ರೋಟರಿ ವುಡ್ಸ್ ನಿಂದ ಕನ್ನಡ ರಾಜ್ಯೋತ್ಸವದ ಸಂಭ್ರಮ

| Published : Nov 13 2025, 01:30 AM IST

ಸಾರಾಂಶ

ಸಾರ್ಥಕ ಬದುಕಿನ ಮುಖ್ಯ ಸಾರವಾಗಿರುವ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿಶ್ವದಲ್ಲಿಯೇ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಹಿರಿಯ ಸಾಹಿತಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾಥ೯ಕ ಬದುಕಿನ ಮುಖ್ಯ ಸಾರವಾಗಿರುವ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿಶ್ವದಲ್ಲಿಯೇ ರೋಟರಿ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ಹಿರಿಯ ಸಾಹಿತಿ, ಕಲಾವಿದ ಸುಬ್ರಾಯ ಸಂಪಾಜೆ ಶ್ಲಾಘಿಸಿದ್ದಾರೆ.

ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ವತಿಯಿಂದ ಆಯೋಜಿತ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಸುಬ್ರಾಯ ಸಂಪಾಜೆ, ಎಷ್ಟೇ ಹಣ ಸಂಪಾದಿಸಿದರೂ ಅಂತಿಮವಾಗಿ ಯಾರಿಗೆ ನಾವು ನೆರವಾಗಿದ್ದೇವೆ ಎಂಬುದರ ಮೇಲೆ, ಯಾರ ಸೇವೆಗಾಗಿ ನಾವು ಶ್ರಮವಹಿಸಿದ್ದೇವೆ ಎಂಬುದನ್ನು ಆಧರಿಸಿ ಜೀವನ ಸಾರ್ಥಕತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ಅಗತ್ಯವಿದ್ದವರಿಗ ಸ್ವಂತ ಹಣ ಕ್ರೋಡೀಕರಿಸಿ ಸಹಾಯ ಮಾಡುತ್ತಾ ಬಂದಿರುವ ರೋಟರಿ ಸಂಸ್ಥೆಯ ಸದಸ್ಯರ ಕೊಡುಗೆ ಅಭಿನಂದನಾಹ೯ ಎಂದರು.ಮಡಿಕೇರಿ ಸಕಾ೯ರಿ ಜೂನಿಯರ್ ಕಾಲೇಜಿನ ಕನ್ನಡ ಶಿಕ್ಷಕಿ ಕೆ.ಬಿ. ಗೌರಿ ಮಾತನಾಡಿ, ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಾದ ಕನ್ನಡದಲ್ಲಿಯೇ ಕಲಿಸಲು ಮುಂದಾದಲ್ಲಿ ಎಲ್ಲರಲ್ಲಿಯೂ ಕನ್ನಡ ಎಂಬುದು ಹೃದಯದ ಭಾಷೆಯಾದೀತು ಎಂದು ಹೇಳಿದರು. ನವಂಬರ್ ತಿಂಗಳಿಗೆ ಮಾತ್ರ ಕನ್ನಡ ಭಾಷಾ ಪ್ರೇಮ ಸೀಮಿತವಾಗಬಾರದು ಎಂದೂ ಗೌರಿ ಅಭಿಪ್ರಾಯಪಟ್ಟರು.ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ವಿಶ್ವದಲ್ಲಿ ಯಾವುದೇ ಭಾಷೆ ಲಿಪಿ ಹೊಂದಿದ್ದರೆ ಅದು ಎಂದೆಂದೂ ನಶಿಸುವುದಿಲ್ಲ. ಹೀಗಾಗಿ ಲಿಪಿ ಹೊಂದಿರುವ ಕನ್ನಡ ಭಾಷೆಗೆ ನಶಿಸುವ ಆತಂಕ ಇಲ್ಲ. ಕನ್ನಡ ಭಾಷೆ ದಿನದಿನಕ್ಕೂ ಹೆಚ್ಚಿನ ಆಕರ್ಷಣೆಯನ್ನು ಸಾಂಸ್ಕೃತಿಕವಾಗಿಯೂ ಕಂಡುಕೊಳ್ಳುತ್ತಾ ಬಂದಿದೆ. ಕಾಂತಾರದಂಥ ಕನ್ನಡ ಮಣ್ಣಿನ ಸಂಸ್ಕೖತಿ ಬಿಂಬಿಸುವ ಚಿತ್ರವೊಂದು ಕನ್ನಡ ಭಾಷೆಯನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಗೊಳಿಸಿದೆ. ಇಂಥ ಸಾಂಸ್ಕೃತಿಕ ಪ್ರಯತ್ನಗಳು ಹೆಚ್ಚಾಗುತ್ತಿರಬೇಕೆಂದು ಹೇಳಿದರು.ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಕನ್ನಡ ರಾಜ್ಯ ಉದಯಿಸಿ 70 ವರ್ಷಗಳಾದ ಸಂಭ್ರಮವನ್ನು ರೋಟರಿ ಸಂಸ್ಥೆಯು ಕನ್ನಡದಲ್ಲಿನ ಸಾಧಕರಿಗೆ ಸನ್ಮಾನ ಮಾಡುವ ಮೂಲಕ ವಿನೂತನವಾಗಿ ಆಚರಿಸುತ್ತಿದೆ. ಕನ್ನಡತನ ಎಲ್ಲರ ಮನದಲ್ಲಿಯೂ ಸದಾ ಇರಬೇಕು ಎಂದು ಹೇಳಿದರು.

ರೋಟರಿ ವಲಯ ಸೇನಾನಿ ಕಾರ್ಯಪ್ಪ, ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ವೇದಿಕೆಯಲ್ಲಿದ್ದರು. ರೋಟರಿ ವುಡ್ಸ್ ನಿರ್ದೇಶಕ ಪಿ.ರವಿ ಕನ್ನಡ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸುಬ್ರಾಯ ಸಂಪಾಜೆ ಮತ್ತು ಗೌರಿ ಅವರನ್ನು ರೋಟರಿ ವುಡ್ಸ್ ಪರವಾಗಿ ರೋಟರಿಯಲ್ಲಿ 45 ವರ್ಷಗಳ ಸುದೀರ್ಘ ಕಾಲ ಸದಸ್ಯರಾಗಿರುವ ಮಿತ್ತೂರು ಈಶ್ವರ ಭಟ್ ಸನ್ಮಾನಿಸಿ ಗೌರವಿಸಿದರು. ನಿರ್ದೇಶಕ ಕೆ. ವಸಂತ್ ಕುಮಾರ್ ನಿರೂಪಿಸಿದರು.