ಎಸ್.ಡಿ.ಎಂ. ಕಾಲೇಜಿನಲ್ಲಿ ನಾಳೆಯಿಂದ ಮೂರು ದಿನ ಕ್ರೀಡಾಹಬ್ಬ: ಕೃಷ್ಣಮೂರ್ತಿ ಭಟ್

| Published : Nov 13 2025, 01:30 AM IST

ಎಸ್.ಡಿ.ಎಂ. ಕಾಲೇಜಿನಲ್ಲಿ ನಾಳೆಯಿಂದ ಮೂರು ದಿನ ಕ್ರೀಡಾಹಬ್ಬ: ಕೃಷ್ಣಮೂರ್ತಿ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಎಂಪಿಇ ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನ. 15ರಿಂದ 17ರವರೆಗೆ ವಿಶ್ವವಿದ್ಯಾಲಯ ಮಟ್ಟದ 72ನೇ ಅಥ್ಲೇಟಿಕ್ ಕ್ರೀಡಾಕೂಟ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ಪಟ್ಟಣದ ಎಂಪಿಇ ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನ. 15ರಿಂದ 17ರವರೆಗೆ ವಿಶ್ವವಿದ್ಯಾಲಯ ಮಟ್ಟದ 72ನೇ ಅಥ್ಲೇಟಿಕ್ ಕ್ರೀಡಾಕೂಟ ನಡೆಯಲಿದೆ ಎಂದು ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹುಬ್ಬಳ್ಳಿ-ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಪದವಿ ಕಾಲೇಜಿನ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಕ್ರೀಡಾ ಕ್ಷೇತ್ರದಲ್ಲಿಯೂ ಎಸ್.ಡಿ.ಎಂ. ಕಾಲೇಜು ದೊಡ್ಡ ಹೆಸರನ್ನು ಮಾಡಿದೆ. ಇದುವರೆಗೆ 3 ಬಾರಿ ವಿ.ವಿ. ಮಟ್ಟದಲ್ಲಿ ಚಾಂಪಿಯನ್ ಆದ ಹೆಗ್ಗಳಿಕೆ ನಮ್ಮದಾಗಿದೆ. ಈ ಹಿಂದೆ 2018ರಲ್ಲಿ ನಮ್ಮ ಕಾಲೇಜು ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಅದಾದ ಬಳಿಕ 2ನೇ ಬಾರಿಗೆ ನಮ್ಮ ಕಾಲೇಜು ಆತಿಥ್ಯವನ್ನು ವಹಿಸುತ್ತಿದೆ. 3 ದಿನಗಳ ಕಾಲ ನಮ್ಮಲ್ಲಿ ಕ್ರೀಡಾ ಹಬ್ಬ ನಡೆಯಲಿದೆ ಎಂದು ನೀಡಿದರು.

ಜಂಟಿ ಕಾರ್ಯದರ್ಶಿ ಜಿ.ಪಿ. ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿಯೇ ಇರುವ ಅತ್ಯತ್ತಮ ಕ್ರೀಡಾಂಗಣದಲ್ಲಿ ನಮ್ಮದು ಒಂದು. ವಿವಿಯೇ ಈ ಕ್ರೀಡಾಂಗಣವನ್ನು ಅತ್ಯಂತ ಬೆಸ್ಟ್ ಎಂದು ಹೇಳಿದೆ. ಅಲ್ಲದೆ ತಾಂತ್ರಿಕವಾಗಿ ಈ ಕ್ರೀಡಾಂಗಣ ಯಾವ ದೋಷ ಹೊಂದಿಲ್ಲ. ಈ ಕ್ರೀಡಾಕೂಟವನ್ನು ಆಯೋಜಿಸಲು ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಚಾರ. ಕೇವಲ ವಿಶ್ವವಿದ್ಯಾಲಯ ಮಾತ್ರ ಈ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿತ್ತು. ನಮಗೆ ಇದು 2 ನೇ ಬಾರಿಗೆ ಆಯೋಜಿಸಲು ಅವಕಾಶ ಸಿಕ್ಕಿದೆ ಎಂದು ಹೇಳಿದರು.

