ವೈದ್ಯರ ಎಡವಟ್ಟಿಗೆ ಐದು ತಿಂಗಳ ಮಗು ಸಾವು!

| Published : Feb 04 2025, 12:30 AM IST

ಸಾರಾಂಶ

ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗುವಿನ ತಾಯಿ, ಅಜ್ಜಿ ರೋದಿಸುತ್ತಿರುವುದು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಬೊಮ್ಮಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಎಡವಟ್ಟಿಗೆ ಐದು ತಿಂಗಳ ಗಂಡು ಮಗುವೊಂದು ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಹಂಗಳ ಗ್ರಾಮದ ಆನಂದ್‌, ಶುಭ ಮಾನಸಳ ಐದು ತಿಂಗಳ ಮಗು (ಪ್ರಖ್ಯಾತ್)ವಿಗೆ ಕಿವಿ ಚುಚ್ಚಿಸಲು ಬೊಮ್ಮಲಾಪುರ ಆಸ್ಪತ್ರೆಗೆ ಬುಧವಾರ ಬೆಳಗ್ಗೆ ಬಿ.ಶೆಟ್ಟಹಳ್ಳಿ ಗ್ರಾಮದಿಂದ ಕರೆತಂದಿದ್ದಾರೆ. ಆಸ್ಪತ್ರೆಯ ವೈದ್ಯ ಡಾ.ನಾಗರಾಜು ಮಗುವಿಗೆ ಕಿವಿ ಚುಚ್ಚುವ ಮುಂಚೆ ಎರಡು ಕಿವಿಗೂ ಅನಸ್ತೇಷಿಯ ನೀಡಿದ್ದಾರೆ. ಕೆಲ ಸಮಯದಲ್ಲಿ ಮಗುವಿಗೆ ಪ್ರಜ್ಞೆ ತಪ್ಪಿಸಿ ನಡುಗಲು ಶುರು ಮಾಡಿದೆ ಎನ್ನಲಾಗಿದೆ. ತಕ್ಷಣ ಡಾ.ನಾಗರಾಜು ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಾಗ ಕೂಡಲೇ ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದು ತರುವ ಮಾರ್ಗ ಮಧ್ಯೆ ಮಗು ಪ್ರಾಣ ಬಿಟ್ಟಿದೆ ಎಂದು ಪೋಷಕರು ದೂರಿದ್ದಾರೆ.

ಕುಟುಂಬಸ್ಥರ ಆಕ್ರೋಶ:

ಐದು ತಿಂಗಳ ಮಗು ಸಾವನ್ನಪ್ಪಿದ ವಿಚಾರ ತಿಳಿದು ಮಗುವಿನ ತಂದೆ, ತಾಯಿಯ ಸಂಬಂಧಿಕರು ಹಾಗೂ ಸ್ನೇಹಿತರು ಆಸ್ಪತ್ರೆಗೆ ದೌಡಾಯಿಸಿ, ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಮಗುವಿಗೆ ಲಸಿಕೆ ನೀಡಿದ ವೈದ್ಯರ ಕರೆ ತನ್ನಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಶಗೆ ಆಗ್ರಹಿಸಿದರು.

ಧರ್ಮದೇಟು:

ಪ್ರತಿಭಟನಾಕಾರರ ಆಕ್ರೋಶ ಹಾಗೂ ಆಗ್ರಹಕ್ಕೆ ಮಣಿದ ತಾಲೂಕು ಆರೋಗ್ಯಾಧಿಕಾರಿಗಳು ಬೊಮ್ಮಲಾಪುರ ಪ್ರಾಥಮಿಕ ಆಸ್ಪತ್ರೆಯ ವೈದ್ಯ ಡಾ.ನಾಗರಾಜು ಸ್ಥಳಕ್ಕೆ ಬನ್ನಿ ಎಂದಾಗ ಪೊಲೀಸರೊಂದಿಗೆ ಆಸ್ಪತ್ರೆ ಆವರಣಕ್ಕೆ ಬಂದಾಗ ಆಕ್ರೋಶಗೊಂಡಿದ್ದ ಕೆಲ ಯುವಕರು ಡಾ.ನಾಗರಾಜುಗೆ ಕೆಲ ಧರ್ಮದೇಟು ನೀಡಿದ್ದಾರೆ.

ಆ ವೇಳೆಗೆ ಎಚ್ಚೆತ್ತ ಪೊಲೀಸರು ಆಸ್ಪತ್ರೆಯ ಕೊಠಡಿಗೆ ವೈದ್ಯರನ್ನು ಕರೆದುಕೊಂಡು ಹೋಗಿದ್ದಾರೆ. ಗುಂಡ್ಲುಪೇಟೆ ಪ್ರಭಾರ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿ.ಸಿ.ವನರಾಜು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರು ಹಾಗೂ ವೈದ್ಯರ ನಡುವೆ ಮಾತುಕತೆ ನಡೆಸಿದ್ದಾರೆ. ಪ್ರತಿಭಟನಾಕಾರರು ಹಾಗೂ ಮಗುವಿನ ತಂದೆ ಆನಂದ್‌ ವೈದ್ಯರ ಮೇಲೆ ಕ್ರಮ ತೆಗೆದುಕೊಂಡು ಅಮಾನತು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಲಸಿಕೆ ನೀಡಲು ವೈದ್ಯರು ೨೦೦ ರು.ಲಂಚ ಪಡೆದರು ಎಂದು ಆನಂದ್‌ ಆರೋಪಿಸಿದ್ದಾರೆ.ವೈದ್ಯರು ಮಗುವಿಗೆ ಲೋಕಲ್‌ ಅನಸ್ತೇಷಿಯ ನೀಡಲು ಅವಕಾಶವಿದೆ. ಮಗುವಿನ ಶವ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕ್ರಮ ಆಗಲಿದೆ.

-ಡಾ.ಅಲೀಂ ಪಾಶ, ತಾಲೂಕು ಆರೋಗ್ಯಾಧಿಕಾರಿ

ಮಗುವಿಗೆ ಐದು ತಿಂಗಳು. ಕಿವಿ ಚುಚ್ಚಿಸಲು ಆಸ್ಪತ್ರೆಗೆ ಹೋದಾಗ ವೈದ್ಯ ನಾಗರಾಜು ಅನಸ್ತೇಷಿಯ ಓವರ್‌ ಡೋಸ್‌ ಕೊಟ್ಟ ಬಳಿಕ ಮಗು ನಡುಗಲು ಶುರು ಮಾಡಿ, ಬಾಯಲ್ಲಿ ನೊರೆ ಬಂತು. ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದರು. ಆಸ್ಪತ್ರೆಗೆ ಬರುವ ದಾರಿಯಲ್ಲಿ ಸಾವಾಗಿದೆ.-ಆನಂದ್‌, ಮಗುವಿನ ತಂದೆ, ಹಂಗಳ