭಿಮಾನ ಹೆಚ್ಚಿಸುವಂತೆ ಮಾಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಎಂಇಎಸ್ ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ಎಸ್.ಡಿ.ಪ್ರಶಾಂತ್ ಮಾತನಾಡಿ, ಕನ್ನಡ ರಾಜ್ಯೋತ್ಸವದ ಇತಿಹಾಸದ ಬಗ್ಗೆ ಮನಮುಟ್ಟುವಂತೆ ತಿಳಿಸಿದರು.

ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಬೇಕು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್, ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು. ಕನ್ನಡವನ್ನು ಬೆಳೆಸಲು ಸಾಕಷ್ಟು ಆಡೆ ತಡೆಗಳು ಬಂದರೂ ವಿಚಲಿತರಾಗದೆ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುನ್ನುಗ್ಗಬೇಕು ಎಂದರು.ಹೋಬಳಿ ಘಟಕದಲ್ಲಿ ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಲು ಸಹಕಾರ ನೀಡಿದ ದಾನಿಗಳು ಹಾಗೂ ಕನ್ನಡ ಅಭಿಮಾನಿಗಳಿಗೆ ಧನ್ಯವಾದಗಳು ಅರ್ಪಿಸಿ, ಕನ್ನಡವನ್ನು ಉಳಿಸಿ ಬೆಳೆಸಲು ಸಹಕರಿಸುವಂತೆ ಕೋರಿದರು. ವೇದಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರಾದ ಕೊಟ್ಟುಕತ್ತೀರ ಯಶೋಧ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್, ಜಿಲ್ಲಾ ಕಸಾಪದ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಜಿಲ್ಲಾ ಕಸಾಪದ ಕಾರ್ಯದರ್ಶಿ ಪುದಿಯನೆರವನ ರೇವತಿ, ಕೊಡಗು ಪತ್ರಕರ್ತ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ, ಮೂರ್ನಾಡು ಪಂಚಾಯಿತಿಯ ಪಿಡಿಓ ಚಂದ್ರಮೌಳಿ, ಪಿಎಂಶ್ರೀ ಶಾಲೆಯ ಮುಖ್ಯೋಪಾಧ್ಯಾಯನಿ ಪುಷ್ಪವತಿ ಉಪಸ್ಥಿತರಿದ್ದರು. ಶಾಲಾ ಮಕ್ಕಳು ರಾಷ್ಟ್ರಗೀತೆ, ನಾಡಗೀತೆ ಮತ್ತು ರೈತ ಗೀತೆಯನ್ನು ಹಾಡಿದರು. ಸಾಧಕರಿಗೆ ಸನ್ಮಾನ :

ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ, ಸಿನಿಮಾ ನಿರ್ದೇಶಕಿ ಮತ್ತು ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರನ್ನು ಮೂರ್ನಾಡು ಹೋಬಳಿ ಘಟಕದ ಪರವಾಗಿ ಶಾಸಕರು, ಜಿಲ್ಲಾ ಹಾಗೂ ಹೋಬಳಿ ಘಟಕದ ಅಧ್ಯಕ್ಷರು ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶೋಧ ಪ್ರಕಾಶ್, ರಾಷ್ಟ್ರ ಪ್ರಶಸ್ತಿಯನ್ನು ಕನ್ನಡ ಸಿನಿಮಾಕ್ಕೆ ತೆಗೆದುಕೊಂಡು ಇದೀಗ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿದ ಕ್ಷಣ ನನಗೆ ಹೆಮ್ಮೆ ಅನಿಸುತ್ತಿದೆ. ಕನ್ನಡ ಎಂಬುದು ಸರ್ವರಲ್ಲಿ ಉಳಿಯುವಂತಾಗಲಿ ಎಂದು ತಿಳಿಸಿದರು.ಇದೇ ಸಂದರ್ಭ ಮೂರ್ನಾಡು ಹೋಬಳಿ ಘಟಕದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೂರ್ನಾಡು ಹೋಬಳಿ ಘಟಕದ ಕಾರ್ಯಕ್ರಮಗಳ ವಿವರಗಳನ್ನೊಳಗೊಂಡ "ಸ್ಮರ " ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ :

ವಿದುಷಿ ಜಲಜಾ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಞಾನಜೋತಿ, ಮಾರುತಿ, ಎಂಇಎಸ್, ಪದವಿ ಪೂರ್ವ ಕಾಲೇಜು, ಶಾಲಾ ಕಾಲೇಜು, ಗಣಪತಿ ಭಜನಾ ಮಂಡಳಿ ಮರಗೋಡು, ಮಡಿಕೇರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು. ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಕಲಾವಿದರಿಂದ ನಡೆದ ಕನ್ನಡ ರಸಮಂಜರಿ ಕಾರ್ಯಕ್ರಮ ನೆರದಿದ್ದವರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಎಲ್ಲರಿಗೂ ಪ್ರಶಂಸನಾ ಪತ್ರ, ಗೌರವ ನೆನಪಿನ ಕಾಣಿಕೆಯನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಮೂರ್ನಾಡು ಪಂಚಾಯಿತಿ ಮಾಜಿ ಸದಸ್ಯರಾದ ಮಠದ ಮನೆ ಧನಂಜಯ್, ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಮೂರ್ನಾಡು ಕಸಾಪದ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ, ಕೋಶಾಧಿಕಾರಿ ಮಡೆಯಂಡ ಸೂರಜ್, ಸಂಘಟನಾ ಕಾರ್ಯದರ್ಶಿ ಕೊಂಪುಳಿರ ಮಮತಾ, ಅಬ್ದುಲ್ ಖಾದರ್, ಸಹ ಕಾರ್ಯದರ್ಶಿ ಅಪ್ಪಚಂಡ ಸುಚಿತ, ವಿಶೇಷ ಆಹ್ವಾನಿತರಾಗಿ ಪುದಿಯೊಕ್ಕಡ ರಮೇಶ್, ಮುಂಡಂಡ ವಿಜು, ಗ್ರಾಮ ಲೆಕ್ಕಾಧಿಕಾರಿ ಅಕ್ಷತಾ ಶೆಟ್ಟಿ, ತೇಲಪಂಡ ಗುಲ್ಸ್ನ್ ಹಾಗೂ ಎಲ್ಲಾ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕಿ ಕಲ್ಪನಾ ಸಾಮ್ರಾಟ್, ಶಿಕ್ಷಕ ರಾಜೇಶ್, ಮುನೀರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಿಕ್ಷಕಿ ಮಂಗಳ, ಮಹಿಳಾ ಪ್ರತಿನಿಧಿ ಮೀನಾಕ್ಷಿ ಕೇಶವ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಊಟೋಪಚಾರ ವ್ಯವಸ್ಥೆಯನ್ನು ಮಾಡಲಾಗಿತ್ತು.