ಕ್ರೀಡಾಕೂಟದ ಉದ್ಘಾಟನೆ ಮತ್ತು ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ನೇರವೇರಿಸುವರು. ಶಾಸಕ ದಿನಕರ ಶೆಟ್ಟಿ ಟ್ರೋಫಿ ಅನಾವರಣ ಮಾಡುವರು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎಂ. ಖಾನ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಕರಿಮುನ್ನಿಸ್ಸಾ ಸೈಯದ್, ಅರಣ್ಯಇಲಾಖೆಯ ಉಪ ಸಂರಕ್ಷಣಾಧಿಕಾರಿ ಯೋಗಿಶ ಸಿ.ಕೆ., ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಉಡುಪಿಯ ಸಹಾಯಕ ಅಧಿಕಾರಿ ವಸಂತ ಜೋಗಿ ಆಗಮಿಸುವರು. ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ, ಕವಿವಿ ಧಾರವಾಡ ಕ್ರೀಡಾವಿಭಾಗದ ಡೀನ್ ಹಾಗೂ ನಿರ್ದೇಶಕರಾದ ಡಾ. ಅರವಿಂದ ಕರಿಬಸವನ ಗೌಡ್ರ ಹಾಗೂ ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ.ಎಲ್. ಹೆಬ್ಬಾರ ಉಪಸ್ಥಿತರಿರುವರು.

ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಅಂತರಾಷ್ಟ್ರೀಯ ಕ್ರೀಡಾಪಟು ಸಹನಾಕುಮಾರಿ, ಉದ್ಯಮಿಗಳಾದ ಆನಂದ ಭಟ್ಟ, ಖಲೀಲ್ ಶೇಖ್, ವಲ್ಕಿ ಹಾಗೂ ರಾಜೇಶ ವಿ. ಭಂಡಾರಿ ಪಾಲ್ಗೊಳ್ಳುವರು.

ನ.೧೭ರಂದು ಕ್ರೀಡಾಕೂಟದ ಸಮಾರೋಪ ಸಮಾರಂಭ ಜರುಗಲಿದ್ದು, ಕವಿವಿ ಧಾರವಾಡದ ಕುಲಸಚಿವ (ಆಡಳಿತ) ಡಾ. ಶಂಕರ ವನಕ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬಹುಮಾನ ವಿತರಕರಾಗಿ ಮಾಜಿ ಶಾಸಕ ಸುನೀಲ್ ನಾಯ್ಕ, ಹೊಸಾಕುಳಿ ಗ್ರಾಪಂ ಅಧ್ಯಕ್ಷ ಸುರೇಶ ಶೆಟ್ಟಿ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಡಿವೈಎಸ್ಪಿ ಮಂಜುನಾಥಗೌಡ, ತಹಶೀಲ್ದಾರ ಪ್ರವೀಣ ಕರಾಂಡೆ, ನಿವೃತ್ತ ಉಪಕುಲಪತಿ ಡಾ. ಬಿ.ಎಂ. ಪಾಟೀಲ, ರಾಣಿ ಚೆನ್ನಮ್ಮ ವಿವಿಯ ನಿರ್ದೇಶಕರಾದ ಡಾ. ಜಗದೀಶ ಗಸ್ತಿ, ಹೊನ್ನಾವರ ಅರ್ಬನ್ ಬ್ಯಾಂಕ್‌ ಅಧ್ಯಕ್ಷ ರಾಘವ ಬಾಳೇರಿ, ಸೇಫ್ ಸ್ಟಾರ್ ಸಹಕಾರಿ ಸಂಘದ ಅಧ್ಯಕ್ಷ ಜಿ.ಜಿ. ಶಂಕರ ಆಗಮಿಸಲಿರುವರು. ಡಾ. ಅರವಿಂದ ಕರಿಬಸವನ ಗೌಡ್ರ, ಎಂಪಿಇ ಸೊಸೈಟಿ ಉಪಾಧ್ಯಕ್ಷ ನಾಗರಾಜ ಕಾಮತ ಉಪಸ್ಥಿತರಿರುವರು.

ಇದೇ ವೇಳೆ ಕಾಲೇಜಿನ ಅಥ್ಲೇಟಿಕ್ ಕ್ರೀಡಾಕೂಟದ ಕೈಪಿಡಿ ಬಿಡುಗಡೆಗೊಳಿಸಲಾಯಿತು.

ಎಂ.ಪಿ.ಇ. ಸೊಸೈಟಿ ಉಪಾಧ್ಯಕ್ಷ ನಾಗರಾಜ ಕಾಮತ್, ಖಜಾಂಚಿ ಸುರೇಶ್ ಶೇಟ್, ಪ್ರಾಚಾರ್ಯ ಪ್ರೊ. ಡಿ.ಎಲ್. ಹೆಬ್ಬಾರ್, ದೈಹಿಕ ನಿರ್ದೇಶಕ ಆರ್.ಕೆ.ಮೇಸ್ತ, ಐಕ್ಯೂಎಸಿ ಕೋ-ಆರ್ಡಿನೇಟರ್ ಡಾ. ಸುರೇಶ್ ಎಸ್., ಯೂನಿಯನ್ ಉಪಾಧ್ಯಕ್ಷ ಡಾ. ಎಂ.ಜಿ. ಹೆಗಡೆ ಪತ್ರಿಕಾಗೋಷ್ಠಿಯಲ್ಲಿದ್ದರು.